ರಾಜ್ಯದಲ್ಲಿ ಮುಂದುವರಿದ ಮಳೆ, ಪ್ರವಾಹ

KannadaprabhaNewsNetwork |  
Published : Jul 21, 2024, 01:21 AM IST

ಸಾರಾಂಶ

ರಾಜ್ಯದ ಪ್ರಮುಖ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಜಲಾಶಯಗಳು ಭರ್ತಿ ಹಂತಕ್ಕೆ ತಲುಪಿವೆ. ಈ ಮಧ್ಯೆ, ಕರಾವಳಿ, ಮಲೆನಾಡಿಗೆ ಭಾನುವಾರವೂ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಜನರಲ್ಲಿ ಆತಂಕ ಹೆಚ್ಚಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊಡಗು, ಕರಾವಳಿ, ಮಲೆನಾಡು ಸೇರಿ ರಾಜ್ಯಾದ್ಯಂತ ಮುಂಗಾರು ಮಳೆಯ ಆರ್ಭಟ ಮುಂದುವರಿದಿದೆ. ಪ್ರಮುಖ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಜಲಾಶಯಗಳು ಭರ್ತಿ ಹಂತಕ್ಕೆ ತಲುಪಿವೆ. ಹೀಗಾಗಿ, ಜಲಾಶಯಗಳಿಂದ ಹೆಚ್ಚುವರಿ ನೀರನ್ನು ನದಿಗಳಿಗೆ ಬಿಡಲಾಗುತ್ತಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳಲು ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಈ ಮಧ್ಯೆ, ಕರಾವಳಿ, ಮಲೆನಾಡಿಗೆ ಭಾನುವಾರವೂ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಜನರಲ್ಲಿ ಆತಂಕ ಹೆಚ್ಚಿದೆ.

ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಬರಡಿಯಲ್ಲಿ ಶನಿವಾರ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ಹೊನ್ನವ್ವ ಚನ್ನಪ್ಪ ತಳವಾರ (16) ಎಂಬ ಯುವತಿ ಗಾಯಗೊಂಡಿದ್ದಾಳೆ. ಶಿವಮೊಗ್ಗದ ಮಿಲ್ಲಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆ ಕುಸಿದು ಎರಡು ಕಾರುಗಳು ಜಖಂಗೊಂಡಿವೆ.

ಮಹಾರಾಷ್ಟ್ರ ಹಾಗೂ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕೃಷ್ಣಾ ನದಿಗೆ 65 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೀಗಾಗಿ, ಬೆಳಗಾವಿ ಜಿಲ್ಲೆಯಲ್ಲಿ 13 ಸೇತುವೆಗಳು ಮುಳುಗಡೆಯಾಗಿವೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಆಲಮಟ್ಟಿ ಜಲಾಶಯದ ಎಲ್ಲ 26 ಗೇಟ್‌ಗಳನ್ನು ತೆರೆದು, ಒಂದು ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯ ಶನಿವಾರ ಭರ್ತಿಯಾಗಿದ್ದು, 22 ಕ್ರಸ್ಟ್‌ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ 1 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ರಾಯಚೂರು ಜಿಲ್ಲೆಯ ಗಡ್ಡೆಗೂಳಿ ದೇವಸ್ಥಾನ ಮುಳುಗಡೆಯಾಗಿದೆ. ದೂಧಸಾಗರ ದೇವಸ್ಥಾನದ ಸಮೀಪ ಇರುವ ಅನ್ಮೋಡ್‌ ಘಾಟ್​ನಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು, ಬೆಳಗಾವಿ-ಗೋವಾ ಮಾರ್ಗ ಬಂದ್‌ ಆಗಿದೆ.

ಕೆಆರ್‌ಎಸ್‌ ಭರ್ತಿಗೆ ಕೇವಲ 4 ಅಡಿ ಬಾಕಿಯಿದ್ದು, ಜಲಾಶಯದಿಂದ 15000 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಬಂದ್ ಮಾಡಲಾಗಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ತುಂಗಭದ್ರಾ ಜಲಾಶಯಕ್ಕೆ 1 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ಶಿರಾಡಿ ಹಾಗೂ ಮಡಿಕೇರಿ ಘಾಟ್‌ಗಳಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು, ಪ್ರಯಾಣಿಕರ ದಟ್ಟಣೆ ಸಲುವಾಗಿ ಬೆಂಗಳೂರು-ಮಂಗಳೂರು, ಮಂಗಳೂರು-ಗೋವಾ ನಡುವೆ ವಿಶೇಷ ರೈಲು ಓಡಾಟ ಆರಂಭಿಸಲಾಗಿದೆ.

ಈ ಮಧ್ಯೆ, ಮಳೆಗೆ ಮರಗಳು ಉರುಳಿ ಬಿದ್ದು ಕೊಡಗಿನಲ್ಲಿ 11, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ 13, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 21, ಹಾವೇರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ 7 ಮನೆಗಳು ಹಾನಿಗೀಡಾಗಿವೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?