ಕಾರ್ಕಳ: ವಿದ್ಯಾರ್ಥಿಗಳು ಸಾಮಾಜಿಕವಾಗಿ ಸಕ್ರಿಯರಾಗಿ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಂಪನಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ನಡುವಿನ ಸೇತುವೆಯಾಗಬೇಕು ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಜಿಲ್ಲೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ, ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗಾಗಿ ‘ವಿಕಾಸ ಪರೀಕ್ಷಾ ಸೇತು’ ಕಾರ್ಯಕ್ರಮ ಆರಂಭಿಸಲಾಗಿದೆ.ಆತ್ಮವಿಶ್ವಾಸ ಮತ್ತು ತಾಳ್ಮೆಯಿಂದ ನಿರಂತರ ಪ್ರಯತ್ನ ಮಾಡಿದರೆ ಯಶಸ್ಸು ಖಚಿತ. ಹಿರಿಯರ ಪರಿಶ್ರಮಕ್ಕೆ ತಕ್ಕ ಪ್ರತಿಫಲವಾಗಿ ಉತ್ತಮ ಉದ್ಯೋಗ ಪಡೆದು, ವಿವಿಧ ಕಂಪನಿಗಳಲ್ಲಿ ಅನುಭವ ಸಂಪಾದಿಸಿ ಜೀವನದಲ್ಲಿ ಮುನ್ನಡೆಯಬೇಕು. ಕಾರ್ಯಕ್ರಮದಲ್ಲಿ 1,600ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದು, 26ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿವೆ ಎಂದರು. ಬೋಳ ಪ್ರಭಾಕರ ಕಾಮತ್ ಮಾತನಾಡಿ, ಯುವಜನರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಬಿಜೆಪಿ ಮುಖಂಡರಾದ ಮಣಿರಾಜ್ ಶೆಟ್ಟಿ, ನವೀನ್ ನಾಯಕ್, ಮಹಾವೀರ ಹೆಗ್ಡೆ, ವಿವಿಧ ಕಂಪನಿಗಳ ನಿರ್ದೇಶಕರಾದ ದಿವಾಕರ್ ಹಾಗೂ ರಾಜೇಶ್ವರಿ, ಉದ್ಯಮಿಗಳಾದ ಗಣೇಶ್ ಕಾಮತ್ ಮತ್ತು ದೇವಿಪ್ರಸಾದ್ ಶೆಟ್ಟಿ ಇದ್ದರು.
ಪ್ರಸಾದ್ ಐಸಿರ್ ಸ್ವಾಗತಿಸಿದರು. ಸುಮಾ ರವಿಕಾಂತ್ ಪ್ರಾರ್ಥಿಸಿದರು. ಕರುಣಾಕರ ಕೋಟ್ಯಾನ್ ನಿರೂಪಿಸಿದರು.