ಕನ್ನಡಪ್ರಭ ವಾರ್ತೆ ಹಾಸನ
ಭೋವಿ ಸಮುದಾಯದವರು ತಮ್ಮ ಅಸಮಾಧಾನ ವ್ಯಕ್ತಪಡಿಸಿ, ``ಕಲ್ಲು ಹೊಡೆಯುವುದು ನಮ್ಮ ಪಾರಂಪರಿಕ ಕುಲಕಸುಬು. ಪೀಳಿಗೆಗಳಿಂದ ಈ ಉದ್ಯೋಗವನ್ನೇ ಅವಲಂಬಿಸಿಕೊಂಡು ಬದುಕು ನಡೆಸುತ್ತಿದ್ದೇವೆ. ಆದರೆ ಇತ್ತೀಚೆಗೆ ಗಣಿಗಾರಿಕೆ ಸ್ಥಗಿತಗೊಂಡ ಪರಿಣಾಮ ನೂರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ದಿನನಿತ್ಯದ ಬದುಕು ಸಾಗಿಸಲು ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಗಣಿಗಾರಿಕೆಯನ್ನು ಪುನರ್ ಆರಂಭಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಆಲೂರು ತಾಲೂಕಿನ ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಯ ವೈ.ಎನ್.ಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಸುಮಾರು 250 ರಿಂದ 300 ಮಂದಿ ಭೋವಿ ಸಮುದಾಯದವರು ಮಗ್ಗೆ ಗ್ರಾಮದ ಸರ್ವೆ ನಂ.151ರ ಸರ್ಕಾರಿ ಗೋಮಾಳದ ಸುಮಾರು 3 ಎಕರೆ ಪ್ರದೇಶದಲ್ಲಿ ಕಳೆದ ಅನೇಕ ವರ್ಷಗಳಿಂದ ಗಣಿಗಾರಿಕೆ ನಡೆಸುತ್ತಿದ್ದರು. ಸುಮಾರು ೨೦ ವರ್ಷಗಳ ಗುತ್ತಿಗೆಯಡಿ 60ರಿಂದ 70 ಮಂದಿ ಕಾರ್ಮಿಕರು ಸುತ್ತಿಗೆ, ಹುಳಿ, ಚಮಟಿ ಮುಂತಾದ ಸಾಂಪ್ರದಾಯಿಕ ಉಪಕರಣಗಳನ್ನು ಬಳಸಿ ಶ್ರಮಪೂರ್ಣವಾಗಿ ಕಲ್ಲು ಒಡೆದು ಜೀವನ ಸಾಗಿಸುತ್ತಿದ್ದರು. ಈ ಉದ್ಯೋಗದ ಮೇಲೆ ನೇರವಾಗಿ ೬೦ಕ್ಕೂ ಹೆಚ್ಚು ಕಾರ್ಮಿಕರು ಅವಲಂಬಿತರಾಗಿದ್ದರೆ, ಪರೋಕ್ಷವಾಗಿ 200ರಿಂದ 250ಕ್ಕೂ ಹೆಚ್ಚು ಕುಟುಂಬಗಳ ಬದುಕು ಇದರ ಮೇಲೆ ನಿಂತಿದೆ. ಮಕ್ಕಳ ಶಿಕ್ಷಣ, ಆರೋಗ್ಯ, ಕುಟುಂಬದ ದೈನಂದಿನ ವೆಚ್ಚಗಳು ಸೇರಿದಂತೆ ಎಲ್ಲವೂ ಈ ಉದ್ಯೋಗದ ಮೇಲೆಯೇ ನಿರ್ಭರವಾಗಿರುವುದರಿಂದ ಗಣಿಗಾರಿಕೆ ನಿಲ್ಲುವಿಕೆ ಭಾರೀ ಹೊಡೆತ ನೀಡಿದೆ. ಹೆಚ್ಚಿನವರಿಗೆ ಸ್ವಂತ ಕೃಷಿಭೂಮಿ ಇಲ್ಲದ ಕಾರಣ ಬೇರೆ ಉದ್ಯೋಗಗಳೂ ಲಭ್ಯವಾಗುತ್ತಿಲ್ಲ ಎಂದು ಭೋವಿ ಸಂಘದ ರಾಜ್ಯಾಧ್ಯಕ್ಷ ಹೆಚ್. ಮಂಜೇಶ್ ವಿವರಿಸಿದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಸಾರ್ವಜನಿಕರಿಂದ ಕೆಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವುದು ಅನಿವಾರ್ಯವಾಗಿದೆ. ಮನೆಗಳ ಗೋಡೆಗಳಿಗೆ ಬಿರುಕು ಬಿದ್ದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಅದು ಗಣಿಗಾರಿಕೆಯಿಂದ ಉಂಟಾಗಿದೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಬೇಕು. ಕೇವಲ ದೂರು ಬಂದ ತಕ್ಷಣ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಧರಣಿ ಮುಂದುವರಿದರೆ ಸರ್ಕಾರದ ಗಮನ ಸೆಳೆಯುವ ಸಾಧ್ಯತೆ ಹೆಚ್ಚಿದ್ದು, ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ದೊರಕಬೇಕು ಎಂಬುದು ಪ್ರತಿಭಟನಾಕಾರರ ನಿರೀಕ್ಷೆಯಾಗಿದೆ. ಧರಣಿಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಸೇತುರಾಮು, ಲತಾ, ಕಲ್ಲು ಕುಟಕರ ಸಂಘದ ಮಹಾದೇವ್, ನಂದೀಶ್, ಆರ್ಮುಗ್, ಸರೋಜ, ಅಂಬಿಕಾ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜೊತೆಗೆ ದಲಿತ ಮುಖಂಡರಾದ ಹೆಚ್.ಕೆ. ಸಂದೇಶ್, ಕೃಷ್ಣದಾಸ್ , ರಾಜಶೇಖರ್, ಹೆತ್ತೂರು ನಾಗರಾಜ್, ಶಾಂತಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.