ದೇವನಹಳ್ಳಿ: ಆಧುನಿಕ ಜೀವನ ಶೈಲಿಯಿಂದ ಮುನುಷ್ಯನ ಆಯಸ್ಸು ಕ್ಷೀಣಿಸುತ್ತಿದೆ, ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಲು ಸಾಂಪ್ರದಾಯಿಕ ಪದ್ಧತಿಯ ಸಿರಿಧಾನ್ಯಗಳ ಆಹಾರ ಸೇವನೆಗೆ ಮರಳಬೇಕಿದೆ. ನವಣೆ, ಸಜ್ಜೆ, ಉದ್ದು, ರಾಗಿ ಮತ್ತು ಜೋಳದಂತ ಸಿರಿಧಾನ್ಯ ಆಹಾರ ಸೇವನೆ ರೂಢಿಸಿಕೊಳ್ಳುವುದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಹೇಳಿದರು.
ಇಂದಿನ ಪೀಳಿಗೆ ಫಾಸ್ಟ್ ಫುಡ್ ಸೇವನೆಗೆ ಮೊರೆ ಹೋಗಿದ್ದು, ತಿನ್ನಲು ರುಚಿ ರುಚಿಯಾಗಿದ್ದರು ಆರೋಗ್ಯ ಮೇಲೆ ಪ್ರಭಾವ ಬೀರುತ್ತದೆ. ಇಂದಿನ ಯುವಪೀಳಿಗೆಗೆ ಸಿರಿಧಾನ್ಯಗಳ ಆಹಾರ ಸೇವನೆ ಜಾಗೃತಿ ಅವಶ್ಯ. ಜತೆಗೆ ಬರ್ತ್ ಡೇ ಸಮಯದಲ್ಲಿ ಮಕ್ಕಳಿಗೆ ಕೇಕ್ ಬದಲು ಸಿರಿಧಾನ್ಯ, ಹಾಲು, ರಾಗಿ ಮಾಲ್ಟ್ ಸೇವನೆಗೆ ನೀಡಬೇಕು. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ವೃದ್ಧಿಗೂ ಸಹಕಾರಿಯಾಗುತ್ತದೆ. ಇದರ ಅರಿವು ಮೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ಪಾಲಕರ ಮೇಲಿದೆ ಎಂದು ಸಚಿವರು ಕಿವಿಮಾತು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಆರೋಗ್ಯ ವೃದ್ಧಿಸುವ ಸಿರಿಧಾನ್ಯಗಳಿಗೆ ಒತ್ತು ನೀಡಿ, ಸಿರಿಧಾನ್ಯ ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿದೆ. ಇದರಲ್ಲಿ ಎಲ್ಲರೂ ಪಾಲ್ಗೊಂಡು ಸಿರಿಧಾನ್ಯಗಳ ಕುರಿತು ಅರಿವು ಮೂಡಿಸಿಕೊಂಡು ಆಹಾರ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ದೇವನಹಳ್ಳಿ ಟೌನ್ ಕ್ರೀಡಾಂಗಣದಿಂದ ನಗರದ ವಿವಿಧ ರಸ್ತೆಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಸಿರಿಧಾನ್ಯ ಜಾಗೃತಿ ನಡಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ರಾಜಣ್ಣ, ತಾಲೂಕು ಅಧ್ಯಕ್ಷರಾದ ಜಗನ್ನಾಥ, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕಲಾವತಿ, ಸಹಾಯಕ ನಿರ್ದೇಶಕರಾದ ಸುಶೀಲಮ್ಮ, ಕೆಪಿಸಿಸಿ ಸದಸ್ಯರಾದ ಚಿನ್ನಪ್ಪ, ತಹಸೀಲ್ದಾರ್ ಅನಿಲ್ ಕುಮಾರ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ರವಿಕುಮಾರ್ ಸೇರಿ ಕೃಷಿಕ ಸಮಾಜದ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.(ಫೋಟೊ ಕ್ಯಾಫ್ಷನ್)
ದೇವನಹಳ್ಳಿಯ ಕ್ರೀಡಾಂಗಣದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ "ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ " ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.