ದಲಿತರನ್ನು ಕಾಂಗ್ರೆಸ್ ಶೋಷಿಸುತ್ತಾ ಬಂದಿದೆ । ಡಾ.ಅಂಬೇಡ್ಕರ್ ನ್ನು ರಾಜಕೀಯವಾಗಿ ಸೋಲಿಸಿದ್ದು ಇದೇ ಕಾಂಗ್ರೆಸ್
ಕನ್ನಡಪ್ರಭ ವಾರ್ತೆ ಕಡೂರುದಶಕಗಳಿಂದಲೂ ದಲಿತ ಮಾದಿಗ ಸಮುದಾಯಕ್ಕೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನಿರಂತರ ಅನ್ಯಾಯ ಮಾಡುತ್ತಿದೆ ಎಂದು ದಲಿತ ಮುಖಂಡ ಶೂದ್ರ ಶ್ರೀನಿವಾಸ್ ಆರೋಪಿಸಿದರು.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತರನ್ನು ಕಾಂಗ್ರೆಸ್ ಶೋಷಿಸುತ್ತಾ ಬಂದಿದ್ದು, ಡಾ.ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಸೋಲಿಸಿದ್ದು ಇದೇ ಕಾಂಗ್ರೆಸ್ ಎಂಬುದನ್ನು ನಾವಿನ್ನೂ ಮರೆತಿಲ್ಲ. ಮರಣಾನಂತರ ಅಂಬೇಡ್ಕರ್ ಅವರ ದೇಹ ತರಲು ಬಿಡದ ಕಾಂಗ್ರೆಸ್ ಧೋರಣೆ ಕಂಡ ಜಗಜೀವನರಾಂ ಸಹಾಯ ಮಾಡಿದ್ದು ಇತಿಹಾಸದ ಪುಟಗಳಿಂದ ಹೊರಗಿಲ್ಲ ಎಂದರು.1950 ರಲ್ಲಿ ಕೇವಲ 6 ಜಾತಿಗಳಿದ್ದ ಪರಿಶಿಷ್ಟ ಜಾತಿಯಲ್ಲಿ ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ 103 ಜಾತಿಗಳನ್ನು ಸೇರಿಸಿ ದಲಿತರಿಗೆ ಅನ್ಯಾಯ ಮಾಡಿತು. ಇದಕ್ಕೆ ಸಿದ್ದರಾಮಯ್ಯನವರೂ ಹೊರತಾಗಿಲ್ಲ. 2016ರಲ್ಲಿ ಹುಬ್ಬಳ್ಳಿಯಲ್ಲಿ ಅಂದಿನ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಒಳ ಮೀಸಲಾತಿ ಕುರಿತು ಆಯೋಜಿಸಿದ ಸಭೆಯಲ್ಲಿ ಸಿದ್ದರಾಮಯ್ಯ ಇತರ ಜಾತಿಗಳ ಮಾತು ಕೇಳಿ ಒಳ ಮೀಸಲಾತಿ ಕುರಿತು ಚಕಾರ ಎತ್ತಲೇ ಇಲ್ಲ ಎಂದು ದೂರಿದರು.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಸದಾನಂದಗೌಡರು ಮಂಡಿಸಿದ ವರದಿಗೆ ಸಿದ್ದರಾಮಯ್ಯ ಎಳ್ಳು ನೀರು ಬಿಟ್ಟರು. ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಒಳ ಮೀಸಲಾತಿಗೆ ಶಿಫಾರಸ್ಸು ಮಾಡಿತು. ಶೇ. 15 ಮೀಸಲಾತಿಯನ್ನುಶೇ. 17 ಹೆಚ್ಚಿಸಿತು ಎಂದರು.
ಒಳ ಮೀಸಲಾತಿ ವಿರುದ್ಧ ದಾವೆ ನಡೆಯುತ್ತಿದ್ದು ಮುಂದಿನ ಜ. 24 ರಲ್ಲಿ ಸುಪ್ರೀಂ ಕೋರ್ಟ್ ಈ ದಾವೆ ವಿಚಾರಣೆ ಎತ್ತಿ ಕೊಳ್ಳುವ ನಿರೀಕ್ಷೆ ಇದೆ. ತೀರ್ಪು ನಮ್ಮ ಕಡೆ ಬರುವ ಆಶಾ ಭಾವನೆ ಇದೆ. ಆಂದ್ರದ ನಮ್ಮ ನಾಯಕ ಮಂದ ಕೃಷ್ಣ ಮಾದಿಗ ನೇತೃತ್ವದಲ್ಲಿ ಸಭೆ ನಡೆದು ಅಂದು ಪ್ರಧಾನ ಮಂತ್ರಿಗಳೇ ಸಭೆ ಉದ್ಘಾಟಿಸಿ ಒಳ ಮೀಸಲಾತಿ ಬೇಡಿಕೆ ಮುಂದಿಟ್ಟಾಗ ನಾನು ನಿಮ್ಮೊಂದಿಗೆ ಇರುವುದಾಗಿ ತಿಳಿಸಿದ್ದರು. ಇದು ನಮ್ಮ ಮುನ್ನೆಡೆಗೆ ಸಾಕ್ಷಿ ಎಂದರು.ಜ. 3ರಂದು ಮಾದಿಗ ಮುನ್ನಡೆ ಆತ್ಮಗೌರವ ಜಿಲ್ಲಾ ಮಟ್ಟದ ಸಮಾವೇಶವನ್ನು ಕಡೂರು ಪಟ್ಟಣದ ಸಮೀಪದ ಮಲ್ಲೇಶ್ವರ ಗ್ರಾಮದ ಬೆಂಕಿ ಲಕ್ಷ್ಮಯ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದು ಸಾವಿರಾರು ಜನ ಸೇರಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹುಲ್ಲೇಹಳ್ಳಿ ಲಕ್ಷ್ಮಣ್,ರಾಘವೇಂದ್ರ, ಸಗುನಪ್ಪ, ತೀರ್ಥ, ಶಾಂತಮೂರ್ತಿ, ಹನುಮಂತಪ್ಪ, ವಾಸು ಕೆ.ವೈ. , ಪ್ರಶಾಂತ್, ಗಣೇಶ್, ಬಸವರಾಜ್, ದೇವರಾಜ್ ನಂಜುಂಡ, ಮೂರ್ತಿ ಪ್ರಸನ್ನ ಮತ್ತಿತರ ಮುಖಂಡರು ಇದ್ದರು.28ಕೆಕೆಡಿಯು2.
ಕಡೂರು ತಾಲೂಕು ಮಾದಿಗ ಸಮಾಜದ ಮುಖಂಡರು ಮಾದಿಗ ಮುನ್ನಡೆ ಸಮಾವೇಶದ ಕರಪತ್ರ ಬಿಡುಗಡೆ ಮಾಡಿದರು.