ಗ್ರಾಮಸಭೆ ನಡೆಯುವಾಗ ಭಾರೀ ಗಾಳಿಗೆ ಗ್ರಾಪಂ ಅಧ್ಯಕ್ಷೆ ಸುಶೀಲಾ, ಸದಸ್ಯರ ಮೇಲೆ ಬಿದ್ದ ಮರದ ರ‍್ಯಾಕ್
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯ ಮಲೆನಾಡಿನಲ್ಲಿ ಗುಡುಗು, ಗಾಳಿ ಸಹಿತ ಮಂಗಳವಾರವೂ ಮಳೆ ಮುಂದುವರಿದು ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದೆ.
ಕಳಸ ಸುತ್ತಮುತ್ತ ಬೆಳ್ಳಂಬೆಳಿಗ್ಗೆ ಭಾರೀ ಗಾಳಿ ಬೀಸಿ, ಕೆಲ ಹೊತ್ತು ಧಾರಾಕಾರವಾಗಿ ಮಳೆ ಸುರಿದಿದೆ. ಹಿರೇಬೈಲ್- ಮರಸಣಿಗೆ ಮಾರ್ಗದಲ್ಲಿ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಕಳಸ- ಮೂಡಿಗೆರೆ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್ ಆಗಿತ್ತು. ಹಿರೇಬೈಲ್, ಮರಸಣಿಗೆ, ಯಡಿಯೂರು ಸುತ್ತಮುತ್ತಾ ಬಲವಾಗಿ ಗಾಳಿ ಹಾಗೂ ಮಳೆಯಾಗಿದ್ದು, ಕೆಲ ಸಮಯದ ನಂತರ ಬಿಡುವು ನೀಡಿತು.ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ತರುವೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆ ನಡೆಯುವಾಗ ಭಾರೀ ಗಾಳಿಗೆ ಗ್ರಾಪಂ ಅಧ್ಯಕ್ಷೆ ಸುಶೀಲಾ ಹಾಗೂ ಸದಸ್ಯರ ಮೇಲೆ ಮರದ ರ‍್ಯಾಕ್ ಬಿದ್ದಿದೆ. ಗ್ರಂಥಾಲಯ ನಿರ್ಮಾಣಕ್ಕಾಗಿ ಇಟ್ಟಿದ್ದ ಮರದ ರ‍್ಯಾಕ್ ಗ್ರಾಪಂ ಅಧ್ಯಕ್ಷರು, ಸದಸ್ಯರ ಮೇಲೆ ಬಿದ್ದಿದ್ದು, ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ಚೇರ್ ಗಳು ಪುಡಿಯಾಗಿವೆ.
ಅಧ್ಯಕ್ಷೆ ಸುಶೀಲ ಸೇರಿ ಐವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲೇ ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ.ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ಗಾಳಿ ಸಹಿತ ಮಳೆ ಬಂದಿದ್ದರೆ, ಪಟ್ಟಣದಲ್ಲಿ ಗುಡುಗು ಮಾತ್ರ ಇತ್ತು. ಹರಿಹರಪುರ, ಭಂಡಿಗಡಿ ಸುಮಾರು ಎರಡು ಗಂಟೆಗಳ ಕಾಲ ಸಾಧಾರಣ ಮಳೆಯಾಗಿದೆ. ಹೊಕ್ಕಳಿಕೆ, ಬೋಂಬ್ಲಾಪುರ, ಬಾಸಾಪುರದಲ್ಲೂ ಮಳೆಯಾಗಿದ್ದು, ಮರಗಳು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕದಲ್ಲಿ ಅಡಚಣೆಯಾಗಿತ್ತು. ಬಾಸಾಪುರದ ಚಂದ್ರು ಎಂಬುವವರ ಮನೆ ಮೇಲೆ ಮರ ಬಿದ್ದ ಪರಿಣಾಮ ಹೆಂಚುಗಳು ಪುಡಿಯಾಗಿದ್ದವು.
ಶೃಂಗೇರಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸುಮಾರು ಒಂದು ತಾಸುಗಳ ಕಾಲ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ಎನ್.ಆರ್.ಪುರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಆಗಾಗ ಗುಡುಗು ಇದ್ದು, ಗ್ರಾಮೀಣ ಪ್ರದೇಶದಲ್ಲಿ ಸಾಧಾರಣ ಮಳೆ ಬಂದಿದೆ. ಚಿಕ್ಕಮಗಳೂರು ತಾಲೂಕಿನ ಮಲೆನಾಡು ಪ್ರದೇಶದ ಕೆಲವೆಡೆ ಮಳೆ ಬಂದಿದೆ. ಬಯಲುಸೀಮೆ ತಾಲೂಕುಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿತ್ತು.-- ಬಾಕ್ಸ್--
ಕೊಪ್ಪ ಸುತ್ತಮುತ್ತ ಹಲವೆಡೆ ಸಿಡಿಲು, ಗಾಳಿ ಸಹಿತ ಮಳೆಕೊಪ್ಪ: ಹಲವೆಡೆ ಮಂಗಳವಾರ ಮಧ್ಯಾಹ್ನ ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ಗಡಿಕಲ್ಲು, ಸೂರ್ಯ ದೇವಸ್ಥಾನ, ಜಯಪುರ, ಹರಿಹರಪುರ, ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಬೊಮ್ಲಾಪುರ, ಹೊಕ್ಕಳಿಕೆ, ಭಾಗದಲ್ಲಿ ಸಾಧಾರಣ ಮಳೆಯಾಗಿ, ಏಕಾಏಕಿ ಭಾರೀ ಗಾಳಿ ಬೀಸಿದ ಪರಿಣಾಮ ಅಲ್ಲಲ್ಲಿ ವಿದ್ಯುತ್ ಲೈನ್‌ಗಳ ಮೇಲೆ ಮರ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಬೊಮ್ಲಾಪುರ ಸಮೀಪದ ಬೋಳಾಪುರದ ಚಂದ್ರರವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿಯುಂಟಾಗಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಉಳಿದಂತೆ ಕೆಲವೆಡೆ ಸಾಧಾರಣ ಮತ್ತು ಕೆಲವೆಡೆ ಉತ್ತಮ ಮಳೆಯಾದ ಬಗ್ಗೆ ವರದಿ ಯಾಗಿದೆ.--
ಶೃಂಗೇರಿ ಗುಡುಗು ಸಿಡಿಲು ಗಾಳಿ ಸಹಿತ ಭಾರೀ ಮಳೆಶೃಂಗೇರಿ: ತಾಲೂಕಿನಾದ್ಯಂತ ಮಂಗಳವಾರ ಗುಡುಗು ಸಿಡಿಲು ಗಾಳಿ ಸಹಿತ ಭಾರೀ ಮಳೆ ಸುರಿಯಿತು. ಮಧ್ಯಾಹ್ನ ದಟ್ಟ ಮೋಡ ಕವಿದು ಗಾಳಿ ಆರ್ಭಟದ ನಂತರ ಧಾರಾಕಾರವಾಗಿ ಮಳೆ ಸುರಿಯಲಾರಂಬಿಸಿತು. ಗುಡುಗು ಸಿಡಿಲಿನ ಆರ್ಭಟವೂ ಜೋರಾಗಿತ್ತು.ಪಟ್ಟಣದಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಳೆ ಅಬ್ಬರಿಸಿತು. ಮೆಣಸೆ, ನೆಮ್ಮಾರು, ವಿದ್ಯಾರಣ್ಯ ಪುರ, ಕೆರೆಕಟ್ಟೆ ಸೇರಿದಂತೆ ತಾಲೂಕಿನೆಲ್ಲೆಡೆ ಗುಡುಗು ಸಿಡಿಲಿನ ಆರ್ಭಟ ಸಹಿತ ಮಳೆ ಯಾಗಿದೆ.ಕೆಲ ದಿನಗಳ ಹಿಂದೆ ಮಳೆ ಸುರಿದಿತ್ತು. ನಂತರ ಬಿಸಿಲ ವಾತಾವರಣ ಮುಂದುವರಿದಿತ್ತು.ಮಂಗಳವಾರ ಮಧ್ಯಾಹ್ನ ಆರಂಭಗೊಂಡ ಮಳೆ ಸಂಜೆಯವರೆಗೂ ಮುಂದುವರಿದಿತ್ತು. ಗುಡುಗು ಸಿಡಿಲಿನ ಆರ್ಭಟಕ್ಕೆ ವಿದ್ಯುತ್ ಸಂಪರ್ಕ ಅಸ್ತವ್ಯಸ್ಥ ಗೊಂಡಿತ್ತು. ಬಿಸಿಲ ಧಗೆಗೆ ತಂಪೆರೆದಂತಾಯಿತು.25 ಕೆಸಿಕೆಎಂ 4ಕಳಸ ತಾಲೂಕಿನ ಹಿರೇಬೈಲ್ - ಮರಸಣಿಗೆ ರಸ್ತೆಯಲ್ಲಿ ಗಾಳಿಗೆ ಮರ ಬಿದ್ದಿರುವುದು. 25 ಕೆಸಿಕೆಎಂ 5ಕೊಪ್ಪ ತಾಲೂಕಿನ ಬಾಸಾಪುರದ ಚಂದ್ರು ಎಂಬುವವರ ಮನೆಯ ಮೇಲೆ ಮರ ಬಿದ್ದಿರುವುದು.