ಅಣ್ಣೇಚಾಕನಹಳ್ಳೀಲಿ ಪ್ರತಿಮೆ ಅನಾವರಣ
ಸಾವಿರಾರು ವರ್ಷಗಳಿಂದ ಹಿಂದುಳಿದು, ಶೋಷಣೆಗೆ ತುಳಿತಕ್ಕೆ ಒಳಗಾಗಿರುವ ಕಾರಣದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಮತ್ತು ಸಂಘಟಿತರಾಗಲು ಹಿಂದುಳಿದ ಜನಾಂಗದವರಿಗೆ ಈ ರೀತಿಯ ಕಾರ್ಯಕ್ರಮಗಳ ಅವಶ್ಯವಾಗಿದೆ. ಒಬ್ಬ ಮಹನೀಯ ವ್ಯಕ್ತಿಯನ್ನು ಸಮುದಾಯದ ಪ್ರತೀಕವನ್ನಾಗಿ ಮಾಡಿಕೊಂಡು, ಅವರ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡು, ನಾಯಕ ಗುಣವಿರುವ ವ್ಯಕ್ತಿಗೆ ಬೆಂಬಲ ನೀಡಬೇಕು. ಹಿಂದುಳಿದವರು ಒಗ್ಗಟಿಲ್ಲದೇ ಹರಿದು ಹಂಚಿ ಹೋದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಅಣ್ಣೇಚಾಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ, ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.‘ನೀವು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ನೀಡಿದ ಬೆಂಬಲದಿಂದಾಗಿ ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಕನಕದಾಸರ ಜಯಂತಿ ಆಚರಣೆಗೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಮಾಡಿದರು. ಅದೇ ರೀತಿ ರಾಜ್ಯದಲ್ಲಿ ನೀವು ನೀಡಿದ ಬೆಂಬಲದಿಂದಾಗಿ ೨ ಸಲ ಮುಖ್ಯಮಂತ್ರಿಗಳಾಗಿ, ನೀಡಿದ ವಚನದಂತೆ ಪ್ರಣಾಳಿಕೆಯ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಸಿದ್ಧರಾಮಯ್ಯನವರು ಷೋಷಿಸಿದ ೫ ಗ್ಯಾರಂಟಿಗಳನ್ನು ಆಡಳಿತ ಚುಕ್ಕಾಣಿ ಹಿಡಿದ ಒಂದು ವರ್ಷದಲ್ಲೇ ಜಾರಿ ಮಾಡುವ ಮೂಲಕ ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭೆ ಚುನಾವಣೆಯಂತೆ ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡಿ, ಅವರಿಗೆ ಶಕ್ತಿ ನೀಡುವ ಜತೆಗೆ ಹಿಂದುಳಿದವರ ಏಳಿಗೆಗೆ ಅವರು ಕೈಗೊಂಡ ಕಾರ್ಯಗಳು ಯಶಸ್ವಿಯಾಗಲು ಸಹಕಾರ ನೀಡಬೇಕು’ ಎಂದು ವಿನಂತಿಸಿದರು.
ಹಾಸನ ಜಿಲ್ಲೆ ಕುರುಬರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಟೇಲ್ ಶಿವರಾಂ, ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎ.ಡಿ.ಚಂದ್ರಶೇಖರ್ ಹಾಗೂ ಶ್ರೇಯಸ್ ಎಂ.ಪಟೇಲ್ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಮಾಜಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ಅವರು ಕ್ರಾಂತಿವೀರ ಸಂಗೋಳಿ ರಾಯಣ್ಣ ಪ್ರತಿಮೆಯ ಅನಾವರಣಗೊಳಿಸಿದರು. ವೇದಿಕೆಯಲ್ಲಿ ಸಮಾಜ ಸೇವಕ ಸಿ.ಡಿ.ದಿವಾಕರ್, ಜಯದೇವ ಆಸ್ಪತ್ರೆಯ ವ್ಯದ್ಯ ಡಾ. ಬೀರೇಶ್, ಮುಖಂಡರಾದ ಲಕ್ಷ್ಮಣ, ಎ.ಡಿ.ಶಾಂತರಾಜು, ಶರತ್, ಕಿರಣ್, ಮಹದೇವು, ಲಕ್ಕಣ್ಣ ಇದ್ದರು.ಹೊಳೆನರಸೀಪುರ ತಾಲೂಕು ಅಣ್ಣೇಚಾಕನಹಳ್ಳಿ ಗ್ರಾಮದಲ್ಲಿ ಮಾಜಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ಸಾರ್ವಜನಿಕ ಸಮಾರಂಭ ಉದ್ಘಾಟಿಸಿದರು.