ಸಮಕಾಲೀನ ಸಮಾಜಕ್ಕೆ ವಿವೇಕಾನಂದರ ಚಿಂತನೆಗಳ ಅಗತ್ಯವಿದೆ: ಎಲ್.ಎನ್. ಮುಕಂದರಾಜ್

KannadaprabhaNewsNetwork | Published : Dec 23, 2024 1:02 AM

ಸಾರಾಂಶ

ಒಬ್ಬ ಲೇಖಕ ಬೆಳೆಯಬೇಕಾದರೆ ಪ್ರಕಾಶಕ ಮತ್ತು ಓದುಗರು ತುಂಬಾ ಮುಖ್ಯ. ಈ ಇಬ್ಬರೂ ಕೂಡ ಲೇಖಕ ಬೆಳೆಯಲು ಸಹಕಾರ ನೀಡಬೇಕು. ಸಹೃದಯರು ಪುಸ್ತಕಗಳನ್ನು ಖರೀದಿಸಿ ಓದುವ ಮೂಲಕ‌ ಲೇಖಕರ ಪ್ರೋತ್ಸಾಹಿಸಬೇಕು .

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಕಾಲೀನ ಸಮಾಜಕ್ಕೆ ಸ್ವಾಮಿ ವಿವೇಕಾನಂದರ ಅಮೂಲ್ಯವಾದ ಆಲೋಚನೆ ಮತ್ತು ಚಿಂತನಾ ಕ್ರಮದ ಅಗತ್ಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕಂದರಾಜ್ ಪ್ರತಿಪಾದಿಸಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶನ ಆವರಣದಲ್ಲಿನ ಪರಿಚಯ ಪುಸ್ತಕ ಪ್ರಕಾಶನ ಮಳಿಗೆಯಲ್ಲಿ ನಡೆದ ಕೆ.ಎಸ್.ಹರೀಶ್ ಕುಮಾರ್ ಅವರ ವಿವೇಕಾ ವಾಣಿ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ಜನರಿಗೆ ಅಗತ್ಯವಿರುವ ಆಧ್ಯಾತ್ಮಿಕ ಮೌಲ್ಯಗಳು ವಿವೇಕಾನಂದರ ಚಿಂತನೆಗಳಲ್ಲಿ ಅಡಗಿವೆ. ಆದರೆ, ಬಹುತೇಕರು ವಿವೇಕಾನಂದರನ್ನು ಮಾತ್ರವಲ್ಲ ಬುದ್ಧ, ಬಸವ, ಗಾಂಧಿ, ಬಾಬಾ ಸಾಹೇಬ್, ಕುವೆಂಪು ಅವರ ವಿಚಾರಧಾರೆಗಳನ್ನು ಸರಿಯಾಗಿ ಓದಿಕೊಂಡಿಲ್ಲ. ಅರ್ಥೈಸಿಕೊಂಡಿಲ್ಲ ಬೇಸರ ವ್ಯಕ್ತಪಡಿಸಿದರು.

ಕುವೆಂಪು ಅವರ ವ್ಯಕ್ತಿತ್ವದ ಮೇಲೆ ರಾಮಕೃಷ್ಣ ಪರಮಹಂಸರ ಮತ್ತು ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಮೌಲ್ಯಗಳು, ವಿಚಾರ ಧಾರೆಗಳು, ಚಿಂತನೆಗಳು ಅಪಾರ ಪ್ರಭಾವ ಬೀರಿವೆ. ಅದಕ್ಕೆ ಕುವೆಂಪು ಶುಧ್ಧ ವೈಚಾರಿಕವಾಗಿ ಬೆಳೆಯಲು ಸಾಧ್ಯವಾಯಿತು ಎಂದು ವಿಶ್ಲೇಷಿದರು.

ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ.ಸತೀಶ್ ಜವರೇಗೌಡ ಮಾತನಾಡಿ, ಒಬ್ಬ ಲೇಖಕ ಬೆಳೆಯಬೇಕಾದರೆ ಪ್ರಕಾಶಕ ಮತ್ತು ಓದುಗರು ತುಂಬಾ ಮುಖ್ಯ. ಈ ಇಬ್ಬರೂ ಕೂಡ ಲೇಖಕ ಬೆಳೆಯಲು ಸಹಕಾರ ನೀಡಬೇಕು. ಸಹೃದಯರು ಪುಸ್ತಕಗಳನ್ನು ಖರೀದಿಸಿ ಓದುವ ಮೂಲಕ‌ ಲೇಖಕರ ಪ್ರೋತ್ಸಾಹಿಸಬೇಕು ಎಂದರು.

ಈ ಸಂದರ್ಭದಲ್ಲಿ ವಿವೇಕಾವಾಣಿ ಪುಸ್ತಕದ ಕರ್ತೃ ಕೆ.ಎಸ್. ಹರೀಶ್ ಕುಮಾರ್, ಪರಿಚಯ ಪುಸ್ತಕ ಪ್ರಕಾಶನದ ಸಂಸ್ಥಾಪಕ ಎಂ.ಎನ್. ಶಿವಕುಮಾರ್ ಆರಾಧ್ಯ, ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೆಚ್.ಎಂ. ನಾಗೇಶ, ಪತ್ರಕರ್ತೆ ಗೊರೂರು ಪಂಕಜ, ಲೇಖಕಿ ನಂದಾದೀಪ, ಯುವ ಸಾಹಿತಿ ಮೊಹಮ್ಮದ್ ಅಜರುದ್ದೀನ್, ಚಿಂತಕ ರಾಜೇಂದ್ರಸಿಂಗ್ ಬಾಬು ಉಪಸ್ಥಿತರಿದ್ದರು.

Share this article