ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2 ನಿರ್ಮಾಣ - ಪ್ರಧಾನಿ ಮೋದಿ ಬಳಿ ಸಮಾಲೋಚನೆ ನಡೆಸಿ

KannadaprabhaNewsNetwork |  
Published : Sep 17, 2024, 01:01 AM ISTUpdated : Sep 17, 2024, 12:11 PM IST
ಜಿ.ಎಸ್. ಬಸವರಾಜು | Kannada Prabha

ಸಾರಾಂಶ

ಬೆಂಗಳೂರು-2 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಿನಲ್ಲಿ ನಿರ್ಮಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮಾಜಿ ಸಂಸದ ಜಿ.ಎಸ್. ಬಸವರಾಜು ಸ್ವಾಗತಿಸಿದ್ದಾರೆ.  

 ತುಮಕೂರು :  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2 ನಿರ್ಮಾಣ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಮಾಜಿ ಸಂಸದ ಜಿ.ಎಸ್. ಬಸವರಾಜು ಅವರು ಈ ಸಂಬಂಧ ಪ್ರಧಾನಿ ಬಳಿ ಸಮಾಲೋಚನೆ ನಡೆಸುವಂತೆ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮೂಲಭೂತ ಸೌಕರ್ಯ ಸಚಿವ ಎಂ.ಬಿ.ಪಾಟೀಲ್ ಕೈಗೊಂಡಿರುವ ನಿರ್ಧಾರಕ್ಕೆ ಪೂರಕವಾಗಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಮಂತ್ರಿಗಳು ಹಾಗೂ ಸಂಸದರು ಪಕ್ಷಾತೀತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಬಳಿ ನಿಯೋಗ ಹೋಗಿ ಸಮಾಲೋಚನೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2 ನಿರ್ಮಾಣ ನನ್ನ ಕನಸಾಗಿತ್ತು. ಎಲ್ಲರಿಗಿಂತ ಮೊದಲೇ, ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಿ, ತುಮಕೂರು ಸ್ಥಳ ಗುರುತಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಕಡತದ ಅನುಸರಣೆಯನ್ನು ಮಾಡಲಾಗಿತ್ತು. ಈಗ ಅದರ ಪ್ರತಿಫಲವಾಗಿ ರಾಜ್ಯ ಸರ್ಕಾರ ಚಾಲನೆ ನೀಡಿದೆ.

 ಕೇಂದ್ರ ಸಚಿವರಾದ ವಿ. ಸೋಮಣ್ಣ ಅವರು ಮುಂದುವರೆಸುವ ಆಶಾಭಾವನೆ ಇದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುವಾಗ, ಮಧುಗಿರಿ, ಕೊರಟಗೆರೆ, ಸಿರಾ ಮತ್ತು ತುಮಕೂರು ತಾಲೂಕು ಸಾವಿರಾರು ಎಕರೆ ಜಮೀನು ಈಗಾಗಲೇ ಗುರುತಿಸಿ, ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಕಳುಹಿಸಲು ಕೇಂದ್ರ ಸಚಿವ ವಿ. ಸೋಮಣ್ಣನವರು ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್, ಸಚಿವರಾದ ಕೆ.ಎನ್.ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಸ್ತಾವನೆಗಳಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವೈಮಾನಿಕ ದೂರ ತುಮಕೂರು 80 ಕಿ.ಮೀ,, ದೊಡ್ಡಬಳ್ಳಾಪುರ 46 ಕಿ.ಮೀ., ದಾಬಸ್‌ಪೇಟೆ 50 ಕಿ.ಮೀ. ನೆಲಮಂಗಲ 42 ಕಿ.ಮೀ, ರಾಮನಗರ 64 ಕಿ.ಮೀ. ದೂರವಿದೆ. ಉದ್ದೇಶಿತ ಎಲ್ಲಾ ಪ್ರಸ್ತಾವನೆಗಳ ವೈಮಾನಿಕ ದೂರಕ್ಕಿಂತ, ತುಮಕೂರು ಪ್ರಸ್ತಾವನೆ ದೂರ ಇದ್ದರೂ ರಾಜ್ಯ ಸರ್ಕಾರ ಗುರುತಿಸಿರುವ ಎಲ್ಲಾ ಸ್ಥಳಗಳಿಗಿಂತ ಉತ್ತಮವಾಗಿದೆ. 

ಅಭಿವೃದ್ದಿಯಲ್ಲಿ ಸಾಮಾಜಿಕ ನ್ಯಾಯ ದೊರಕಲಿದೆ. ರಾಜ್ಯದ ಬಹುತೇಕ ಪ್ರದೇಶಗಳಿಗೆ ಅನೂಕೂಲವಾಗಲಿದೆ. ಸರ್ಕಾರಿ ಜಮೀನು ಜಾಸ್ತಿ ಇದೆ, ಉದ್ದೇಶಿತ ಬೇರೆ ಪ್ರಸ್ತಾವನೆಗಳ ಜಮೀನಿಗೆ ಹೋಲಿಸಿದರೆ, ಇಲ್ಲಿ ಜಮೀನು ಬೆಲೆ ಕಡಿಮೆ ಇದೆ. ಕೈಗಾರಿಕಾ ಕ್ರಾಂತಿಗೆ ಪೂರಕವಾಗಲಿದೆ ಎಂದರು.ಹೇಮಾವತಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಉದ್ದೇಶಿತ ಶರಾವತಿ ನೀರಿನ ಯೋಜನೆಯ ವಾಟರ್ ಬ್ಯಾಂಕ್ ಜಾಲಗುಣಿಯ ಬಳಿ ನಿರ್ಮಾಣವಾಗಲಿದೆ. ಈ ಎಲ್ಲಾ ನದಿಗಳ ನೀರನ್ನು ಬಳಸಲು ಅನೂಕೂಲವಾಗಲಿದೆ. ಈ ಪ್ರಸ್ತಾವನೆ ಹಿಂದುಳಿದ ಪ್ರದೇಶವಾಗಿದ್ದು, ಅಭಿವೃದ್ದಿಗೆ ಮುನ್ನುಡಿ ಬರೆಯಲಿದೆ ಎಂದರು.

ಉದ್ದೇಶಿತ ಮಾದವಾರ- ತುಮಕೂರು ಮೆಟ್ರೋ ಮಾರ್ಗವನ್ನು ಮತ್ತು ಉದ್ದೇಶಿತ ಉಪನಗರ ರೈಲ್ವೇ ಮಾರ್ಗವನ್ನು ವಸಂತನರಸಾಪುರದವರೆಗೆ ವಿಸ್ತರಣೆ ಮಾಡಲೇಬೇಕಿದೆ. ಇಂಡಸ್ಟ್ರಿಯಲ್ ನೋಡ್‌ನಲ್ಲಿ ಜಮೀನು ಪಡೆದವರಲ್ಲಿ ಬೆಂಗಳೂರಿನ ಉದ್ಯಮಿಗಳೇ ಜಾಸ್ತಿ ಇದ್ದಾರೆ. ತುಮಕೂರು ಏರ್‌ಪೋರ್ಟ್ ಪ್ರಸ್ತಾವನೆ, ಉದ್ದೇಶಿತ ಬೀದರ್-ಬೆಂಗಳೂರು ಎಕ್ಸ್ಪ್ರೆಸ್ ಹೈವೆಯಿಂದ, ನೇರವಾಗಿ ಬೆಂಗಳೂರು ಬಿಸಿನೆಸ್ ಕಾರಿಡಾರ್‌ಗೆ ಸಂಪರ್ಕವಾಗುವುದರಿಂದ ಬೆಂಗಳೂರು-ತುಮಕೂರು ರಸ್ತೆ ಒತ್ತಡ ಕಡಿಮೆಯಾಗಲಿದೆ. ಈಗಾಗಲೇ ಮೈಸೂರಿನಲ್ಲಿ ಏರ್‌ಪೋರ್ಟ್ ಇರುವುದರಿಂದ, ಬೆಂಗಳೂರು-ಮೈಸೂರು ರಸ್ತೆಯ ಪ್ರಸ್ತಾವನೆ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಸಮ್ಮತವಲ್ಲ. 

ಇಲ್ಲಿನ ಜಮೀನು ಬೆಲೆಯೂ ಅತ್ಯಂತ ದುಬಾರಿಯಾಗಲಿದೆ. ಹಾಗಾಗಿ 19 ಜಿಲ್ಲೆಗಳ ಚುನಾಯಿತ ಜನಪ್ರತಿನಿಧಿಗಳು ಧ್ವನಿ ಎತ್ತಬೇಕಿದೆ. ಯಾವುದೇ ಬೃಹತ್ ವಿಶೇಷ ಯೋಜನೆಗೆ ವೈಜ್ಞಾನಿಕ ಅಭಿವೃದ್ಧಿ ಲಾಭಿ ಬಹಳ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕುಂದರನಹಳ್ಳಿ ರಮೇಶ್, ನಿವೃತ್ತ ಪ್ರಾಂಶುಪಾಲರಾದ ಶಿವರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು. ಕೋಟ್‌...ಯಾವ ಸ್ಥಳ ಸೂಕ್ತ ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸಲಿ. 19 ಜಿಲ್ಲೆಗಳ ಹೆಬ್ಬಾಗಿಲು ತುಮಕೂರು. ಬೆಂಗಳೂರು-ಪುಣೆ ಎಕನಾಮಿಕ್ ಕಾರಿಡಾರ್, ಚನ್ನೈ ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್, ಉದ್ದೇಶಿತ ಬೀದರ್-ಬೆಂಗಳೂರು ಎಕ್ಸ್‌ ಪ್ರೆಸ್‌ ಹೈವೇ, ಸುಮಾರು 12500 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಇಂಡಸ್ಟ್ರಿಯಲ್ ನೋಡ್ ಅಭಿವೃದ್ದಿಗೂ ಪೂರಕವಾಗಲಿದೆ - ಜಿ.ಎಸ್. ಬಸವರಾಜು, ಮಾಜಿ ಸಂಸದ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ