ಅರ್ಧಕ್ಕೇ ನಿಂತ ಗಾಂಧಿಭವನ ನಿರ್ಮಾಣ ಕಾಮಗಾರಿ!

KannadaprabhaNewsNetwork |  
Published : Aug 02, 2024, 12:45 AM IST
೧ಕೆಎಲ್‌ಆರ್-೬ಕೋಲಾರದ ಕೋಲಾರಮ್ಮ ಕೆರೆ ಕೋಡಿಯಲ್ಲಿ ಅರ್ಧಕ್ಕೆ ನಿಂತ ಗಾಂಧಿಭವನ ಕಟ್ಟಡದ ಚಿತ್ರ. | Kannada Prabha

ಸಾರಾಂಶ

ಕೆರೆಯ ಕೋಡಿ ಹರಿಯುವ ಜಾಗದಲ್ಲಿ ಗಾಂಧಿ ಭವನ ನಿರ್ಮಾಣ ಮಾಡುವಂತಹ ಅವೈಜ್ಞಾನಿಕ ಕಾಮಗಾರಿಕೆಗೆ ಜಾಗವನ್ನು ಪರಿಶೀಲಿಸದೇ ಅನುಮೋದನೆ ಹೇಗೆ ನೀಡಿದ್ದಾರೆ. ಕನಿಷ್ಠ ಪಕ್ಷ ಟೆಂಡರ್ ಪಡೆದಿರುವಂತ ನಿರ್ಮಿತಿ ಕೇಂದ್ರವಾದರೂ ಜಿಲ್ಲಾಡಳಿತದ ಗಮನಕ್ಕೆ ತಂದಿಯೇ ಇಲ್ಲವೇ ? ಎಂಬುದೇ ನಿಗೂಢವಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರ ಜಿಲ್ಲಾಡಳಿತವೇ ಕಾನೂನು ಸುವ್ಯವಸ್ಥೆಗಳನ್ನು ಉಲ್ಲಂಘಿಸುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದ ಗಾದೆಯಂತೆ ಆಗಿದೆ.

ಸಾರ್ವಜನಿಕರ ಆಸ್ತಿಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೂ ಆ ಆಸ್ತಿಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಅದನ್ನು ಪಡೆಯಬೇಕಾದರೆ ಕೆಲವೊಂದು ಕಾನೂನು ಕಟ್ಟಳೆಗಳನ್ನು ಪಾಲನೆ ಮಾಡಬೇಕಾಗಿರುತ್ತದೆ. ಆದರೆ ಯಾವುದೇ ಕಾನೂನು ಪಾಲನೆ ಮಾಡದೆ ಅವೈಜ್ಞಾನಿಕವಾಗಿ ಸ್ವಾಧೀನಕ್ಕೆ ಪಡೆಯಲು ಮುಂದಾಗುವುದನ್ನು ಕಾನೂನು ಉಲ್ಲಂಘನೆಯೆಂದೇ ಪರಿಗಣಿಸಬೇಕಾಗಿದೆ. ಇಂತಹದೊಂದು ಪ್ರಕರಣವು ನಗರದ ಹೃದಯದ ಭಾಗದಲ್ಲಿ ನಡೆದಿರುವುದು ಜಿಲ್ಲಾಡಳಿತದ ಬೇಜವಾಬ್ದಾರಿ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ನಗರದಿಂದ ಮುಳಬಾಗಿಲು ರಸ್ತೆಗೆ ಹೋಗುವ ಮಾರ್ಗದಲ್ಲಿ ಗಾಂಧಿನಗರ ಸಮೀಪದ ಕೋಲಾರಮ್ಮ ಕೆರೆಯ ಸೇತುವೆ ಕೆಳಭಾಗದ ಕೋಡಿ ಕಾಲುವೆಯಲ್ಲಿ ಜಿಲ್ಲಾಡಳಿತವು ಗಾಂಧಿ ಭವನ ನಿರ್ಮಿಸಲು ಕಳೆದ ೪ ವರ್ಷಗಳ ಹಿಂದೆ ಸುಮಾರು ೩ ಕೋಟಿ ರು. ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಿತ್ತು. ಈ ಕಟ್ಟಡ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿತ್ತು. ನಿರ್ಮಿತಿ ಕೇಂದ್ರವು ಸಹ ಹಿಂದೆ ಮುಂದೆ ನೋಡದೆ ಕಾಮಗಾರಿಯನ್ನು ಪ್ರಾರಂಭಿಸಿಯೇ ಬಿಟ್ಟಿತ್ತು, ಮೊದಲನೇ ಹಂತವಾಗಿ ಪಾಯವನ್ನು ಹಾಕಿ ಪಿಲ್ಲರ್‌ಗಳನ್ನು ಅಳವಡಿಸಿ ಕಾಲಂಗಳನ್ನು ಪ್ರಾರಂಭಿಸುವಾಗಲೇ ಕಾಮಗಾರಿ ಸ್ಥಗಿತಗೊಳಿಸಿ ಸುಮಾರು ೩ ವರ್ಷಗಳು ಕಳೆದಿವೆ. ಜಿಲ್ಲಾಡಳಿತವು ಇದಕ್ಕೆ ಸುಮಾರು ೭೦ ಲಕ್ಷ ರು.ಗಳನ್ನು ಬಿಡುಗಡೆ ಮಾಡಿಕೊಂಡ ನಂತರ ಕಾಮಗಾರಿಯನ್ನು ನಡುನೀರಿನಲ್ಲಿ ಕೈ ಬಿಟ್ಟಿದೆ.

ಕೆರೆಯ ಕೋಡಿ ಹರಿಯುವ ಜಾಗದಲ್ಲಿ ಗಾಂಧಿ ಭವನ ನಿರ್ಮಾಣ ಮಾಡುವಂತಹ ಅವೈಜ್ಞಾನಿಕ ಕಾಮಗಾರಿಕೆಗೆ ಜಾಗವನ್ನು ಪರಿಶೀಲಿಸದೇ ಅನುಮೋದನೆ ಹೇಗೆ ನೀಡಿದ್ದಾರೆ. ಕನಿಷ್ಠ ಪಕ್ಷ ಟೆಂಡರ್ ಪಡೆದಿರುವಂತ ನಿರ್ಮಿತಿ ಕೇಂದ್ರವಾದರೂ ಜಿಲ್ಲಾಡಳಿತದ ಗಮನಕ್ಕೆ ತಂದಿಯೇ ಇಲ್ಲವೇ ? ಎಂಬುದೇ ನಿಗೂಢವಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳೇ ಉಸ್ತುವಾರಿಗಳು ಆಗಿದ್ದು, ಕನಿಷ್ಠ ಕಾಮಗಾರಿಗಳಿಗೆ ಬಿಲ್ ಬಿಡುಗಡೆ ಮಾಡುವ ಸಂದರ್ಭದಲ್ಲಾದರೂ ಪರಿಶೀಲನೆ ನಡೆಸದೇ ೭೦ ಲಕ್ಷ ರು. ಹಣವನ್ನು ಹೇಗೆ ಬಿಡುಗಡೆ ಮಾಡಿದರು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಈ ಸಂಬಂಧವಾಗಿ ನ್ಯಾಯಲಯದಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಹಂತದಲ್ಲಿದೆ, ಆದರೆ ಕೆರೆಕೋಡಿಯಲ್ಲಿ ಗಾಂಧಿಭವನ ನಿರ್ಮಾಣ ಮಾಡಲು ಮುಂದಾಗಿರುವುದ ಕಂಡರೆ ಇದು ಅಭಿವೃದ್ಧಿ ಕಾಮಗಾರಿಯಾಗದೆ, ಹಣವನ್ನು ಲಪಟಾಯಿಸುವ ಯೋಜನೆಯಾಗಿದೆ ಎಂಬುವುದು ಮೇಲ್ನೋಟಕ್ಕೆ ಕಂಡು

ಬರುತ್ತದೆ. ಈಗ ಉಂಟಾಗಿರುವ ಸಾರ್ವಜನಿಕರ ಹಣ ೭೦ ಲಕ್ಷ ರು. ನಷ್ಟಕ್ಕೆ ಹೊಣೆಗಾರರು ಯಾರು? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಕೆರೆಯ ಅಂಗಳದಲ್ಲಿ ದೇವರಾಜ್ ಅರಸ್ ಭವನ, ಕನ್ನಡ ಭವನ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಚೇರಿ, ಸಮೀಪದಲ್ಲಿ ಗೃಹ ರಕ್ಷಕದಳ, ಅಗ್ನಿ ಶಾಮಕ ದಳ ಇವೆಲ್ಲವನ್ನೂ ಕೆರೆಯ ಅಂಗಳದ ಜಾಗದಲ್ಲಿ ನಿರ್ಮಿಸಲಾಗಿದೆ. ಅವುಗಳಿಗೆ ಯಾವುದೇ ಆಕ್ಷೇಪಣೆ ಇರಲಿಲ್ಲ. ಆದರೆ ಗಾಂಧಿ ಭವನವನ್ನು ಮಾತ್ರ ಕೋಲಾರಮ್ಮ ಕೆರೆಕೋಡಿಯ ಬದಿಯ ಕಾಲುವೆಯಲ್ಲಿ ನಿರ್ಮಿಸಲು ಯೋಜನೆ ರೂಪಿಸಿ ಅರ್ಧಕ್ಕೇ ಕೈಬಿಡಲಾಗಿದೆ. ಅದಕ್ಕೆ ಒಂದು ಕಾನೂನು, ಇದಕ್ಕೊಂದು ಕಾನೂನು ಇದೆಯೇ ಎಂಬ ಪ್ರತಿಪಾದನೆಗಳು ಅಧಿಕಾರಿಗಳಿಂದಲೇ ಕೇಳಿ ಬರುತ್ತಿವೆ.

ಗಾಂಧಿ ಭವನ ನಿರ್ಮಾಣಕ್ಕೆ ಜಾಗವನ್ನು ಗುರುತಿಸಿದವರು ಯಾವ ಮಹಾನುಭಾವರೋ, ಅವರಿಗೆ ಗಾಂಧಿಭವನದಲ್ಲಿಯೇ ಸನ್ಮಾನ ಮಾಡಬೇಕು ಎಂಬ ವ್ಯಂಗವಾದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಸಂಬಂಧ ಲೋಕಾಯುಕ್ತ ಅಥವಾ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಯ ಪ್ರಕರಣವೆಂದು ಪರಿಗಣಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!