ಹವಾಮಾನಕ್ಕೆ ತಕ್ಕಂತೆ ಆಹಾರ ಸೇವನೆ ಅತಿಮುಖ್ಯ: ಎನ್. ಹೇಮಂತ್

KannadaprabhaNewsNetwork |  
Published : Sep 01, 2026, 02:00 AM IST
ಫೋಟೊ:೩೧ಕೆಪಿಸೊರಬ-೦೧ : ಸೊರಬ ಪಟ್ಟಣದ ಶ್ರೀ ಶಕ್ತಿ ಭವನದಲ್ಲಿ  ರಾಷ್ಟಿçÃಯ ಆಯುಷ್ ಅಭಿಯಾನ, ಜಿಲ್ಲಾಡಳಿತ, ಜಿಪಂ ಶಿವಮೊಗ್ಗ ಹಾಗೂ ತಾಪಂ ಸೊರಬ, ವಿಕಸಿತ ಭಾರತ-ಗ್ಯಾರೆಂಟಿ   ಘರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಆರೋಗ್ಯ  ಶಿಬಿರವನ್ನು ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಬದಲಾಗುತ್ತಿರುವ ಹವಾಮಾನ ಮತ್ತು ಜೀವನ ಶೈಲಿಯಿಂದ ದೇಹದಲ್ಲಿ ಆಗುವ ಸಣ್ಣ ಪುಟ್ಟ ಬದಲಾವಣೆಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ಆಹಾರ ಸೇವನೆ ಮಾಡುವುದರಿಂದ ಅನೇಕ ಕಾಯಿಲೆಗಳನ್ನು ತಡೆಯಬಹುದು ಎಂದು ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಬದಲಾಗುತ್ತಿರುವ ಹವಾಮಾನ ಮತ್ತು ಜೀವನ ಶೈಲಿಯಿಂದ ದೇಹದಲ್ಲಿ ಆಗುವ ಸಣ್ಣ ಪುಟ್ಟ ಬದಲಾವಣೆಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ಆಹಾರ ಸೇವನೆ ಮಾಡುವುದರಿಂದ ಅನೇಕ ಕಾಯಿಲೆಗಳನ್ನು ತಡೆಯಬಹುದು ಎಂದು ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್ ಹೇಳಿದರು.

ಪಟ್ಟಣದ ಶ್ರೀ ಶಕ್ತಿ ಭವನದಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಶಿವಮೊಗ್ಗ ಹಾಗೂ ತಾಲೂಕು ಪಂಚಾಯತ್ ಸೊರಬ, ವಿಕಸಿತ ಭಾರತ - ಗ್ಯಾರೆಂಟಿ ಘರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್ ಇವರ ಸಹಯೋಗದಲ್ಲಿ ವಿಶೇಷ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.

ದೇಹದಲ್ಲಿ ಆಗುವ ದೌರ್ಬಲ್ಯ, ಸ್ನಾಯು ಸವೆತ ಮತ್ತು ನಿರಂತರ ಆಯಾಸದಂತಹ ಬದಲಾವಣೆಗಳನ್ನು ತಡೆಗಟ್ಟಲು ಪ್ರೋಟೀನ್ ಅಂಶ ಇರುವ ಆಹಾರವನ್ನು ನಿತ್ಯ ಸೇವಿಸುವುದು ಅತ್ಯಗತ್ಯ ಎಂದ ಅವರು, ಪ್ರೋಟೀನ್ ನಮ್ಮ ದೇಹದ ಬೆಳವಣಿಗೆಗೆ ಬೇಕಾದ ಮುಖ್ಯ ಅಂಶ. ಇದು ಸ್ನಾಯುಗಳನ್ನು ಬಲಪಡಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೇವಲ ಮಾತ್ರೆಗಳ ಮೊರೆ ಹೋಗುವ ಬದಲು ನೈಸರ್ಗಿಕ ಆಹಾರದಿಂದಲೇ ಪ್ರೋಟೀನ್ ಪಡೆದರೆ ದೇಹಕ್ಕೆ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ ಎಂದು ಹೇಳಿದರು.

ಪ್ರತಿಯೊಬ್ಬರೂ ತಮ್ಮ ವಯಸ್ಸಿಗೆ ತಕ್ಕಂತೆ ಆಹಾರ ಸೇವನೆ ಮಾಡಬೇಕು. ಕೃತಕವಾಗಿ ತಯಾರಿಸಿದ ಪ್ಯಾಕೆಟ್ ಮತ್ತು ಸಂಸ್ಕರಿಸಿದ ಆಹಾರವನ್ನು ಬಿಟ್ಟು, ನೈಸರ್ಗಿಕವಾಗಿ ಸಿಗುವ ಆಹಾರವನ್ನು ಸೇವಿಸುವುದರಿಂದ ದೀರ್ಘಕಾಲ ಆರೋಗ್ಯವಾಗಿರಬಹುದು ಎಂದು ಸಲಹೆ ನೀಡಿದರು.

ಅಂಚೆ ಇಲಾಖೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ವರ್ಷಕ್ಕೆ ಕೇವಲ ೫೦೦ ರುಪಾಯಿ ಪ್ರೀಮಿಯಂ ಪಾವತಿಸಿದರೆ ರು. ೫ ಲಕ್ಷದವರೆಗೆ ಆರೋಗ್ಯ ವಿಮೆ ಸಿಗುವ ಯೋಜನೆ ಜಾರಿಯಲ್ಲಿದ್ದು, ಇದರ ಲಾಭವನ್ನು ಪ್ರತಿಯೊಬ್ಬ ನಾಗರಿಕರಿಗೂ ತಲುಪಿಸುವ ಉದ್ದೇಶದಿಂದ ಮುಂದಿನ ಆರೋಗ್ಯ ಶಿಬಿರದಲ್ಲಿ ಅಂಚೆ ಇಲಾಖೆ ಅಧಿಕಾರಿಗಳನ್ನು ಕರೆಯಿಸಿ ಸ್ಥಳದಲ್ಲೇ ಪಾಲಿಸಿ ಕೊಡಿಸುವ ವ್ಯವಸ್ಥೆ ಮಾಡಿಸಬೇಕು ಎಂದು ಸಂಘಟಕರ ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಂದಿನ ಶಿಬಿರದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಡಾ. ಮುರಳೀಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ. ಶಶಿಧರ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಹನುಮ ನಾಯಕ್, ತಾಲೂಕು ದಂಡಾಧಿಕಾರಿ ಕೆ. ಪುರಂದರ್, ಡಾ. ಮಹೇಶ್, ಡಾ. ಜಾದವ್, ಕೆ.ಆರ್. ಸಂದೀಪ್, ಬಿ. ಸುಚಿತ್ರ, ಡಾ. ಲತಾ, ವೃತ್ತ ನಿರೀಕ್ಷಕ ಮಹಾಂತೇಶ್ ಲಂಬಿ, ಡಾ. ನಿಕಿತಾ ಧಾರವಾಡ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

KPSC ನೇಮಕಾತಿ ಅಕ್ರಮ: ಬೀದರ್‌ನಲ್ಲೇ ಬೇರು
ಅಫಜಲಪುರ ಆಸ್ಪತ್ರೆಗೆ ಕೆಕೆಆರ್‌ಟಿಸಿ ಅಧ್ಯಕ್ಷ ಭೇಟಿ