- ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ, ಆಯುಕ್ತ ಹುಲ್ಮನಿ ತಿಮ್ಮಪ್ಪಗೆ ರೈತರ ಮನವಿ । ಭೂಮಿ ಬೆಲೆ ಈಗ ಜಾಸ್ತಿಯಾಗಿದೆ: ರೈತರು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ವಸತಿ ಯೋಜನೆಗೆ ಜಮೀನು ನೋಂದಣಿ ಮಾಡಿಕೊಡುವಂತೆ ಕುಂದುವಾಡ ಗ್ರಾಮದ 53-19.8 ಎಕರೆ ಪ್ರದೇಶದ ಗ್ರಾಮಸ್ಥರಿಗೆ ದೂಡಾದಿಂದ ಮತ್ತೆ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಸತಿ ಯೋಜನೆ ಕೈ ಬಿಡುವಂತೆ ಗ್ರಾಮದ ರೈತರು ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಆಯುಕ್ತ ಹುಲ್ಮನಿ ತಿಮ್ಮಪ್ಪ ಅವರಿಗೆ ಒತ್ತಾಯಿಸಿ, ಮನವಿ ಸಲ್ಲಿಸಿದರು.ಇದೇ ವೇಳೆ ಕುಂದುವಾಡದ ರೈತರು ಮಾತನಾಡಿ, ವಸತಿ ಯೋಜನೆ ಕೈ ಬಿಡುವಂತೆ ದೂಡಾ ಹೇಳಿದರೆ, ಯೋಜನೆ ಮುಂದುವರಿಸುವಂತೆ ನಗರಾಭಿವೃದ್ಧಿ ಇಲಾಖೆ ಪತ್ರ ಬರೆದಿದೆ. ನಾವು ಭೂಮಿ ಕೊಡುವುದಿಲ್ಲ ಎಂದು ಮುಂಚೆಯೇ ಸ್ಪಷ್ಟವಾಗಿ ಹೇಳಿದ್ದೇವೆ. ಈಗಲೂ ಹೇಳುತ್ತಿದ್ದೇವೆ. ನಾಲ್ಕೂವರೆ ವರ್ಷದಿಂದ ನಮ್ಮನ್ನು ಅಲೆದಾಡಿಸಲಾಗಿದೆ. ಯಾವುದೇ ಕಾರಣಕ್ಕೂ ನಾವು ಜಮೀನನ್ನು ಕೊಡುವ ಪ್ರಶ್ನೆಯೇ ಇಲ್ಲ ಎಂದರು.
ದೂಡಾಗೆ ಅಲೆದಾಡಿ ರೋಸಿಹೋಗಿದ್ದೇವೆ:ಈ ಹಿಂದೆ ಜಮೀನು ಖರೀದಿಗೆ ದೂಡಾ ವಿಳಂಬ ಮಾಡಿದ್ದರಿಂದ ನಾವು ಅಂದೇ ಭೂಮಿ ಕೊಡುವುದಿಲ್ಲವೆಂದು ಹೇಳಿದ್ದೆವು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಕುಂದವಾಡ ಗ್ರಾಮದಲ್ಲಿ ವಸತಿ ಯೋಜನೆ ಕೈ ಬಿಡುವಂತೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ಪತ್ರ ಬರೆಯಲಾಗಿತ್ತು. ದೂಡಾಗೆ ಅಲೆದಾಡಿ ನಾವು ರೋಸಿ ಹೋಗಿದ್ದೇವೆ. ಸಚಿವರ ಅಧ್ಯಕ್ಷತೆಯ ಸಭೆ ನಿರ್ಣಯ ಮಾಡಿ, ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದ ನಂತರ, ನಿಟ್ಟಿಸಿರು ಬಿಟ್ಟಿದ್ದೆವು. ಈಗ ಮತ್ತೆ ನೋಟಿಸ್ ಕೊಟ್ಟರೆ ಏನರ್ಥ ಎಂದು ರೈತರು ಪ್ರಶ್ನಿಸಿದರು.
ಭೂಮಿ ಬೆಲೆ ಜಾಸ್ತಿಯಾಗಿದೆ:ಈ ಹಿಂದೆಯೇ ಬೆಲೆ ನಿಗದಿ ಮಾಡಿ, ಖರೀದಿ ಪ್ರಕ್ರಿಯೆ ವಿಳಂಬ ಮಾಡಿದ್ದೀರಿ. ನಮ್ಮ ಊರಿನ ಭೂಮಿಯ ಬೆಲೆ ಈಗ ಹೆಚ್ಚಾಗಿದೆ. ಚಾಲ್ತಿ ನೋಂದಣಿ ಕಚೇರಿ ದರಗಳೂ ಪರಿಷ್ಕರಣೆಯಾಗಿವೆ. ನಾಲ್ಕೂವರೆ ವರ್ಷ ಕಾಲ ಭೂಮಿ ತೆಗೆದುಕೊಳ್ಳದೇ, ರೈತರನ್ನು ವಿನಾಕಾರಣ ಅಲೆದಾಡಿಸಲಾಗಿದೆ. ಹಾಗಾಗಿ, ನಾವು ಜಮೀನನ್ನು ನಮ್ಮಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದ್ದೇವೆ. ಕುಂದುವಾಡ ವಸತಿ ಯೋಜನೆ ಕೈಬಿಡಿ. ನೇರ ಖರೀದಿಗಾಗಲೀ ಅಥವಾ ಶೇ.50-50 ಅನುಪಾತದ ಅಭಿವೃದ್ಧಿಗೆ ಜಮೀನು ನೀಡಲು ಒಪ್ಪಿಗೆ ಇಲ್ಲ ಎಂದರು.
ರೈತರ ಹಕ್ಕಿಗೆ ಭಂಗ:ನಗರಾಭಿವೃದ್ಧಿ ಇಲಾಖೆ ಕುಂದುವಾಡ ವಸತಿ ಯೋಜನೆ ಮುಂದುವರಿಸಲು ಸೂಚಿಸಿರುವುದು ರೈತರ ಮೇಲೆ ಮರಣ ಶಾಸನ ಬರೆದಂತಾಗಿದೆ. ಇಂತಹ ಆದೇಶದಿಂದ ನಮಗೆ ಜೀವನ ನಡೆಸುವುದೇ ದುಸ್ಥರವಾಗಿದೆ. ಜಮೀನು ಕೆಲಸ ಬಿಟ್ಟು, ಕಚೇರಿ ಅಲೆದಾಡುವಂತಾಗಿದೆ. ರೈತರು ಆತ್ಮಹತ್ಯೆ ದಾರಿ ಹಿಡಿಯುವ ಸ್ಥಿತಿ ಎದುರಾಗಿದೆ. ವಸತಿ ಯೋಜನೆಯಿಂದ ಕುಂದುವಾಡ ಗ್ರಾಮದ ಜಮೀನುಗಳನ್ನು ಕೈಬಿಟ್ಟು, ನಮಗೆ ಎನ್ಓಸಿ ನೀಡಬೇಕು. ಜಮೀನುಗಳನ್ನು ವಹಿವಾಟು ಮಾಡದಂತೆ ದೂಡಾದಿಂದ ದಾವಣಗೆರೆ ಉಪ ನೋಂದಣಾಧಿಕಾರಿ ಕಚೇರಿಗೆ ಪತ್ರ ಬರೆದಿದ್ದು ನಮ್ಮ ಹಕ್ಕಿಗೆ ಭಂಗತರುವಂತಹ ಕ್ರಮವಾಗಿದೆ ಎಂದು ಆಕ್ಷೇಪಿಸಿದರು.
ಗ್ರಾಮದ ರೈತರಾದ ನರಸಪ್ಪರ ಶಿವಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ರೇವಣ್ಣಪ್ಪ, ಆನಂದಪ್ಪ, ಭೀಮಪ್ಪ, ಈಶ್ವರಪ್ಪ, ರಾಮಪ್ಪ, ಹನುಮಂತ, ಮಧು ನಾಗರಾಜ ಸೇರಿದಂತೆ ಮತ್ತಿರರಿದ್ದರು.- - -
(ಬಾಕ್ಸ್) * ಇಲಾಖೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಪಾಲು ವಿಭಾಗ, ಕ್ರಯಪತ್ರ, ಪೌತಿ, ಸಾಲಕ್ಕಾಗಿ ಅಗ್ರಿಮೆಂಟ್ ಮಾಡಿಕೊಳ್ಳುವುದಕ್ಕೂ ಪರದಾಡುವಂತಹ ಸ್ಥಿತಿ ಬಂದೊದಗಿದೆ. ತಕ್ಷಣವೇ ಉಪ ನೋಂದಣಾಧಿಕಾರಿಗೆ ಬರೆದ ಪತ್ರವನ್ನು ಹಿಂಪಡೆಯಬೇಕು. ಕುಂದುವಾಡದ ವಸತಿ ಯೋಜನೆ ಕೈಬಿಡಬೇಕು. ನಮಗೆ ವಹಿವಾಟು ಮಾಡಲು ಅನುಕೂಲ ಮಾಡಿಕೊಡಬೇಕು. ಒಂದುವೇಳೆ ದೂಡಾ, ನಗರಾಭಿವೃದ್ಧಿ ಇಲಾಖೆ ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಕುಂದವಾಡ ಗ್ರಾಮಸ್ಥರು ಎಚ್ಚರಿಸಿದರು.- - -
-13ಕೆಡಿವಿಜಿ16, 17:ಕುಂದುವಾಡ ವಸತಿ ಯೋಜನೆ ಕೈಬಿಡುವಂತೆ ದಾವಣಗೆರೆಯಲ್ಲಿ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಆಯುಕ್ತ ಹುಲ್ಮನಿ ತಿಮ್ಮಪ್ಪ ಅವರಿಗೆ ಕುಂದುವಾಡ ರೈತರು ಮನವಿ ಅರ್ಪಿಸಿದರು.