ಅರ್ಹರ ಮನೆ ಬಾಗಿಲಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ : ಸಚಿವ ಶಿವರಾಜ ಎಸ್‌.ತಂಗಡಗಿ

ಸಾರಾಂಶ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸ್ವೀಕರಿಸದೆ, ಅರ್ಹರ ಸಾಧನೆ ಗುರುತಿಸಿ ಪ್ರಶಸ್ತಿಯನ್ನು ಮನೆಬಾಗಿಲಿಗೆ ಕೊಂಡೊಯ್ದು ನೀಡುವಂತಹ ಹೊಸ ಅಧ್ಯಾಯ ಆರಂಭಿಸುವ ಚಿಂತನೆಯಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್‌.ತಂಗಡಗಿ ಹೇಳಿದರು.

 ಬೆಂಗಳೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸ್ವೀಕರಿಸದೆ, ಅರ್ಹರ ಸಾಧನೆ ಗುರುತಿಸಿ ಪ್ರಶಸ್ತಿಯನ್ನು ಮನೆಬಾಗಿಲಿಗೆ ಕೊಂಡೊಯ್ದು ನೀಡುವಂತಹ ಹೊಸ ಅಧ್ಯಾಯ ಆರಂಭಿಸುವ ಚಿಂತನೆಯಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್‌.ತಂಗಡಗಿ ಹೇಳಿದರು.

ಸೋಮವಾರ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಹಾಗೂ ಪುಸ್ತಕ ಬಹುಮಾನ ವಿತರಣೆ ಮಾಡಿ ಮಾತನಾಡಿದರು.

ಪ್ರಶಸ್ತಿಯನ್ನು ಕೇಳಿ ಪಡೆಯಬಾರದು. ಸಾಧಕರ ಸಾಧನೆ ಗುರುತಿಸಿ ಹುಡುಕಿ ಪ್ರಶಸ್ತಿಯನ್ನು ಅವರ ಮನೆ ಬಾಗಿಲಿಗೆ ನೀಡಿ ಗೌರವಿಸುವಂತೆ ಆಗಬೇಕು. ಇದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಲಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಅರ್ಜಿ ಸ್ವೀಕರಿಸದೆ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿ ನಾಡಿನ‌ ಸಾಹಿತಿಗಳು ಇನ್ನಷ್ಟು ಉತ್ತಮ ಸಲಹೆಗಳನ್ನು ನೀಡಬೇಕು. ನಮ್ಮ ಸರ್ಕಾರ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡುತ್ತಿದೆ.‌ ಅದನ್ನೇ ಮುಂದುವರೆಸಲಿದೆ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್, ಹಿರಿಯ ಸಂಶೋಧಕ ಪ್ರೊ.ಹಂಪ ನಾಗರಾಜಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ, ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಎನ್‌. ಕರಿಯಪ್ಪ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಗೌರವ ಪ್ರಶಸ್ತಿ

2023ನೇ ಸಾಲಿನ ವರ್ಷದ ಗೌರವ ಪ್ರಶಸ್ತಿ ಪುರಸ್ಕೃತರು: ಡಾ.ಸಿ.ವೀರಣ್ಣ, ಡಾ.ಶ್ರೀರಾಮ ಇಟ್ಟಣ್ಣನವರ, ಜಾಣಗೆರೆ ವೆಂಕಟರಾಮಯ್ಯ, ಎ.ಎಂ.ಮದರಿ ಹಾಗೂ ಡಾ.ಸಬಿಹಾ ಭೂಮಿಗೌಡ ಅವರಿಗೆ ಸಚಿವರು ಪ್ರಶಸ್ತಿ ಪ್ರದಾನ ಮಾಡಿದರು.

ಸಾಹಿತ್ಯಶ್ರೀ ಪ್ರಶಸ್ತಿ

2023ನೇ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಡಾ.ಎಂ.ಎಸ್.ಶೇಖರ್, ಜಿ.ಎನ್.ಮೋಹನ್ , ಡಾ.ಟಿ.ಎಸ್.ವಿವೇಕಾನಂದ, ಡಾ. ಜಯಶ್ರೀ ಕಂಬಾರ, ಪ್ರೊ.ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ, ಡಾ.ಬಾಲಗುರುಮೂರ್ತಿ, ಪ್ರೊ.ಶಿವಗಂಗಾ ರುಮ್ಮಾ, ಡಾ.ರೀಟಾ ರೀನಿ, ಡಾ.ಕಲೀಂ ಉಲ್ಲಾ, ಡಾ.ವೆಂಕಟಕಗಿರಿ ದಳವಾಯಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

Share this article