ಎಕ್ಸ್ ಪ್ರೆಸ್ ಕೆನಾಲ್ ವಿರುದ್ಧ ಮುಂದುವರೆದ ಹೋರಾಟ

KannadaprabhaNewsNetwork |  
Published : Dec 10, 2024, 12:33 AM IST
ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಪೈಪ್‌ಲೈನ್ ಮೂಲಕ ಕುಣಿಗಲ್, ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಹೋರಾಟ ಮುಂದುವರಿದಿದ್ದು, ಸೋಮವಾರ ಎರಡೂ ಪಕ್ಷಗಳ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಪೈಪ್‌ಲೈನ್ ಮೂಲಕ ಕುಣಿಗಲ್, ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಹೋರಾಟ ಮುಂದುವರಿದಿದ್ದು, ಸೋಮವಾರ ಎರಡೂ ಪಕ್ಷಗಳ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.ಗುಬ್ಬಿ ತಾಲೂಕು ಸಾಗರನಹಳ್ಳಿ ಹೇಮಾವತಿ ನಾಲಾ ಗೇಟ್ ಬಳಿದಿಂದ ತುಮಕೂರುವರೆಗೆ ವಿವಿಧ ಮಠಾಧೀಶರು, ಶಾಸಕರು, ಮಾಜಿ ಶಾಸಕರು, ಎರಡೂ ಪಕ್ಷಗಳ ಮುಖಂಡರು, ರೈತರು ಪಾದಯಾತ್ರೆ ನಡೆಸಿದ್ದರು. ಈಗ ಧರಣಿ ಸತ್ಯಾಗ್ರಹ ಆರಂಭಿಸಿ ಹೋರಾಟ ತೀವ್ರಗೊಳಿಸಿದ್ದಾರೆ.ನಗರದ ವಕೀಲರು ಹೇಮಾವತಿ ನೀರಿನ ಹೋರಾಟ ಬೆಂಬಲಿಸಿ ಸೋಮವಾರ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ವಕೀಲರ ಸಂಘದ ಉಪಾಧ್ಯಕ್ಷ ಶಿವಶಂಕರ್, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಖಜಾಂಚಿ ಕೆ.ಎಲ್.ಭಾರತಿ, ಬಿಜೆಪಿ ವಕೀಲ ಪ್ರಕೋಷ್ಟದ ಹಿಮಾನಂದ್, ಕುಮಾರಸ್ವಾಮಿ ಹಾಗೂ ಹಲವು ವಕೀಲರು ಹೋರಾಟದಲ್ಲಿ ಭಾಗವಹಿಸಿ, ಹೇಮಾವತಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಜಿಲ್ಲೆಯ ಜನರಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರ ಕೂಡಲೇ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಕಾಮಗಾರಿಯನ್ನು ಸ್ಥಗಿತಗೊಳಿಸಿಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಜಿಲ್ಲೆಯ ರೈತರ ಬದುಕಿಗೆ ಮರಣ ಶಾಸನವಾಗಲಿರುವ ಹಾಗೂ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಸಲಿರುವ ಅವೈಜ್ಞಾನಿಕ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಬೇಕು. ಜಿಲ್ಲೆಯ ಜನರ, ರೈತರಿಗೆ ದ್ರೋಹ ಮಾಡಿ ನಮ್ಮ ನೀರಿನ ಹಕ್ಕನ್ನು ಕಸಿಯುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಹಾಲಿ ಇರುವ ನಾಲೆಯ ಮೂಲಕ ಕುಣಿಗಲ್‌ಗೆ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಅಭ್ಯಂತರವಿಲ್ಲ, ಆದರೆ, ನೀರನ್ನು ಕಬಳಿಸುವ ಹುನ್ನಾರದ ಪೈಪ್‌ಲೈನ್ ಮೂಲಕ ನೀರನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ, ಎಕ್ಸ್ಪ್ರೆಸ್ ಕೆನಾಲ್ ಯೋಜನೆ ಕೈಬಿಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದರೆ, ಮುಖಂಡರಾದ ಎಸ್.ಶಿವಪ್ರಸಾದ್, ದಿಲೀಪ್‌ಕುಮಾರ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮತ್ತಿತರ ಮುಖಂಡರು ಮಾತನಾಡಿ ರಾಜ್ಯ ಸರ್ಕಾರದ ಜನವಿರೋಧಿ ನಿಲುವನ್ನು ಖಂಡಿಸಿದರು.ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಯ್ಯ, ಮುಖಂಡರಾದ ಗುಬ್ಬಿ ನಂಜೇಗೌಡ, ಸಾಗರನಹಳ್ಳಿ ವಿಜಯಕುಮಾರ್, ಚಂದ್ರಶೇಖರ ಬಾಬು, ಟಿ.ಹೆಚ್.ಹನುಮಂತರಾಜು, ಬಾವಿಕಟ್ಟೆ ನಾಗಣ್ಣ, ಹೆಚ್.ಎಂ.ರವೀಶಯ್ಯ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಿತ್ರಮ್ಮ, ಜ್ಯೋತಿ ತಿಪ್ಪೇಸ್ವಾಮಿ, ಲತಾಬಾಬು, ಕೆ.ಪಿ.ಮಹೇಶ್, ಜೆಡಿಎಸ್ ಜಿಲ್ಲಾ ಓಬಿಸಿ ಘಟಕ ಅಧ್ಯಕ್ಷ ಯೋಗಾನಂದಕುಮಾರ್, ಸೇವಾದಳ ಜಿಲ್ಲಾಧ್ಯಕ್ಷ ಕೆಂಪರಾಜು, ಲೋಕೇಶ್ ಕಳ್ಳಿಪಾಳ್ಯ, ಮುಖಂಡರಾದ ಲಕ್ಷ್ಮೀನರಸಿಂಹರಾಜು, ಬನಶಂಕರಿಬಾಬು, ಕೆ.ಪಿ.ಮಮತ, ತಾಹೇರಾ ಕುಲ್ಸಂ, ವಿಜಯ, ಗಾಯತ್ರಿ, ವರಲಕ್ಷ್ಮೀ, ಉದಯಲಕ್ಷ್ಮಿ, ಶಿವಕುಮಾರ್, ಹನುಮಂತರಾಜು ಮೊದಲಾದವರು ಧರಣಿಯಲ್ಲಿ ಭಾಗವಹಿಸಿದ್ದರು.ಮಂಗಳವಾರದ ಧರಣಿ ಸತ್ಯಾಗ್ರಹದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ನೀಡಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ