ದಾಂಡೇಲಿ: ಹಳಿಯಾಳಕ್ಕೆ ನೀರು ಸಾಗಿಸುವ ಯೋಜನೆ ಕುರಿತಂತೆ ಹಳೆ ದಾಂಡೇಲಿಯಲ್ಲಿ ನಿರ್ಮಾಣವಾಗುತ್ತಿರುವ ಪಂಪ್‌ಹೌಸ್ ಸ್ಥಳದಲ್ಲಿ ಕಳೆದ ಸುಮಾರು ೪೦ ವರ್ಷಗಳಿಂದ ಕಟ್ಟಿಕೊಂಡಿದ್ದ ಬಡ ದಲಿತ ಮಹಿಳೆಯ ಗುಡಿಸಲನ್ನು ಯಾವುದೇ ಮುನ್ಸೂಚನೆ ನೀಡದೆ ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಧ್ವಂಸಗೊಳಿಸಿದ ಅಮಾನವೀಯ ಘಟನೆ ಕಳೆದ ವಾರ ನಡೆದಿತ್ತು. ಈ ಕುರಿತು ನ್ಯಾಯಕ್ಕಾಗಿ ಕಳೆದ ೭ ದಿನದಿಂದ ಮಹಿಳೆ ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಹಲವಾರು ವರ್ಷಗಳಿಂದ ಲಕ್ಷ್ಮೀ ಮಹಾದೇವ ಹರಿಜನ ಎಂಬ ದಲಿತ ಮಹಿಳೆ ಈ ಸ್ಥಳದಲ್ಲಿ ವಾಸವಿದ್ದಳು. ಇದು ಇವರ ಮಾವ, ಅತ್ತೆ, ಗಂಡ ಎಲ್ಲರೂ ಬಾಳ್ವೆ ನಡೆಸಿದ ಜಾಗ. ಈಗ ಇಹಲೋಕ ತ್ಯಜಿಸಿದ್ದಾರೆ. ಮಗಳನ್ನು ಮದುವೆ ಮಾಡಿ ಕೊಟ್ಟಿದ್ದಾಳೆ. ಬೇರೆಯವರ ಮನೆಗೆಲಸ ಮಾಡಿ ಬದುಕು ಸಾಗಿಸುತ್ತಿದ್ದಾಳೆ.ಇದೀಗ ಹಳಿಯಾಳ ಸಕ್ಕರೆ ಕಾರ್ಖಾನೆಗೆ ನೀರು ಸಾಗಿಸುವ ಜಾಕ್‌ವೆಲ್ ಮತ್ತು ಪಂಪ್‌ಹೌಸ್ ನಿರ್ಮಾಣ ಕಾರ್ಯಕ್ಕಾಗಿ ಈ ಸ್ಥಳವನ್ನು ಸಕ್ಕರೆ ಕಾರ್ಖಾಯವರು ತಮ್ಮದು ಎಂಬ ದರ್ಪದಲ್ಲಿ ಅಲ್ಲಿದ್ದ ಗುಡಿಸಲನ್ನು ಧ್ವಂಸಗೊಳಿಸಿದ್ದಾರೆ. ಈ ವಿಷಯ ತಿಳಿದ ಪೌರಾಯುಕ್ತರು ಮಹಿಳೆಯನ್ನು ನಗರಸಭೆಗೆ ಕರೆಯಿಸಿ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ನಂತರ ಶಾಸಕ ಆರ್.ವಿ. ದೇಶಪಾಂಡೆ ಕೂಡ ಮಹಿಳೆಗೆ ಅನ್ಯಾಯ ಮಾಡದೇ ಪರ್ಯಾಯವಾಗಿ ಗುಡಿಸಲು ಕಟ್ಟಿಕೊಳ್ಳಲು ಪಟ್ಟಾ ಜಾಗವನ್ನು ಗುರುತಿಸಿ, ಪಟ್ಟಾವನ್ನು ಹಸ್ತಾಂತರಿಸಿದ ಮರುದಿನವೇ ನಸುಕಿನ ಜಾವದಲ್ಲಿ ಬಂದ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಜೆಸಿಬಿಯಿಂದ ಆಕೆಯ ಗುಡಿಸಲನ್ನು ಧ್ವಂಸಗೊಳಿಸಿದ್ದಾರೆ.ಮಾಹಿತಿ ನೀಡದೇ ಗುಡಿಸಲು ತೆರವು ತಪ್ಪು
ದಲಿತ ಮಹಿಳೆಗೆ ಕನಿಷ್ಟ ಒಂದು ದಿನ ಮುಂಚಿತವಾಗಿ ಶಾಸಕ ಆರ್.ವಿ. ದೇಶಪಾಂಡೆಯವರು ಪರ್ಯಾಯ ವ್ಯವಸ್ಥೆಯಾಗಿ ಮನೆಯ ಪಟ್ಟಾ ಕೊಟ್ಟರು. ಅದರ ಮರುದಿನವೇ ದಲಿತ ಮಹಿಳೆ ಇಲ್ಲದ ಸಮಯದಲ್ಲಿ ಬಂದ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಗುಡಿಸಲನ್ನು ತೆರವು ಮಾಡಿದ್ದಾರೆ. ತೆರವು ಮಾಡುವ ಮುಂಚೆ ಮಹಿಳೆಗೆ ತಿಳಿಸಿದ್ದರೆ ಅವರೇ ತೆರವುಗೊಳಿಸಿ ತಮ್ಮ ಸಾಮಗ್ರಿಗಳನ್ನು ಉಳಿಸಿಕೊಳ್ಳುತ್ತಿದ್ದರಲ್ಲವೇ ಎನ್ನುತ್ತಾರೆ ಜಾಂಬವಂತ ಸಂಘಟನೆಯ ಅಧ್ಯಕ್ಷ ಚಂದ್ರಕಾಂತ ನಾಡಿಗೇರ.