ಶಿವಮೊಗ್ಗ: ಜಿಲ್ಲೆಯ ಹಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಲಾಶಯಗಳ ಒಳ ಹರಿವು ಹೆಚ್ಚಾಗುತ್ತಿದೆ. ಜೋರು ಮಳೆ ಕಾರಣ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಸಾಗರ, ಶಿವಮೊಗ್ಗ ತಾಲೂಕಿನಲ್ಲಿ ಶುಕ್ರವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ಚಿಕ್ಕಮಗಳೂರು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣ ನೀರು ಹರಿದು ಬರುತ್ತಿದ್ದು, ಜಲಾಶಯಮಟ್ಟ 167.1 ಅಡಿಗೆ ( ಗರಿಷ್ಠ 186 ಅಡಿ) ತಲುಪಿದೆ. 71.53 ಟಿಎಂಸಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯ ಇರುವ ಜಲಾಶಯದಲ್ಲಿ ಸದ್ಯ 49.83 ಟಿಎಂಸಿ (ಶೇ.69.66) ನೀರು ಸಂಗ್ರಹವಾಗಿದೆ. 21982 ಕ್ಯುಸೆಕ್ ಒಳ ಹರಿವಿದೆ. ಲಿಂಗನಮಕ್ಕಿ ಒಳಹರಿವು ಹೆಚ್ಚಳ:
ಜಲನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ಲಿಂಗನಮಕ್ಕಿ ಜಲಾಶಯದ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶುಕ್ರವಾರ 41036 ಕ್ಯುಸೆಕ್ ನೀರು ಹರಿದು ಬಂದಿದೆ. 1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯ ಮಟ್ಟ ಸದ್ಯ 1789.45 ಅಡಿಗೆ ಏರಿಕೆ ಕಂಡಿದೆ. 151.64 ಟಿಎಂಸಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯವಿದ್ದು, ಸದ್ಯ 72.05 ಟಿಎಂಸಿ (ಶೇ.47.52) ನೀರು ಸಂಗ್ರವಿದೆ.
ಭದ್ರಾ ಜಲಾಶಯದ ಪ್ರದೇಶದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಒಳಹರಿವಿನ ಪ್ರಮಾಣ 20000-25000 ಕ್ಯೂಸೆಕ್ ಇದೆ. ಈ ಹಿನ್ನೆಲೆ ಯಾವ ಸಮಯದಲ್ಲಾದರು ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಸ್ಪಿಲ್ವೇ ಗೇಟ್ ಮೂಲಕ ನದಿಗೆ ಬಿಡಲಾಗುವುದು ಮತ್ತು ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಪ್ರಕಟಣೆ ಹೊರಡಿಸಲಾಗಿದೆ.
ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕಾಗಿ, ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಆರ್.ರವಿಚಂದ್ರ ಕೋರಿದ್ದಾರೆ.
ತುಂಗೆಗೆ ಬಾಗಿನ ಅರ್ಪಣೆ
ಬಿಜೆಪಿ ನಗರ ಸಮಿತಿಯಿಂದ ಕೋಟೆ ರಸ್ತೆಯಲ್ಲಿರುವ ಕೋರ್ಪಲಯ್ಯ ಛತ್ರದ ಬಳಿಯಿರುವ ತುಂಗಾನದಿ ತೀರದ ಮಂಟಪದಲ್ಲಿ ಶುಕ್ರವಾರ ಬಾಗಿನ ಅರ್ಪಿಸಲಾಯಿತು.ಈ ವೇಳೆ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ, ದೇವರ ದಯೆಯಿಂದ ನಾಡಿನಾದ್ಯಂತ ಮಳೆಯಾಗುತ್ತಿದೆ. ಶಿವಮೊಗ್ಗದಲ್ಲಿ ತುಂಗೆ ಕೂಡ ಮೈದುಂಬಿ ಹರಿಯುತ್ತಿದ್ದಾಳೆ. ಈ ಪವಿತ್ರ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಯಂತೆ ಬಾಗಿನ ಅರ್ಪಿಸಿ, ತುಂಗೆಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ತುಂಗಾನದಿ ರಾಜ್ಯದ ಕೃಷಿ, ಕುಡಿಯುವ ನೀರು ಮತ್ತು ಪರಿಸರ ಸಮತೋಲನದ ಪ್ರಮುಖ ಮೂಲವಾಗಿದ್ದು, ತುಂಗೆಗೆ ಬಾಗಿನ ಅರ್ಪಿಸುವ ಸಂಸ್ಕೃತಿ ನಮ್ಮ ನಾಡಿನ ನದೀಪೂಜಾ ಪರಂಪರೆಯ ಪ್ರತಿಬಿಂಬವಾಗಿದೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲೆ ಹಾಗೂ ನಗರದ ಸಮಿತಿಯ ಪ್ರಮುಖರು, ವಿವಿಧ ಮೋರ್ಚಾಗಳ ಸದಸ್ಯರು, ಧಾರ್ಮಿಕ ಮುಖಂಡರು ಮತ್ತಿತರರಿದ್ದರು.
ಕುಸಿದ ದನದ ಕೊಟ್ಟಿಗೆ:
ವೃದ್ಧೆಯ ಸ್ಥಿತಿ ಗಂಭೀರರಿಪ್ಪನ್‍ಪೇಟೆ: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹರತಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಂಜುವಳ್ಳಿ ಗ್ರಾಮದಲ್ಲಿ ಜಾನುವಾರು ಕೊಟ್ಟಗೆ ಕುಸಿದು ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆಯೊಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆ ದಾಖಲಾಗಿರುವ ಘಟನೆ ನಡೆದಿದೆ.ನಂಜುವಳ್ಳಿ ಗ್ರಾಮದ ಇಂದಿರಾ ಎಂಬ ವೃದ್ಧೆಗೆ ಗಂಭೀರ ಗಾಯಗಳಾಗಿದ್ದು, ಎದೆಯ ಪಕ್ಕೆಲುಬು ಮುರಿದಿದೆ ಇದರಿಂದ ಶ್ವಾಸಕೋಸದ ತೊಂದರೆಯಿಂದಾಗಿ ಉಸಿರಾಟದ ಸಮಸ್ಯೆ ಉಂಟಾಗಿದೆ. ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆಯಲ್ಲಿ ವೃದ್ಧೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವೃದ್ಧೆಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎನ್ನಲಾಗಿದೆ.ಘಟನೆ ನಡೆದ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.