ರಾಷ್ಟ್ರ ನಿರ್ಮಾಣದಲ್ಲಿ ಯುವಕರು, ವಿದ್ಯಾರ್ಥಿಗಳ ಜವಾಬ್ದಾರಿ ದೊಡ್ಡದು-ಗೋಗೇರಿ

KannadaprabhaNewsNetwork | Published : Mar 26, 2025 1:30 AM

ಸಾರಾಂಶ

ಒಂದು ರಾಷ್ಟ್ರ ಮುಂದುವರಿಯಬೇಕಾದರೆ ಆ ರಾಷ್ಟ್ರದ ಯುವ ಜನಾಂಗ ಅದರಲ್ಲೂ ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿ ಬಹು ದೊಡ್ಡದಿದೆ ಎಂದು ಜಿಲ್ಲಾ ಯುವಜನ ಮತ್ತು ಕ್ರೀಡಾಧಿಕಾರಿ ಡಾ. ಶರಣು ಗೋಗೇರಿ ಹೇಳಿದರು.

ಗದಗ: ಒಂದು ರಾಷ್ಟ್ರ ಮುಂದುವರಿಯಬೇಕಾದರೆ ಆ ರಾಷ್ಟ್ರದ ಯುವ ಜನಾಂಗ ಅದರಲ್ಲೂ ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿ ಬಹು ದೊಡ್ಡದಿದೆ ಎಂದು ಜಿಲ್ಲಾ ಯುವಜನ ಮತ್ತು ಕ್ರೀಡಾಧಿಕಾರಿ ಡಾ. ಶರಣು ಗೋಗೇರಿ ಹೇಳಿದರು.

ಅ‍ವರು ಕರ್ನಾಟಕ ವಿಶ್ವವಿದ್ಯಾಲಯ ಎನ್ಎಸ್ಎಸ್ ಕೋಶ ಧಾರವಾಡ, ಆದರ್ಶ ಶಿಕ್ಷಣ ಸಂಸ್ಥೆಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಹಾಫ್ ಕಾಮರ್ಸ್ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಜಿಪಂ, ಗದಗ ತಾಪಂ, ಗ್ರಾಪಂ ಲಕ್ಕುಂಡಿ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ ಲಕ್ಕುಂಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಎನ್ ಎಸ್ ಎಸ್ ವಾರ್ಷಿಕ ಶಿಬಿರದ ವಿಶೇಷ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯನ್ನು ಕೇಂದ್ರ ಸರ್ಕಾರವು 1969ರಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮ ಶತಾಬ್ದಿ ವರ್ಷ ಪ್ರಾರಂಭಿಸಿ ಈ ಯೋಜನೆಯನ್ನು ಅಂದಿನಿಂದ ಇಂದಿನವರೆಗೂ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಾ ಬಂದಿವೆ. ವಿದ್ಯಾರ್ಥಿಗಳಲ್ಲಿ ದೈನಂದಿನ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಅದರೊಂದಿಗೆ ಗ್ರಾಮಗಳಲ್ಲಿ ಪ್ರತಿ ವರ್ಷ ಒಂದು ವಿಶೇಷ ಶಿಬಿರಗಳನ್ನು ಹಾಕಿಕೊಳ್ಳುವುದು ಆ ವಿಶೇಷ ಶಿಬಿರಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಶೌಚಾಲಯ ಬಳಕೆ, ಮತದಾನದ ಮಹತ್ವ ಆರೋಗ್ಯ ಬಗ್ಗೆ ಮಾಹಿತಿ ಹೀಗೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಸೇವಾ ಯೋಜನೆ ಮಾಡುತ್ತಾ ಬಂದಿದೆ ಎಂದರು.

ಲಕ್ಕುಂಡಿ ಗ್ರಾಪಂ ಅಧ್ಯಕ್ಷ ಕೆಂಚಪ್ಪ ಪೂಜಾರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ಸಂಯಮ, ಉತ್ತಮ ನಾಯಕತ್ವ, ಸಹ ಬಾಳ್ವೆ, ಜಾತ್ಯತೀತತೆ, ಭಾವೈಕ್ಯತೆ ಇತ್ಯಾದಿ ಗುಣಗಳನ್ನು ಬೆಳೆಸಿಕೊಳ್ಳಲು ಬಹಳಷ್ಟು ಸಹಕಾರಿಯಾಗಿದೆ ಎಂದರು. ವಿಶೇಷ ಅತಿಥಿಗಳಾಗಿ ಆಗಮಿಸಿದ ಗದಗ ಜಿಪ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ ಮುಂತಾದವರು ಮಾತನಾಡಿದರು. ಪಿಡಿಓ ಅಮೀರ್ ಅಹಮದ್ ನಾಯಕ್, ಹಿರಿಯ ಕಲಾವಿದ ಬಸವರಾಜ್ ಹಡಗಲಿ, ಗ್ರಾಪಂ ಸದಸ್ಯ ಕುಬೇರಪ್ಪ ಬೆಂತೂರು, ರಮೇಶ್ ಭಾವಿ, ಹಿರಿಯ ಜನಪದ ಕಲಾವಿದ ಶಿವು ಭಜಂತ್ರಿ, ಯುವ ಗಾಯಕ ರಾಹುಲ್ ರಾಥೋಡ್, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಬಾಹುಬಲಿ ಜೈನರ, ವಿದ್ಯಾರ್ಥಿ ಮುಖಂಡನಾದ ಜನಕ ರೆಡ್ಡಿ ಗ್ರಾಮದ ಹಿರಿಯರು ಎನ್‌ಎಸ್‌ಎಸ್ ಸ್ವಯಂಸೇವಕ ಸೇವಕಿಯರು ಉಪಸ್ಥಿತರಿದ್ದರು.

Share this article