ಕನ್ನಡಪ್ರಭ ವಾರ್ತೆ ವಿಜಯಪುರ

ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎನ್ನುತ್ತಿರುವ ಕಾಂಗ್ರೆಸ್ ಸರ್ಕಾರ ನಾಳೆ ಅಯ್ಯಪ್ಪ ಮಾಲಾಧಾರಿಗಳ ಧಾರ್ಮಿಕ ಮೆರವಣಿಗೆ, ಫಂಡರಪುರಕ್ಕೆ ತೆರಳುವ ವಾರಕರಿಗಳ ಮೆರವಣಿಗೆಗೂ ನಿರ್ಬಂಧ ಹೇರಿದರೂ ಯಾವುದೇ ಅಚ್ಚರಿಯಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ವ್ಯಂಗ್ಯವಾಡಿದ್ದಾರೆ.

ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂಬ ರಾಜ್ಯ ಗೃಹಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ ದೇಶಭಕ್ತರಿಂದ ಕೂಡಿದ ಸಂಘಟನೆ. ಪ್ರತಿಯೊಬ್ಬ ಭಾರತೀಯ ಜಾತಿ ಮತ ಪಂಥಗಳ ಭೇದವಿಲ್ಲದೇ ದೇಶ ಸೇವೆಗಾಗಿ ಒಂದುಗೂಡುತ್ತಾರೆ. ದೇಶಾಭಿಮಾನ ಮೂಡಿಸಲೆಂದು ಆಕರ್ಷಕವಾಗಿ ಪಥ ಸಂಚಲನ ಮಾಡುತ್ತಾರೆ. ಹೀಗಾಗಿ ಈ ಪಥಸಂಚಲನಕ್ಕೆ ಯಾರದ್ದೇ ಅನುಮತಿ ಬೇಕಿಲ್ಲ ಎಂದಿದ್ದಾರೆ.

ಹಿಂದೂ ರಾಷ್ಟ್ರ ನಿರ್ಮಾಣದ ಧ್ಯೇಯ ಇಟ್ಟುಕೊಂಡು ತಾಯಿ ಭಾರತಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆಗೆ ನಿರ್ಬಂಧ ಹೇರಲು ಹೊರಟಿರುವ ಕಾಂಗ್ರೆಸ್ ಸರ್ಕಾರ ನಾಳೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ಪಂಢರಪುರದ ವಾರಕರಿಗಳ ಯಾತ್ರೆಗಳಿಗೂ‌ ನಿರ್ಬಂಧ ಹೇರಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?. ಮುಸ್ಲಿಮರು ಕೈಯಲ್ಲಿ ಬಡಿಗೆ ಮತ್ತಿತರ ಆಯುಧ ಹಿಡಿದು ಮೋಹರಂ ಮೆರವಣಿಗೆ ಮಾಡುವುದಿಲ್ಲವೇ?. ಹರಿತ ಆಯುಧದಿಂದ ಎದೆ ಬಡಿದುಕೊಂಡು ರಕ್ತ ಸುರಿಸುತ್ತಾರಲ್ಲ, ಅದಕ್ಕಿರದ ನಿರ್ಬಂಧ ಶಾಂತಿಯುತವಾಗಿ ಜನಾಕರ್ಷಕವಾಗಿ ನಡೆಯುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಏಕೆ?. ಮೋಹರಂ ಮೆರವಣಿಗೆಯನ್ನು ಅನುಮತಿ ಪಡೆದುಕೊಂಡೇ ನಡೆಸುತ್ತಾರೆಯೇ? ಕಾಂಗ್ರೆಸ್ ಯಾಕೆ ಈ ತಾರತಮ್ಯ ನೀತಿ ಅನುಸರಿಸುತ್ತಿದೆ? ಒಂದು ವರ್ಗದ ಓಲೈಕೆಗಾಗಿ ಇನ್ನೊಂದು ವರ್ಗದ ದಮನ ನೀತಿ ಅನುಸರಿಸುತ್ತಿರುವುದೇಕೆ? ಎಂದವರು ಪ್ರಶ್ನಿಸಿದ್ದಾರೆ.

ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರು ಎಲ್ಲರಿಗೂ ಸಮಾನ ನ್ಯಾಯ ಒದಗಿಸಿದ್ದಾರೆ. ಡಾ.ಅಂಬೇಡ್ಕರ್‌ ಸಂವಿಧಾನದ ಮೇಲೆ ಕಾಂಗ್ರೆಸ್‌ಗೆ ನಂಬಿಕೆ ಇದ್ದರೆ ಎಲ್ಲರಿಗೂ ಸಮಾನ ನ್ಯಾಯ ಮತ್ತು ನೀತಿ ಕಲ್ಪಿಸಲಿ. ಅದನ್ನು ಬಿಟ್ಟು ದೇಶಭಕ್ತರ ಸಂಘಟನೆಗೆ ನಿಷೇಧ ಹೇರುವುದು, ನೋಂದಣಿ ಮಾಡಿಸುವುದು, ಪಥಸಂಚಲನಕ್ಕೆ ನಿರ್ಬಂಧ ಹೇರುವ ನೀತಿ ಕೈಬಿಡಲಿ. ನಿಮಗೆ ತಾಕತ್ ಇದ್ದರೆ ದೇಶದಲ್ಲಿದ್ದುಕೊಂಡೇ ದೇಶದ ಅನ್ನ, ನೀರು, ಗಾಳಿ ಸೇವಿಸಿ ದೇಶದ ಮೇಲೆಯೇ ಬಾಂಬ್ ಎಸೆಯುವ, ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.