- ನಗರದ ಸಿಪಿಐ ಕಾರ್ಯಾಲಯದಿಂದ ಪ್ರತಿಭಟನಾ ಮೆರವಣಿಗೆ, ಆಜಾದ್ ಪಾರ್ಕ್ ವೃತ್ತದಲ್ಲಿ ಬಹಿರಂಗ ಸಭೆ,
ಶೈಕ್ಷಣಿಕ ಧನ ಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಚಿಕ್ಕಮಗಳೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಸಿಪಿಐ ಕಾರ್ಯಾಲಯದಿಂದ ಮೆರವಣಿಗೆ ಹೊರಟ ಕಾರ್ಮಿಕರು ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಘು ಮಾತನಾಡಿ, ಕಳೆದ ವರ್ಷ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಕೊನೆ ದಿನ ಅತ್ಯಂತ ಕಡಿಮೆ ಅವಧಿ ಇದ್ದರಿಂದ ಬಹಳಷ್ಟು ವಿದ್ಯಾರ್ಥಿಗಳು ಧನ ಸಹಾಯದಿಂದ ವಂಚಿತರಾದರು ಎಂದು ಹೇಳಿದರು.ಈ ಬಾರಿ ಧನ ಸಹಾಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸರ್ವರ್ ಬಿಜಿ ಹಾಗೂ ಇತರೆ ಕಾರಣಗಳನ್ನು ಮುಂದೆ ಮಾಡಿ ಕೊನೆ ದಿನವನ್ನು ನಿಗದಿಪಡಿಸಬಾರದು ಎಂದು ಆಗ್ರಹಿಸಿದರು.
ಪೆಟ್ರೋಲ್ ಹಾಗೂ ಡಿಸೇಲ್ ದರ ಹೆಚ್ಚಳ ಮಾಡಿರುವುದು ಕಟ್ಟಡ ಕಾರ್ಮಿಕರ ಮೇಲೂ ಪರಿಣಾಮ ಬೀರಲಿದೆ. ಈ ವಿಷಯದಲ್ಲಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಬದಲು ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್‌ಟಿ ಹಣ ಕೊಡಿಸಬೇಕು. ರಾಜ್ಯ ಸರ್ಕಾರ ತೈಲ ಬೆಲೆ ಇಳಿಸಬೇಕೆಂದು ಒತ್ತಾಯಿಸಿದರು.ತಾಲೂಕು ಅಧ್ಯಕ್ಷ ಸಿ.ವಸಂತ್‌ಕುಮಾರ್ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಮಕ್ಕಳಿಗೆ 1 ರಿಂದ 10ನೇ ತರಗತಿವರೆಗೆ ಧನ ಸಹಾಯಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದ್ದರೂ ಸಹ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ಶೈಕ್ಷಣಿಕ ಧನಸಹಾಯ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾದ ಕಾರಣ ಅರ್ಜಿ ಸಲ್ಲಿಸುವ ವೇಳೆ ಸರ್ವರ್ ಸಮಸ್ಯೆಯಿದ್ದು ದಿನಾಂಕ ಮುಂದೂಡಬೇಕು ಎಂದು ಒತ್ತಾಯಿಸಿದರು.
ಕಟ್ಟಡ ಕಾಮಗಾರಿಗಳಲ್ಲಿ ತೊಡಗಿರುವ ಮರಗೆಲಸ, ಪೈಂಟಿಂಗ್, ಎಲೆಕ್ಟ್ರೀಷಿಯನ್, ಗಾರೆಕೆಲಸ ಸೇರಿದಂತೆ ವೃತ್ತಿಯಲ್ಲಿರುವ ಕಾರ್ಮಿಕರಿಗೆ ಕ್ಷೇಮಾಭಿವೃದ್ದಿಗೆ ಮಂಡಳಿ ರಚಿತವಾಗಿದೆ. ಆದರೆ, ಅನಗತ್ಯವಾಗಿ ಪ್ರಚಾರ ಮತ್ತು ರಾಜಕೀಯ ದೃಷ್ಟಿಯಿಂದ ಬೇರೆ ಅನುಪಯುಕ್ತ ಸ್ಕೀಮ್‌ಗಳನ್ನು ರಚಿಸಿ ನಿರ್ವಹಣೆಗಾಗಿ ಖಾಸಗೀ ಕಂಪನಿಗಳಿಗೆ ನೀಡುತ್ತಿದೆ ಎಂದು ಹೇಳಿದರು.ಶೈಕ್ಷಣಿಕ ಧನಸಹಾಯ ಹಿಂದಿನ ಪದ್ಧತಿಯಂತೆ ಮುಂದುವರೆಸಬೇಕು. ಮಂಡಳಿಯ ಹಣವನ್ನು ಕಾರ್ಮಿಕರ ಕಲ್ಯಾಣಕ್ಕೆ ಮಾತ್ರ ವಿನಿಯೋಗಿಸಬೇಕು. ಸರ್ವರ್ ಸಮಸ್ಯೆ ಕೂಡಲೇ ಸರಿಪಡಿಸಬೇಕು ಹಾಗೂ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿ ಸೇರಿದಂತೆ ವಿವಿಧ ಸವಲತ್ತುಗಳನ್ನು ಒದಗಿಸಬೇಕು ಎಂದರು.ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಎ.ಜಯಕುಮಾರ್, ಉಪಾಧ್ಯಕ್ಷರಾದ ಸಿ.ಸಿ.ಮಂಜೇಗೌಡ, ಕುಪ್ಪನ್, ಕಾರ್ಯದರ್ಶಿ ಎಂ.ಎಸ್.ಜಾನಕಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಮಂಜುನಾಥ್, ಧಯಾಕ್ಷಿ, ಶ್ರೀನಿವಾಸ್, ಎ.ಶ್ರೀಧರ್, ಚಂದ್ರಚಾರಿ, ಸುಶೀಲಮ್ಮ ಹಾಗೂ ಕಟ್ಟಡ ಕಾರ್ಮಿಕರು ಹಾಜರಿದ್ದರು.19 ಕೆಸಿಕೆಎಂ 3ಶೈಕ್ಷಣಿಕ ಧನ ಸಹಾಯಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದನ್ನು ವಿಸ್ತರಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಚಿಕ್ಕಮಗಳೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.