ಆನ್‌ಲೈನ್ ವೈದ್ಯಕೀಯ ಸೌಲಭ್ಯ ಜಾರಿಗೆ ಚಿಂತನೆ

KannadaprabhaNewsNetwork |  
Published : Jan 18, 2025, 12:46 AM IST
17ಕೆಆರ್ ಎಂಎನ್ 5,6.ಜೆಪಿಜಿರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದ ಡಾ.ಸಿ.ಎನ್ .ಮಂಜುನಾಥ್ ಅಧ್ಯಕಷತೆಯಲ್ಲಿ  ಕೇಂದ್ರ ಪುರಸ್ಕೃತ ಯೋಜನೆಗಳ ತ್ರೈಮಾಸಿಕ  ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ನಡೆಯಿತು. | Kannada Prabha

ಸಾರಾಂಶ

ರಾಮನಗರ: ಜಿಲ್ಲೆಯ ನಾಗರಿಕರಿಗೆ ಸಕಾಲದಲ್ಲಿ ಅಗತ್ಯ ಚಿಕಿತ್ಸೆ ದೊರೆಯಲು ಅನುಕೂಲವಾಗುವಂತಹ ಆನ್‌ಲೈನ್ ವೈದ್ಯಕೀಯ ಸಲಹೆ (ಟೆಲಿಮೆಡಿಸನ್) ಮಾದರಿಯಲ್ಲಿ ಜಿಲ್ಲೆಯಲ್ಲಿ ಆನ್‌ಲೈನ್ ವೈದ್ಯಕೀಯ ಸೌಲಭ್ಯ ಜಾರಿಗೊಳಿಸಲು ಚಿಂತಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಸದ ಡಾ. ಸಿ.ಎನ್. ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಮನಗರ: ಜಿಲ್ಲೆಯ ನಾಗರಿಕರಿಗೆ ಸಕಾಲದಲ್ಲಿ ಅಗತ್ಯ ಚಿಕಿತ್ಸೆ ದೊರೆಯಲು ಅನುಕೂಲವಾಗುವಂತಹ ಆನ್‌ಲೈನ್ ವೈದ್ಯಕೀಯ ಸಲಹೆ (ಟೆಲಿಮೆಡಿಸನ್) ಮಾದರಿಯಲ್ಲಿ ಜಿಲ್ಲೆಯಲ್ಲಿ ಆನ್‌ಲೈನ್ ವೈದ್ಯಕೀಯ ಸೌಲಭ್ಯ ಜಾರಿಗೊಳಿಸಲು ಚಿಂತಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಸದ ಡಾ. ಸಿ.ಎನ್. ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗಕ್ಕೂ ಆನ್‌ಲೈನ್ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಾಗಿ ಈ ಯೋಜನೆ ಆರಂಭಿಸಲಾಗುತ್ತಿದೆ. ಅದಕ್ಕೆ ರಾಮನಗರ ಜಿಲ್ಲಾಸ್ಪತ್ರೆಯನ್ನು ನೋಡಲ್ ಆಸ್ಪತ್ರೆ ಮಾಡಲಾಗುವುದು, ಅಲ್ಲಿ ರೊಟೇಷನ್ ಮಾದರಿಯಲ್ಲಿ ತಜ್ಞ ವೈದ್ಯರನ್ನು ವೈದ್ಯಕೀಯ ಸಲಹೆ ನೀಡಲು ನಿಯೋಜಿಸಲಾಗುವುದು. ಜಿಲ್ಲಾಸ್ಪತ್ರೆಯನ್ನೇ ಮುಖ್ಯ ಕೇಂದ್ರವನ್ನಾಗಿಸಿ, ಜಿಲ್ಲೆಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಸೌಲಭ್ಯ ಒದಗಿಸಿಕೊಡಬೇಕು. ಇದಕ್ಕೆ ಅಗತ್ಯವಿರುವ ಟ್ಯಾಬ್ ಖರೀದಿಸಿ ಎರಡು ಅಥವಾ ಮೂರು ತಿಂಗಳ ಅವಧಿಯಲ್ಲಿ ಯೋಜನೆ ಜಾರಿಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಯಶವಂತ್‌ ವಿ.ಗುರುಕರ್ ಮಾತನಾಡಿ, ಇನ್ನೆರಡು ವಾರದಲ್ಲಿಯೇ ಜಿಲ್ಲಾ ಮಟ್ಟದಲ್ಲಿ ಈ ಯೋಜನೆಯ ಜಾರಿಗೆ ಶ್ರಮಿಸಲಾಗುತ್ತದೆ. ಸಿಬ್ಬಂದಿ ನಿಯೋಜನೆ ಸೇರಿದಂತೆ ಎಲ್ಲಾ ಸೌಕರ‍್ಯಗಳನ್ನು ಒದಗಿಸಿಕೊಡಲಾಗುತ್ತದೆ ಎಂದು ಹೇಳಿದರು.

ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಮಾತನಾಡಿ, ಕೆಲವು ಪಿಎಚ್‌ಸಿ ಕೇಂದ್ರಗಳಲ್ಲಿ ಟ್ಯಾಬ್ ಸೌಲಭ್ಯವಿದ್ದು ಯೋಜನೆ ಜಾರಿಗೆ ಸಹಾಯವಾಗಲಿದೆ. ಟ್ಯಾಬ್ ಇಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಪಂ ಅನುದಾನದಿಂದಲೇ ಖರೀದಿಸಲಾಗುತ್ತದೆ ಎಂದು ತಿಳಿಸಿದರು.

ಆಗ ಸಂಸದರು, ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸಂಜೆ 4.30 ನಂತರ ರೋಗಿಗಳ ಸೇವೆಗೆ ವೈದ್ಯರು ಲಭ್ಯರಿರಬೇಕು, ತಜ್ಞ ವೈದ್ಯರು ಕೂಡ ಕೆಲವು ವಾರ್ಡುಗಳಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಬೇಕು. ರಾಮನಗರ, ಮಾಗಡಿ ಹಾಗೂ ಕನಕಪುರದಲ್ಲಿ ಹಾರ್ಟ್‌ ಅಟ್ಯಾಕ್ ಆದಾಗ ಗೋಲ್ಡನ್ ಅವರ್‌ನಲ್ಲಿ ನೀಡಲಾಗುವ 18 ಸಾವಿರ ರು.ಗಳ ಇಂಜಕ್ಷನ್ ಬಗ್ಗೆ ಖಾತರಿ ಪಡಿಸಿಕೊಂಡರು. ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿಟಿ ಸ್ಕ್ಯಾನ್ ಯಂತ್ರವನ್ನು 30 ಲಕ್ಷ ರು. ವ್ಯಯಿಸಿ ದುರಸ್ತಿ ಪಡಿಸಲಾಗಿದೆ. ಮುಂದೆ ಈ ಯಂತ್ರಕ್ಕೆ ಐದು ವರ್ಷ ಅದೇ ಸಂಸ್ಥೆಯವರ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.

ಸ್ತನ ಕ್ಯಾನ್ಸರ್ ಪತ್ತೆಮಾಡುವ ಮ್ಯಾಮೋಗ್ರಫಿ ಯಂತ್ರ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿದೆ. ಅದು ಕೂಡಲೇ ಕಾರ್ಯಾರಂಭಿಸಬೇಕು, ಎರಡು ಕೋಟಿ ವೆಚ್ಚದಲ್ಲಿ ಯಂತ್ರವನ್ನು ಖರೀದಿಸಿದ್ದು, ಜಿಲ್ಲೆಯ ನಾಗರಿಕರಿಗೆ ಈ ಮಾಹಿತಿ ನೀಡಬೇಕು ಹಾಗೂ ರೋಗಿಗಳಿಗೆ ಅನುಕೂಲವಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಮಂಜುನಾಥ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು. ಅಲ್ಟ್ರಾಸೌಂಡ್ ಯಂತ್ರ ಕೂಡಲೇ ಕಾರ್ಯನಿರ್ವಹಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಬೇಕು, ಸಾರ್ವಜನಿಕ ಸಂಪರ್ಕಾಧಿಕಾರಿಗಳಲ್ಲಿ ಜಿಲ್ಲಾ ಆಸ್ಪತ್ರೆಯ ಪ್ರತಿ ತಜ್ಞ ವೈದ್ಯರ ಹೆಸರು, ಮೊಬೈಲ್ ನಂಬರ್ ಇರಬೇಕು ಹಾಗೂ ಆಸ್ಪತ್ರೆಗೆ ಭೇಟಿ ನೀಡುವವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ತಾಕೀತು ಮಾಡಿದರು.

ಸಿಎಸ್ಆರ್‌ ನಿಧಿಯಡಿ ಹತ್ತು ದಿನದೊಳಗೆ ಜಿಲ್ಲೆಗೆ ಎರಡು ಆಂಬುಲೆನ್ಸ್ ಗಳು ಪೂರೈಕೆಯಾಗಲಿವೆ. ಇವುಗಳಲ್ಲಿ ಒಂದನ್ನು ಗುಡ್ಡಗಾಡು ಪ್ರದೇಶವಾದ ಸಾತನೂರು-ಕೋಡಿಹಳ್ಳಿ ಭಾಗಕ್ಕೆ ಹಾಗೂ ಇನ್ನೊಂದು ರಾಮನಗರ ವ್ಯಾಪ್ತಿಗೆ ಉಪಯೋಗಿಸುವಂತೆ ಅವರು ನಿರ್ದೇಶನ ನೀಡಿದರು.

ಟಿಬಿ ಕಾಯಿಲೆ ಬಗ್ಗೆ ಜಿಲ್ಲೆಯಲ್ಲಿ ಅರಿವು ಮೂಡಿಸಬೇಕು, ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ 4.5 ಲಕ್ಷ ಜನರು ಬಲಿಯಾಗುತ್ತಿದ್ದಾರೆ, ಜಿಲ್ಲೆಯಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಅಭಿಯಾನ ಹಮ್ಮಿಕೊಂಡು ವಾಹನಗಳಲ್ಲಿ ರಿಪ್ಲೆಕ್ಟರ್ ಹಾಕಿಕೊಳ್ಳುವ ಬಗ್ಗೆ ಮಾಹಿತಿ ನೀಡಬೇಕು ಜಿಲ್ಲಾ ಸಾರಿಗೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಉಪ ವಿಭಾಗಾಧಿಕಾರಿ ಬಿನೋಯ್ , ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ನಾಮ ನಿರ್ದೇಶಕ ಸದಸ್ಯರು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್‌.......................

ಸಣ್ಣ ರೈತರ ಹಿತ ಕಾಯಲು ಕೃಷಿ ಇಲಾಖೆ ಕ್ರಮ

ರಾಮನಗರ: ಜಿಲ್ಲೆಯ ಸಣ್ಣ ರೈತರ ಹಿತ ಕಾಪಾಡಲು ಕೃಷಿ ಇಲಾಖೆಯಿಂದ ಸಾಧ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ವಹಿಸಬೇಕು. ಅವರು ಸಾಲ ಸೌಲಭ್ಯಗಳನ್ನು ಮಂಜೂರು ಮಾಡಲು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸಂಬಂಧಿಸಿದ ಬ್ಯಾಂಕುಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದ ಸಂಸದ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ಬೆಳೆಯಲು ರೈತರಿಗೆ ಹೆಚ್ಚಿನ ಒಲವು ಮೂಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಅಂಬಿಕಾ ಮಾತನಾಡಿ, ರಾಮನಗರ ಜಿಲ್ಲೆಗೆ ರಾಗಿ ಅಧಿಸೂಚಿತ ಬೆಳೆಯಾಗಿದ್ದು, ವಿಮೆ ಶೇ.100ರಷ್ಟು ಕ್ಲೈಮ್ ಆಗಿದೆ. ಬ್ಯಾಂಕ್ ಗಳಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಹಾಗೂ ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಿ ಜಮೀನಿನ ಫಲವತ್ತತೆ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸ್ಮಶಾನಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಎದುರಾಗಬಾರದು. ಈ ದಿಸೆಯಲ್ಲಿ ಕಂದಾಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಸಂಸದರು ತಿಳಿಸಿದಾಗ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ರವರು , ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಸ್ಮಶಾನಗಳಿವೆ ಜಾತಿವಾರು ಸ್ಮಶಾನಗಳಿಗೆ ಅವಕಾಶವಿಲ್ಲ ಆದರೆ ಮತಿಯವಾರು ಸ್ಮಶಾನಗಳಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಅತ್ಯಂತ ಪ್ರಮುಖ ವಿಷಯ, ಸೂಕ್ತವಾದ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದರೆ ಆದಷ್ಟು ಕಾಯಿಲೆಗಳಿಗೆ ಮುಕ್ತಿ ನೀಡಿದಂತಾಗುತ್ತದೆ. ಕಸ ಸಂಗ್ರಹಿಸುವ ಗಾಡಿಗಳು ದುರ್ವಾಸನೆ ಬೀರದಂತೆ ತಡೆಯುವ ಹೊದಿಕೆಗಳನ್ನು ಮುಚ್ಚಿಕೊಂಡು ಬರಬೇಕು, ಚರಂಡಿ ಹಾಗೂ ಗಟಾರದ ಕಸವನ್ನು ತೆಗೆಯಬೇಕು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಎರಡು ತಿಂಗಳಿಗೊಮ್ಮೆ ಈ ವಿಷಯಗಳಿಗೆ ಸಂಬಂಧಿಸಿದಂತೆ ಜನತಾದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಸಮಸ್ಯೆಗಳನ್ನು ತಿಳಿಯಲು ಖುದ್ದು ಜನಸಾಮಾನ್ಯರ ಬಳಿಗೆ ತೆರಳಬೇಕು ಎಂದು ಸಂಸದರು ಸೂಚಿಸಿದರು.

ಇದಕ್ಕೆ ಜಿಲ್ಲಾಧಿಕಾರಿಯವರು ತ್ಯಾಜ್ಯ ಸುರಿಯುವ ಜಿಲ್ಲೆಯ 31 ಕಡೆ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಅಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದರು.

ರಾಮನಗರ ನಗರಸಭೆಯ ಪೌರಾಯುಕ್ತ ಜಯಣ್ಣ ಮಾತನಾಡಿ, ಬ್ಲಾಕ್ ಸ್ಪಾಟ್‌ಗಳಲ್ಲಿ ಕಸ ಹಾಕುವ ಜನರಿಂದ ಇದುವರೆಗೂ 95 ಸಾವಿರ ರು.ಗಳ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

ಜಲ್ ಜೀವನ್ ಮಿಷನ್ ಯೋಜನೆಯಡಿ ಏಜೆನ್ಸಿಗಳು ಕೈಗೊಂಡಿರುವ ಕಾಮಗಾರಿಯನ್ನು ರ‍್ಯಾಂಡಮ್ ಆಗಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗಳ ಗುಣಮಟ್ಟ ತಿಳಿದುಕೊಳ್ಳುವಂತೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲವು ಕಡೆ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಮಾಹಿತಿ ನೀಡುವಂತೆ ಸಂಸದರು ಸೂಚಿಸಿದರು.

ಕೆಂಗೇರಿ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಪರ್ಕಿಸುವ ಜಂಕ್ಷನ್‌ನಲ್ಲಿ ಉಂಟಾಗುವ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗದ ಬಗ್ಗೆ ಮಾಹಿತಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಅವರಿಗೆ ಮಂಜುನಾಥ್ ಸೂಚನೆ ನೀಡಿದರು.

17ಕೆಆರ್ ಎಂಎನ್ 5,6.ಜೆಪಿಜಿ

ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದ ಡಾ.ಸಿ.ಎನ್ .ಮಂಜುನಾಥ್ ಅಧ್ಯಕಷತೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!