ಹಳಿಯಾಳ: ಕೃಷಿ - ಇದೊಂದು ಪವಿತ್ರವಾದ ಕಾಯಕವಾಗಿದ್ದು, ನಮ್ಮ ಅನ್ನದಾತರು, ನೇಗಿಲಯೋಗಿಗಳನ್ನು ಇನ್ನಷ್ಟು ಸದೃಢರನ್ನಾಗಿಸಲು ಹಾಗೂ ನಮ್ಮ ಯುವಪೀಳಿಗೆಯನ್ನು ಕೃಷಿಯತ್ತ ಆಕರ್ಷಿಸುವ ದಿಸೆಯಲ್ಲಿ ಜಿಲ್ಲೆಯಲ್ಲಿ ಕೃಷಿ ಸಾಹಿತ್ಯ ಸಮ್ಮೇಳನ ಆಯೋಜಿಸುವ ಯೋಜನೆಯನ್ನು ಹೊಂದಿದ್ದೇವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.
ಗುರುವಾರ ಸಂಜೆ ಮುಕ್ತಾಯಗೊಂಡ ಹಳಿಯಾಳ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನಪದ, ನಾಟಕ, ರಂಗಭೂಮಿ, ಕಲೆ, ಸಿನಿಮಾ, ಬುಡಕಟ್ಟು ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಾಹಿತ್ಯವಿದ್ದು, ಅವುಗಳ ಸಮ್ಮೇಳನಗಳು ನಡೆಯುತ್ತವೆ, ಆದರೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿಲ್ಲ. ಅದಕ್ಕಾಗಿ ಕೃಷಿ, ತೋಟಗಾರಿಕೆ, ರೇಷ್ಮೆ ಮೊದಲಾದ ಕ್ಷೇತ್ರಗಳಲ್ಲಿ ಬರೆದಿರುವ ಸಾಹಿತ್ಯಗಳನ್ನು, ಸಾಹಿತಿಗಳನ್ನು ಸೇರಿಸಿ, ತಜ್ಞರನ್ನು ಆಹ್ವಾನಿಸಿ ಸಮ್ಮೇಳನ ನಡೆಸಬೇಕು ಎಂದರು.ಜನಪದ ಕಲಾವಿದ ಸಾಹಿತಿ ಶಂಭು ಹಿರೇಮಠ ಮಾತನಾಡಿ, ಬದುಕನ್ನು ಕಟ್ಟಲಿಕ್ಕೆ ನೀವು ಹೋಗುವಲ್ಲಿ, ಆದರೆ ಕನ್ನಡ ಭಾಷೆಯನ್ನು ಬಿಟ್ಟು ಹೋಗಬೇಡಿ, ನಿಮ್ಮೊಂದಿಗೆ ಕನ್ನಡವನ್ನು ಕರೆದು ಕೊಂಡು ಹೋಗಿ, ಕನ್ನಡವನ್ನು ನಾನು ಬೆಳೆಸುತ್ತೇನೆ ಎಂಬ ವಿಚಾರದ ಬದಲು ಕನ್ನಡವನ್ನು ಬಳಸುತ್ತೇನೆ ಎಂಬ ನಿರ್ಧಾರ ಧೋರಣೆ ನಿಮ್ಮದಾಗಿರಲಿ ಎಂದರು.
ಸಾಧಕರಿಗೆ ಸನ್ಮಾನ: ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಸುರೇಶ ಕಡೆಮನಿ, ಕೃಷಿಯಲ್ಲಿ ಬಾಬು ಮಿರಾಶಿ, ಸಂಗೀತದಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕಿ ಮೇಘನಾ ನಾಯಕ, ಕಲೆಯಲ್ಲಿ ದೇವೇಂದ್ರಪ್ಪ ರಥಕರ, ಪತ್ರಿಕಾಕ್ಷೇತ್ರದಲ್ಲಿ ಹಿರಿಯ ಪತ್ರಕರ್ತ ಓರ್ವಿಲ್ಲ್ ಫರ್ನಾಂಡೀಸ್, ಕ್ರೀಡಾ ಕ್ಷೇತ್ರದಲ್ಲಿ ಉದಯ ಜಾಧವ, ಉದ್ಯಮ ಕ್ಷೇತ್ರದಲ್ಲಿ ಉದ್ಯಮಿ ರಫೀಕ ಬಸರಿಕಟ್ಟಿ, ವೈದ್ಯಕೀಯ ಕ್ಷೇತ್ರದಲ್ಲಿ ಹಿರಿಯ ವೈದ್ಯರು ಸಮಾಜಸೇವಕ ಡಾ. ಬಿ.ಬಿ. ಮೂಡಬಾಗಿಲ, ಸಮೂಹ ಮಾಧ್ಯಮದಲ್ಲಿ ಅಶೋಕ ಬೆಣಚೆಕರ, ಯೋಗ ಕ್ಷೇತ್ರದಲ್ಲಿ ಶಿವಾಜಿ ಬನೋಶಿ, ಸಹಕಾರ ಕ್ಷೇತ್ರದಲ್ಲಿ ತುಕಾರಾಮ ಗೌಡ, ಜನಪದ ಕ್ಷೇತ್ರದಲ್ಲಿ ನಾಗೇಂದ್ರ ತೋರಸ್ಕರ, ಸಮಾಜಸೇವೆಯಲ್ಲಿ ಬಸವರಾಜ ಬೆಂಡಿಗೇರಿಮಠ, ತೋಟಗಾರಿಕೆಯಲ್ಲಿ ಕುಶಪ್ಪ ಸಿದ್ದಬಾನವರ, ಗ್ರಾಮೀಣ ಕಲೆ ವಿಭಾಗದಲ್ಲಿ ರಾಜಮಾಬಿ ಮುಜಾವರ ಅವರನ್ನು ಗೌರವಿಸಲಾಯಿತು.ಕಸಾಪದ ಕೋಶಾಧ್ಯಕ್ಷ ಕಾಳಿದಾಸ ಬಡಿಗೇರ ಅವರು ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು.
ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಹೊಂಗಿರಣ ತಂಡದಿಂದ ಕರ್ನಾಟಕದ ಗತವೈಭವ ವಿಷಯದಲ್ಲಿ ಸೂತ್ರದ ಗೊಂಭೆಯಾಟದ ಪ್ರದರ್ಶನವು ನಡೆಯಿತು. ಉದಯೋನ್ಮುಕ ಸಾಹಿತಿ ಮತ್ತು ಕವಿಗಳಿಂದ ಕವನ ವಾಚನವು ನಡೆಯಿತು. ಜನಪದ ಕಲಾವಿದ ಸಾಹಿತಿ ಶಂಭು ಹಿರೇಮಠ ಅವರ ಬಳಗದವರು ಸ್ಥಳೀಯ ಕಲಾವಿದೆ ಮಹಾನಂದಾ ಗೋಸಾವಿ ಹಾಗೂ ತಂಡದವರು ಜನಪದ ಗೀತೆಗಳನ್ನು ಸಾದರಪಡಿಸಿದರು.ಹಳಿಯಾಳ ಕಸಾಪ ಅಧ್ಯಕ್ಷೆ ಸುಮಂಗಲ ಅಂಗಡಿ, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಪುರಸಭಾ ಸದಸ್ಯ ಉದಯ ಹೂಲಿ, ಸಮಾಜ ಸೇವಕ ಮಂಜುನಾಥ ಪಂಡಿತ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾಕೀರ ಜಂಗೂಬಾಯಿ, ಕಸಾಪ ಪ್ರಮುಖರಾದ ಶಾಂತಾರಾಮ ಚಿಬುಲಕರ, ವಿಠ್ಠಲ ಕೊರ್ವೇಕರ, ಕಾಳಿದಾಸ ಬಡಿಗೇರ, ಗಣಪತಿ ನಾಯ್ಕ, ಗೋಪಾಲ ಅರಿ, ಗೋಪಾಲ ಮೇತ್ರಿ ಇತರರು ಇದ್ದರು.ಸಮ್ಮೇಳನದ ಪಂಚ ನಿರ್ಣಯಗಳು:
1. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವುದನ್ನು ತಪ್ಪಿಸಲು ಸರ್ಕಾರ ಕ್ರಮಕೈಗೊಳ್ಳಬೇಕು.2. ಕನ್ನಡ ಸಾಹಿತ್ಯ ಸಂಸ್ಕೃತಿ ಪೋಷಣೆಗಾಗಿ ಹಳಿಯಾಳದಲ್ಲಿ ಒಂದು ಸುಸಜ್ಜಿತ ಸಾಹಿತ್ಯ ಭವನ ಸ್ಥಾಪನೆ ಆಗಬೇಕು.
3. ಹಳಿಯಾಳದ ಕವಿ ಶಾಂತಿನಾಥ ದೇಸಾಯಿ ಅವರ ಹೆಸರಿನಲ್ಲಿ ಪ್ರತಿವರ್ಷ ರಾಜ್ಯಮಟ್ಟದ ಪುರಸ್ಕಾರವನ್ನು ಸಾಹಿತ್ಯ ಸಾಧಕರಿಗೆ ಕೊಡಬೇಕು.4. ಕೃಷಿ ಪ್ರಧಾನ ತಾಲೂಕವಾಗಿರುವ ಹಳಿಯಾಳದಲ್ಲಿ ರೈತಭವನ ನಿರ್ಮಾಣವಾಗಬೇಕು ಹಾಗೂ ರೈತರ ಬೆಳೆಗಳಿಗೆ ನ್ಯಾಯೋಚಿತ ಬೆಲೆ ದೊರಕುವಂತಾಗಬೇಕು.
5. ಹಳಿಯಾಳ ತಾಲೂಕಿನ ಬುಡಕಟ್ಟು ಸಮುದಾಯದಗಳ ಸಂಸ್ಕೃತಿ ಹಾಗೂ ಅವರ ಜನಪದ ಕಲೆಗಳ ಉಳವಿಗಾಗಿ ಪ್ರೋತ್ಸಾಹಿಸುವ ಯೋಜನೆಗಳು ಜಾರಿಗೆ ಬರಬೇಕು.