ವರಿಷ್ಠರು ಸೂಚಿಸಿದರೆ ಉತ್ತರ ಕನ್ನಡ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ: ಶಾಸಕ ಭೀಮಣ್ಣ ನಾಯ್ಕ

KannadaprabhaNewsNetwork | Published : Jan 17, 2024 1:49 AM

ಸಾರಾಂಶ

ಎಚ್.ಕೆ. ಪಾಟೀಲ ನೇತೃತ್ವದಲ್ಲಿ ಲೋಕಸಭೆ ಅಭ್ಯರ್ಥಿ ಆಯ್ಕೆ ಕುರಿತು ಹಲವು ಬಾರಿ ಸಭೆ ಈಗಾಗಲೇ ನಡೆದಿದೆ. ಎಐಸಿಸಿ ಮಟ್ಟದಲ್ಲಿ ನಿರ್ಧಾರವಾಗಲಿದ್ದು, ಒಂದೊಮ್ಮೆ ನಾನೇ ಅಭ್ಯರ್ಥಿ ಆಗಬೇಕು ಎಂಬ ಸೂಚನೆ ಬಂದರೆ ಸ್ಪರ್ಧಿಸುತ್ತೇನೆ ಎಂದು ಹೇಳಿದ ಶಾಸಕ ಭೀಮಣ್ಣ ನಾಯ್ಕ.

ಶಿರಸಿ:ಪಕ್ಷದ ವರಿಷ್ಠರ ಮಾತನ್ನು ನಾನು ಎಂದೂ ಮೀರಿಲ್ಲ. ಒಂದೊಮ್ಮೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿದರೆ ಅವರ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದಿದ್ದು ನಾಯಕರ ಆದೇಶಕ್ಕೆ ಅನುಗುಣವಾಗಿ ಕಾರ್ಯ ಮಾಡುತ್ತೇನೆ. ಬಂಗಾರಪ್ಪನವರ ಸೂಚನೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನಿಂದಲೂ ಸ್ಪರ್ಧಿಸಿ ಸೋತಿದ್ದೆ. ಬಳಿಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಹೋದಾಗಲೂ ಪಕ್ಷದ ವರಿಷ್ಠರ ಸೂಚನೆಯಂತೆ ಯಲ್ಲಾಪುರ ಕ್ಷೇತ್ರಕ್ಕೆ ತೆರಳಿ ಸ್ಪರ್ಧಿಸಿದ್ದೇನೆ. ಈಗಲೂ ಅವರ ಸೂಚನೆಯಂತೆ ಶಿರಸಿಯಿಂದ ಸ್ಪರ್ಧಿಸಿ ಈಗ ಶಾಸಕನಾಗಿದ್ದೇನೆ. ಎಚ್‌.ಕೆ. ಪಾಟೀಲ ನೇತೃತ್ವದಲ್ಲಿ ಲೋಕಸಭೆ ಅಭ್ಯರ್ಥಿ ಆಯ್ಕೆ ಕುರಿತು ಹಲವು ಬಾರಿ ಸಭೆ ಈಗಾಗಲೇ ನಡೆದಿದೆ. ಎಐಸಿಸಿ ಮಟ್ಟದಲ್ಲಿ ನಿರ್ಧಾರವಾಗಲಿದ್ದು, ಒಂದೊಮ್ಮೆ ನಾನೇ ಅಭ್ಯರ್ಥಿ ಆಗಬೇಕು ಎಂಬ ಸೂಚನೆ ಬಂದರೆ ಸ್ಪರ್ಧಿಸುತ್ತೇನೆ ಎಂದರು.ಹಿಂದುತ್ವದ ಮಾತು:ಅನಂತಕುಮಾರ ಹೆಗಡೆ ವರ್ತನೆ ಎಲ್ಲರಿಗೂ ಗೊತ್ತಿದೆ. ಆದರೆ ಕೇಂದ್ರ, ರಾಜ್ಯ ಚುನಾವಣೆ ಬಂದಾಗ ಮಾತ್ರ ಇಂತಹ ಹಿಂದುತ್ವದ ಮಾತು ಹೇಳುತ್ತಾರೆ. ಸ್ವಾರ್ಥಕ್ಕಾಗಿ ಹಿಂದುತ್ವ ಪ್ರತಿಪಾದನೆ ಅವರದ್ದು ಎಂಬುದು ಎಲ್ಲರಿಗೂ ತಿಳಿದಿದೆ. ನಾನು ಹಿಂದೂವಲ್ಲವೇ? ದೇಶ ಒಗ್ಗಟ್ಟಾಗಿರಬೇಕು ಎಂಬ ಸ್ವಾತಂತ್ರ್ಯ ಹೋರಾಟಗಾರರ ಕನಸಿಗೆ ನೀವೇನು ಬೆಲೆ ಕೊಟ್ಟಿದ್ದೀರಿ? ಧರ್ಮ ಧರ್ಮದ ನಡುವೆ ಬೆಂಕಿ ಹಚ್ಚಿ, ಸೈನಿಕರ ಬಲಿ ಕೊಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಸತ್ಯ ಸಂಗತಿ ಯಾವುದೂ ಹೇಳುತ್ತಿಲ್ಲ. ಜನ್‌ಧನ್ ಖಾತೆ ಮೂಲಕ ಸಾರ್ವಜನಿಕರಿಗೆ ಹಣ ಹಾಕುತ್ತೇವೆ ಎಂದಿದ್ದರು. ಈಗ ಎಲ್ಲ ಮರೆತು ಮತ್ತೆ ಚುನಾವಣೆ ಬಂದಾಗ ಈ ರೀತಿಯ ಹಿಂದುತ್ವದ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಭೀಮಣ್ಣ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಮೇಲೆ ಅನಂತಕುಮಾರ ಹೆಗಡೆ ಮಾಡಿರುವ ಅಪವಾದ, ಬಳಿಸಿದ ಶಬ್ದ, ಏಕವಚನ ಮಾತನ್ನು ಎಲ್ಲರೂ ವಿರೋಧಿಸಿದ್ದಾರೆ ಎಂದ ಶಾಸಕರು, ಸರ್ಕಾರ ಬಂದು 100 ದಿನದಲ್ಲಿಯೇ ಘೋಷಿಸಿದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ಬಡವರ ಪರವಾಗಿದೆ. ಮುಖ್ಯಮಂತ್ರಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದರು.ರಾಮಮಂದಿರ ನಿರ್ಮಾಣಕ್ಕೆ ಹಲವು ವರ್ಷಗಳ ಹಿಂದೆಯೇ ಇಟ್ಟಿಗೆ ಪೂಜೆ ಮಾಡಿ ಕಳಿಸುವ ಮೂಲಕ ಸಾರ್ವಜನಿಕರು ರಾಮಮಂದಿರಕ್ಕೆ ಬೆಂಬಲ ನೀಡಿದ್ದಾರೆ. ಅದನ್ನೂ ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿ ಪ್ರಚೋದನಾಕಾರಿ ಮಾತನ್ನು ಅನಂತಕುಮಾರ ಹೆಗಡೆ ಬಿಡಲಿ. ಸಿದ್ಧಾಂತದ ಮೇಲೆ, ಸಾಧನೆಯ ಮೇಲೆ ಮತ ಕೇಳಲಿ. ಆಪಾದನೆ ಮಾಡಿ, ಆದರೆ ಶಬ್ದ ಬಳಕೆಯಲ್ಲಿ ನೀವು ಬಂದ ಕುಟುಂಬವನ್ನು ಗಮನಿಸಿಕೊಂಡು ಮಾತನಾಡಿ ಎಂದರು ಸಲಹೆ ನೀಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಎಸ್‌.ಕೆ. ಭಾಗ್ವತ, ದೀಪಕ ದೊಡ್ಡೂರು, ಸಂತೋಷ ಶೇಟ್ಟಿ, ಜ್ಯೋತಿ ಪಾಟೀಲ ಇದ್ದರು.

Share this article