ಆರೋಗ್ಯದ ಜೀವನಕ್ಕೆ ಗೆಡ್ಡೆ ಗೆಣಸುಗಳ ಬಳಕೆ ಪೂರಕ: ಆಹಾರ ತಜ್ಞೆ ರತ್ನಾ ರಾಜಯ್ಯ

KannadaprabhaNewsNetwork | Published : Feb 12, 2024 1:32 AM

ಸಾರಾಂಶ

ಗ್ರಾಹಕರು ಕಂದಮೂಲಗಳನ್ನು ತಮ್ಮ ದಿನನಿತ್ಯದ ಅಡುಗೆಗಳಲ್ಲಿ ಬಳಸಬೇಕೆಂದರೆ, ಅವುಗಳ ಪಾಕ ವಿಧಾನ ಪರಿಚಯ ಮಾಡಬೇಕು. ಇವತ್ತಿನ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಬಗೆಯ ಹೊಸ ತರಹದ ಅಡುಗೆಗಳನ್ನು ಪರಿಚಯಿಸಿದ್ದು ಸಂತಸದ ಸಂಗತಿ.

ಕನ್ನಡಪ್ರಭ ವಾರ್ತೆ ಮೈಸೂರುನಮ್ಮ ಆಹಾರದ ಬಟ್ಟಲಿನಿಂದ ಗೆಡ್ಡೆ ಗೆಣಸುಗಳು ಮಾಯವಾಗಿವೆ. ಇವುಗಳ ನಿರಂತರ ಬಳಕೆಯಿಂದ ಶರೀರಕ್ಕೆ ರೋಗನಿರೋಧಕ ಶಕ್ತಿ ಬರುತ್ತದೆ. ಆರೋಗ್ಯದ ಜೀವನಕ್ಕೆ ಗೆಡ್ಡೆ ಗೆಣಸುಗಳ ಬಳಕೆ ಪೂರಕ ಎಂದು ಆಹಾರ ತಜ್ಞೆ ಮತ್ತು ಬರಹಗಾರ್ತಿ ರತ್ನಾ ರಾಜಯ್ಯ ತಿಳಿಸಿದರು.

ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ, ರೋಟರಿ ಕ್ಲಬ್ ಮೈಸೂರು ಪಶ್ಚಿಮ ಹಾಗೂ ಸಹಜ ಸೀಡ್ಸ್ ಸಹಯೋಗದಲ್ಲಿ ಗೆಡ್ಡೆ ಗೆಣಸು ಮೇಳದ ಅಂಗವಾಗಿ ಭಾನುವಾರ ನಡೆದ ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆಯಲ್ಲಿ ವಿಜೇತರಿಗೆ ಅವರು ಬಹುಮಾನ ವಿತರಿಸಿ ಮಾತನಾಡಿದರು.

ಬರಗಾಲದ ಬೆಳೆಗಳು ಎಂದು ಪರಿಗಣಿಸಿದ ಗೆಡ್ಡೆ ಗೆಣಸುಗಳು ಪೋಷಕಾಂಶದ ಖಜಾನೆ. ಇಷ್ಟೊಂದು ಬಗೆಯ ಗೆಡ್ಡೆ ಗೆಣಸು ಇರುವುದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಇಂಥ ಮೇಳಗಳನ್ನು ಆಯೋಜಿಸುವ ಮೂಲಕ, ಗ್ರಾಹಕರಲ್ಲಿ ಮರೆತು ಹೋದ ಆಹಾರಗಳ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಸಾವಯವ ಕೃಷಿಕ ಹುಣಸೂರಿನ ಪಾಸಿಟೀವ್ ತಮ್ಮಯ್ಯ ಮಾತನಾಡಿ, ಗ್ರಾಹಕರು ಕಂದಮೂಲಗಳನ್ನು ತಮ್ಮ ದಿನನಿತ್ಯದ ಅಡುಗೆಗಳಲ್ಲಿ ಬಳಸಬೇಕೆಂದರೆ, ಅವುಗಳ ಪಾಕ ವಿಧಾನ ಪರಿಚಯ ಮಾಡಬೇಕು. ಇವತ್ತಿನ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಬಗೆಯ ಹೊಸ ತರಹದ ಅಡುಗೆಗಳನ್ನು ಪರಿಚಯಿಸಿದ್ದು ಸಂತಸದ ಸಂಗತಿ ಎಂದು ಹೇಳಿದರು.

ತೀರ್ಪುಗಾರರಾಗಿದ್ದ ಶ್ವೇತ ಮಾತನಾಡಿ, ಗೆಡ್ಡೆ ಗೆಣಸುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಸುಲಭನಾಗಿ ಬೆಳೆಯಬಹುದಾದ ಗೆಡ್ಡೆ ಗೆಣಸುಗಳನ್ನು ದಿನ ನಿತ್ಯದ ಅಡುಗೆಗಳಲ್ಲಿ ಬಳಸುವ ಮೂಲಕ ಅಪೌಷ್ಟಿಕತೆಯನ್ನು ದೂರ ಮಾಡಬಹುದು ಎಂದರು.

ತೀರ್ಪುಗಾರರಾದ ಸೈಯದಾ ಫಿರ್ದೋಜ್, ಸೋಫಿಯಾ ಇದ್ದರು. ಸೀಮಾ ಪ್ರಸಾದ್ ಸ್ವಾಗತಿಸಿದರು. ಕೇಶವಮೂರ್ತಿ ನಿರೂಪಿಸಿದರು.

ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆ ವಿಜೇತರು

ಸಿಹಿ ಗೆಣಸಿನ ಪಾಯಸ, ಸಿಹಿ ಉಂಡೆ, ಮೋದಕ ಮತ್ತು ಹೋಳಿಗೆ, ಪರ್ಪಲ್ ಯಾಮ್ ಮೋಮೋಸ್, ಪಾಯಸ, ಕೆಸುವಿನ ಹಲ್ವಾ, ಯೋಕೋನ್ ಬೀನ್ಸ ಬ್ರೆಡ್ ಸ್ಯಾಂಡ್‌ ವಿಚ್, ಹುತ್ತರಿ ಗೆಣಸಿನ ಪರೋಟ, ಮರ ಗೆಣಸಿನ ಚಕ್ಕುಲಿ, ಸುವರ್ಣಗೆಡ್ಡೆಯ ನಿಪ್ಪಟ್ಟು, ಬೀಟ್ರೂಟ್ ಜಾಮ್, ಕ್ಯಾರೆಟ್ ಐಸ್ ಕ್ರೀಂ ಮತ್ತು ಅರಿಷಿಣ ಚಟ್ನಿ ಸೇರಿದಂತೆ ಹಲವಾರು ಬಗೆಯ ವೈವಿಧ್ಯಮಯ ರುಚಿಕರ ತಿಂಡಿ ತಿನಿಸುಗಳನ್ನು ಸ್ಪರ್ಧೆಗೆ ತರಲಾಗಿತ್ತು.

ಈ ಸ್ಪರ್ಧೆಯಲ್ಲಿ ಪ್ರತಿಮಾ ಪಾಟೀಲ್ (ಪ್ರಥಮ), ತಿರುಮಲೇಶ್ವರಿ ವಿಠ್ಠಲ್(ದ್ವಿತೀಯ) ಹಾಗೂ ಹರ್ಷಿತಾ ಎಂ. ಸಂತೋಷಿ (ತೃತೀಯ) ಬಹುಮಾನ ಪಡೆದರು. ಗೀತಾ ರಾವ್, ಬೀಬಿ ಜಾನ್ ಮತ್ತು ಗುಲಾಬಿ ಅವರು ಸಮಾಧಾನಕರ ಬಹುಮಾನ ಪಡೆದರು.

Share this article