ಘಟನೆಗೆ ಕಾರಣವಾದ ಅಂಶವನ್ನು ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಮಾತನಾಡಿಸಿ ಮಾಹಿತಿ ಪಡೆದ ಶಾಸಕರು, ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಶಾಸಕ ಎಚ್.ಟಿ.ಮಂಜು ಸೂಚನೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಲುಷಿತ ನೀರು ಸೇವನೆಯಿಂದ ತಾಲೂಕಿನ ಸಾರಂಗಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯ 43 ಮಕ್ಕಳು ಅಸ್ವಸ್ಥಗೊಂಡಿದ್ದಾರೆ.
ವಸತಿ ಶಾಲೆಯಲ್ಲಿ ಒಟ್ಟು 230 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಸೆ.9ರ ಬೆಳಗ್ಗೆ ತಿಂಡಿ ಸೇವನೆಗೂ ಮುನ್ನವೇ 18 ಮಕ್ಕಳಿಗೆ ವಾಂತಿ ಭೇದಿ ಕಾಣಿಸಿಕೊಂಡಿತು. ಇದರಲ್ಲಿ ತೀವ್ರವಾಗಿ ಅಸ್ವಸ್ಥಗೊಂಡ ನಾಲ್ಕು ವಿದ್ಯಾರ್ಥಿಗಳನ್ನು ತಕ್ಷಣವೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು.
ಸುದ್ದಿ ತಿಳಿಯುತ್ತಿದ್ದಂತೆಯೇ ಶಾಸಕ ಎಚ್.ಟಿ.ಮಂಜು ಹಾಗೂ ತಾಲೂಕು ವೈದ್ಯಾಧಿಕಾರಿಗಳ ತಂಡ ವಸತಿ ಶಾಲೆಗೆ ಆಗಮಿಸಿ ಅಸ್ವಸ್ಥ ಮಕ್ಕಳ ಆರೋಗ್ಯ ವಿಚಾರಿಸಿದರು. ಗುರುವಾರವೂ ಮತ್ತೆ 25 ಮಕ್ಕಳಿಗೆ ವಾಂತಿ ಬೇಧಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಇದ್ದ ವೈದ್ಯರ ತಂಡ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಿದೆ.
ಶಾಸಕ ಎಚ್.ಟಿ.ಮಂಜು ಸ್ಥಳದಲ್ಲಿದ್ದು ಮಕ್ಕಳ ಚಿಕಿತ್ಸೆಗೆ ಅಗತ್ಯ ನೆರವು ನೀಡಿದರು. ಘಟನೆಗೆ ಕಾರಣವಾದ ಅಂಶವನ್ನು ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಮಾತನಾಡಿಸಿ ಮಾಹಿತಿ ಪಡೆದ ಶಾಸಕರು, ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಿದರು.
ಬುಧವಾರ ಬೆಳಗ್ಗೆ ಉಪಾಹಾರ ಸೇವನೆಗೆ ಮುನ್ನವೇ ಮಕ್ಕಳಿಗೆ ವಾಂತಿ ಬೇಧಿ ಕಾಣಿಸಿಕೊಂಡಿರುವುದರಿಂದ ಕಲುಷಿತ ನೀರು ಸೇವನೆಯೇ ಘಟನೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಸಾರಂಗಿ ಮೊರಾರ್ಜಿ ವಸತಿ ಶಾಲೆಗೆ ನೀರು ಪೂರೈಕೆ ಮಾಡುವ ಕೊಳವೆ ಬಾವಿಗಳು ಕಳೆದ ಎರಡು ವರ್ಷಗಳ ಹಿಂದೆಯೇ ಕೆಟ್ಟು ಹೋಗಿದ್ದು, ಅಧಿಕಾರಿಗಳು ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಸದರಿ ವಸತಿ ಶಾಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಮಕ್ಕಳ ಅಗತ್ಯತೆಗೆ ಬೇಕಾದ ನೀರಿನ ಅಭಾವವಿದೆ. ಮೊರಾರ್ಜಿ ವಸತಿ ಶಾಲೆ ಪಕ್ಕದಲ್ಲಿರುವ ಬಿ.ಸಿ.ಎಂ ಹಾಸ್ಟಲ್‌ನ ಬೋರ್‌ವೆಲ್‌ನಿಂದ ಮೊರಾರ್ಜಿ ವಸತಿ ಶಾಲೆಗೆ ಅಗತ್ಯ ನೀರು ತರಲಾಗುತ್ತಿತ್ತು. ಆದರೆ, ತೀವ್ರ ಬರಗಾಲದ ಪರಿಣಾಮ ಬಿಸಿಎಂ ಹಾಸ್ಟಲ್‌ನ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಜೊತೆಗೆ ಕಳೆದ ಎರಡು ಮೂರು ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಹೊರಗಿನಿಂದ ಟ್ಯಾಂಕರ್ ಮೂಲಕ ನೀರು ತರಿಸಲಾಗುತ್ತಿತ್ತು. ಹಾಸ್ಟಲ್ ವಿದ್ಯಾರ್ಥಿಗಳಿಗೆ ನಿತ್ಯ 10 ಟ್ಯಾಂಕರ್ ನೀರಿನ ಅಗತ್ಯವಿದೆ. ವಸತಿ ಶಾಲೆ ನೀರು ಪೂರೈಕೆಗಾಗಿಯೇ ಮಾಸಿಕ 3 ರಿಂದ 4 ಲಕ್ಷ ರು. ಹಣ ವ್ಯಯಿಸಲಾಗುತ್ತಿದೆ. ಟ್ಯಾಂಕರ್ ನೀರನ್ನು ಶುದ್ಧೀಕರಿಸಿ ಮಕ್ಕಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಹಾಸ್ಟಲ್‌ನ ಕೆಲವು ಮಕ್ಕಳು ಶುದ್ದೀಕರಿಸುವ ಮುನ್ನವೇ ಟ್ಯಾಂಕರ್ ನೀರು ಸೇವನೆ ಮಾಡಿರುವುದರಿಂದ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿರಬಹುದೆಂದು ಶಂಕಿಸಲಾಗಿದೆ.
ತಾಲೂಕು ವೈದ್ಯಾಧಿಕಾರಿ ಡಾ.ಅಜಿತ್ ನೇತೃತ್ವದ ವೈದ್ಯರ ತಂಡ ಮಕ್ಕಳ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿದೆ. ತಹಸೀಲ್ದಾರ್ ಜಿ.ಎಸ್ ಶ್ರೇಯಸ್ ಕೂಡ ಸ್ಥಳದಲ್ಲಿಯೇ ಇದ್ದು ಮಕ್ಕಳ ಚಿಕಿತ್ಸೆಯ ಬಗ್ಗೆ ಗಮನ ಹರಿಸಿದ್ದಾರೆ. ತಾಪಂ ಇಒ ಸುಷ್ಮ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ವೆಂಕಟೇಶ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಅಜಿತ್, ಡಾ.ಸನ್ಮತಿ ಶ್ಯಾಂ, ಶಾಲೆ ವಾರ್ಡನ್ ಪ್ರದೀಪ್, ಪ್ರಾಂಶುಪಾಲೆ ಲಲಿತಾ ಹಲವರು ಮಕ್ಕಳ ಆರೋಗ್ಯದ ಮೇಲೆ ಗಮನ ಹರಿಸುತ್ತಿದ್ದಾರೆ.
ಸದ್ಯಕ್ಕೆ ಮಕ್ಕಳು ಹಂತಹಂತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಕಾರಣವನ್ನು ತನಿಕಾಧಿಕಾರಿಗಳು ಪತ್ತೆ ಹಚ್ಚಬೇಕಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.