ಹಾಸನ ವಿವಿ ಹಾಸನದಲ್ಲೇ ಉಳಿಸುವಂತೆ ಮುಂದುವರಿದ ಪ್ರತಿಭಟನೆ

KannadaprabhaNewsNetwork | Published : Feb 19, 2025 12:50 AM

ಸಾರಾಂಶ

ಹಾಸನ ವಿಶ್ವವಿದ್ಯಾಲಯವನ್ನು ಇಲ್ಲಿಯೇ ಮುಂದುವರಿಸುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು. ಸರ್ಕಾರದ ನಿರ್ಧಾರದಿಂದ ಸಾವಿರಾರು ವಿದ್ಯಾರ್ಥಿಗಳು ಪಕ್ಕದ ಜಿಲ್ಲೆ ಅಥವಾ ರಾಜಧಾನಿಗೆ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು ಹೋಗಬೇಕಾಗುತ್ತದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿ, ಹಾಸನ ವಿಶ್ವವಿದ್ಯಾಲಯವನ್ನು ಇಲ್ಲೇ ಉಳಿಸಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಾಸನ ವಿಶ್ವವಿದ್ಯಾಲಯವನ್ನು ಇಲ್ಲಿಯೇ ಮುಂದುವರಿಸುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು. ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿನಯ್ ಮಾಧ್ಯಮದೊಂದಿಗೆ ಮಾತನಾಡಿ, ಉಪಮುಖ್ಯಮಂತ್ರಿಗಳ ನೇತೃತ್ವದ ಸಂಪುಟ ಉಪಸಮಿತಿಯ ಕಳೆದ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲ್ಪಟ್ಟಿದ್ದ ಎರಡು ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ತೀರ್ಮಾನಿಸಿದೆ ಎಂಬ ವರದಿಯಾಗಿದ್ದು, ಹಾಸನ ಜಿಲ್ಲೆಯಲ್ಲಿ ಹೊಸದಾಗಿ ಶುರುವಾಗಿದ್ದ ಹಾಸನ ವಿಶ್ವವಿದ್ಯಾಲಯವನ್ನು ಸಹ ಮುಚ್ಚಬೇಕಾಗಿರುವುದು ಈ ಜಿಲ್ಲೆಯ ಜನರಿಗೆ ನಿರಾಸೆಯಾಗಿದೆ. ಇದರಿಂದ ಇಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವು ದುಬಾರಿಯಾಗಲಿದೆ. ಪ್ರಸ್ತುತ ನಮ್ಮ ಜಿಲ್ಲೆಯ ಹಾಸನ ವಿಶ್ವವಿದ್ಯಾಲಯದ ವ್ಯಾಪ್ತಿಗೆ ೫೬ ಕಾಲೇಜುಗಳು ಸೇರಿದ್ದು, ಒಟ್ಟು ೨೯ ಸಾವಿರ ವಿದ್ಯಾರ್ಥಿಗಳು (ಸ್ನಾತಕ ಮತ್ತು ಸ್ನಾತಕೋತ್ತರ) ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ ಎಂದರು. ಹಾಗಾಗಿ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಿತದೃಷ್ಟಿಯಿಂದ ಹಾಸನ ವಿಶ್ವವಿದ್ಯಾಲಯವನ್ನು ಮುಚ್ಚದೆ ಮುಂದುವರಿಸಬೇಕು ಹಾಗೂ ಹಾಸನ ವಿಶ್ವವಿದ್ಯಾನಿಲಯದ ನಿರ್ವಹಣೆಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಸರ್ಕಾರದ ನಿರ್ಧಾರದಿಂದ ಸಾವಿರಾರು ವಿದ್ಯಾರ್ಥಿಗಳು ಪಕ್ಕದ ಜಿಲ್ಲೆ ಅಥವಾ ರಾಜಧಾನಿಗೆ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು ಹೋಗಬೇಕಾಗುತ್ತದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿ, ಹಾಸನ ವಿಶ್ವವಿದ್ಯಾಲಯವನ್ನು ಇಲ್ಲೇ ಉಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಡಾ. ಎಸ್.ಜೆ. ಮಹೇಶ್, ಡಾ. ಪುಷ್ಪಾವತಿ, ಡಾ. ಪುಟ್ಟರಾಜಪ್ಪ, ಡಾ. ಅಶೋಕ್, ಡಾ. ಪ್ರೇಮಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article