ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಡೋಣಗಾಪುರ ಮೂಲದ ಪ್ರಭಾವಿ ಬಸವರಾಜ್ ಕನ್ನಾಳೆ ಅವರನ್ನು ಸಿಐಡಿ ಪೊಲೀಸರು ದೆಹಲಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೀದರ್
ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಡೋಣಗಾಪುರ ಮೂಲದ ಪ್ರಭಾವಿ ಬಸವರಾಜ್ ಕನ್ನಾಳೆ ಅವರನ್ನು ಸಿಐಡಿ ಪೊಲೀಸರು ದೆಹಲಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.ಬಂಧನದ ಬೆನ್ನಲ್ಲೇ ಬೀದರ್ ಜಿಲ್ಲಾ ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳ ಜಂಟಿ ಪಡೆಯು ಭಾಲ್ಕಿ ಪಟ್ಟಣದ ಲೆಕ್ಚರರ್ ಕಾಲೋನಿ ನಿವಾಸ ಹಾಗೂ ಡೋಣಗಾಪುರ ಗ್ರಾಮದಲ್ಲಿರುವ ಬಸವರಾಜ್ ಅವರ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ ದಾಖಲೆಗಳಿಗಾಗಿ ತೀವ್ರ ಶೋಧ ನಡೆಸಿದೆ.
ಐಎಎಸ್ ಅಧಿಕಾರಿ ಜೊತೆ ಶಾಮೀಲು, ಅಪಾರ ಆಸ್ತಿ ಪಾಸ್ತಿ ಗಳಿಕೆ: ಆರೋಪಿ ಬಸವರಾಜ್ ಕನ್ನಾಳೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ ಗಂಗವಾರ್ ಅವರೊಂದಿಗೆ ಕೈಜೋಡಿಸಿ ಸುಮಾರು 15 ರಿಂದ 20 ಅಭ್ಯರ್ಥಿಗಳಿಂದ ಕೋಟ್ಯಂತರ ರೂಯಿ ಹಣ ಪಡೆದು ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ.ಅಶ್ವತ್ಥನಾರಾಯಣ ಹೆಸರಲ್ಲೇ ಬಸ್ ಸೇವೆ ಆರಂಭಿಸಿದ್ದ: ಭಾಲ್ಕಿ, ಬೀದರ್ ಸೇರಿದಂತೆ ವಿವಿಧೆಡೆ ಅಪಾರ ಪ್ರಮಾಣದ ಸ್ಥಿರಾಸ್ತಿ ಹೊಂದಿ, ತುಮಕೂರು ವಿವಿಯ ಸಿಂಡಿಕೇಟ್ ಸದಸ್ಯನಾಗಿ ಮಾಜಿ ಡಿಸಿಎಂ ಪರಮಾತ್ಮನಾಗಿದ್ದ ಬಸವರಾಜ ಕನ್ನಾಳೆ ಅಶ್ವತ್ಥನಾರಾಯಣ ಹೆಸರಲ್ಲೇ ಬಸ್ ಸೇವೆ ಆರಂಭಿಸಿದ್ದ. ‘ಅಶ್ವಥ ನಾರಾ ಯಣ ಕನ್ನಾಳೆ ಟ್ರಾವೆಲ್ಸ್’ ಹೆಸರಿನಲ್ಲಿ ಬೆಂಗಳೂರು - ಬೀದರ್ ಹಾಗೂ ಮುಂಬೈ, ಪುಣೆ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳನ್ನು ನಡೆಸುತ್ತಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಜಿಪಂ ಸಿಇಒ ಒಡನಾಟವೇ ಅಕ್ರಮ ಜಾಲದ ಮೂಲ: 2019ರಲ್ಲಿ ಜ್ಞಾನೇಂದ್ರ ಕುಮಾರ್ ಗಂಗವಾರ್ ಅವರು ಬೀದರ್ ಜಿಲ್ಲಾ ಪಂಚಾಯತ್ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬಸವರಾಜ್ ಕನ್ನಾಳೆ ಅವರ ಪರಿಚಯವಾಗಿತ್ತು. ಇದೇ ಒಡನಾಟವನ್ನು ಬಂಡವಾಳ ಮಾಡಿಕೊಂಡ ಕನ್ನಾಳೆ, ಮುಂದೆ ಕೆಪಿಎಸ್‌ಸಿ ಪರೀಕ್ಷಾ ನೇಮಕಾತಿಯಲ್ಲಿ ಅಕ್ರಮ ಎಸಗಲು ದಾರಿ ಮಾಡಿಕೊಂಡಿದ್ದ ಎನ್ನಲಾಗಿದೆ.ರಾಜಧಾನಿ ಬೆಂಗಳೂರು ಹಾಗೂ ದೆಹಲಿಯಲ್ಲಿ ಕ್ಯಾಂಪ್ ಹೂಡುತ್ತಿದ್ದ ಈತ, ಪ್ರಭಾವಿ ರಾಜಕೀಯ ನಾಯಕರ ಹೆಸರು ಬಳಸಿಕೊಂಡು ಹತ್ತಾರು ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷ ಒಡ್ಡುತ್ತಿದ್ದ ಆರೋಪಗಳು ಇದ್ದು ತನಿಖೆಯ ನಂತರ ಎಲ್ಲವೂ ಸ್ಪಷ್ಟವಾಗಲಿದೆ.
ಬಿಜೆಪಿ ನಾಯಕರ ಆರೋಪ-ಪ್ರತ್ಯಾರೋಪ:ಕಿಂಗ್‌ಪಿನ್ ಬಂಧನದ ಬೆನ್ನಲ್ಲೇ ಜಿಲ್ಲೆಯ ರಾಜಕೀಯ ಅಂಗಳದಲ್ಲಿ ಆರೋಪ ಪ್ರತ್ಯಾರೋಪಗಳ ಸರಣಿ ಆರಂಭ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, 2019ರಲ್ಲಿ ತಾವು ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾಗ ತಮ್ಮ ಬಳಿ ಇದ್ದ 8 ಜನ ಪಿಎಗಳಲ್ಲಿ ಬಸವರಾಜ್ ಕೂಡ ಒಬ್ಬರಾಗಿದ್ದರು. ಆದರೆ 2019ರ ನಂತರ ಆತನ ಚಟುವಟಿಕೆಗಳಿಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ, ಆತ ಪಕ್ಷದ ಸದಸ್ಯನೂ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನೊಂದೆಡೆ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಬಸವರಾಜ್ ಕನ್ನಾಳೆ ಕೇವಲ ಬಿಜೆಪಿ ನಾಯಕರಷ್ಟೇ ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರೊಂದಿಗೂ ಆಪ್ತ ಒಡನಾಟ ಹೊಂದಿದ್ದ. ಉಪ್ಪು ತಿಂದವನು ನೀರು ಕುಡಿಯಲೇಬೇಕು, ತಪ್ಪು ಮಾಡಿದವರು ಯಾರೇ ಆಗಿದ್ದರೂ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಬಂಧನದಿಂದಾಗಿ ಕೆಪಿಎಸ್‌ಸಿ ಅಕ್ರಮ ಜಾಲದ ಮತ್ತಷ್ಟು ಆಘಾತಕಾರಿ ಸತ್ಯಗಳು ಹೊರಬೀಳುವ ಸಾಧ್ಯತೆಯಿದೆ. ಅಷ್ಟಕ್ಕೂ ಬೀದರ್ ಜಿಲ್ಲೆಯ ಮೂಲದ ಹಲವರು ಈ ಜಾಲದಲ್ಲಿ ಭಾಗಿಯಾಗಿರುವ ಅನುಮಾನಗಳು ದಟ್ಟವಾಗಿದ್ದು, ಪೊಲೀಸರು ಇಂಚಿಂಚೂ ತನಿಖೆಗೊಳಪಡಿಸಲಿದ್ದಾರೆ.