ಕನ್ನಡಪ್ರಭ ವಾರ್ತೆ ಕುದೂರು
ಸರ್ಕಾರಿ ಆಸ್ತಿ ಉಳಿಸುವ ನಿಟ್ಟಿನಲ್ಲಿ ಪಂಚಾಯ್ತಿ ಸದಸ್ಯರ ಒಪ್ಪಿಗೆ ಕೇಳದೆ ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಬೇಕಾಗುತ್ತದೆ ಎಂದು ಪಿಡಿಒ ಪುರುಷೋತ್ತಮ್ ಹೇಳಿದರು.ಇಲ್ಲಿನ ಗ್ರಾಪಂ ಕಚೇರಿಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ನಾನು ನೆಮ್ಮದಿಯಿಂದ ಕೆಲಸ ಮಾಡಲು ಕೆಲ ಸದಸ್ಯರು ಬಿಡುತ್ತಿಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ನಿರ್ವಹಿಸಲು ಜನರು ನಿಮ್ಮನ್ನು ಮತ ಹಾಕಿ ಕಳಿಸಿದ್ದಾರೆ. ಪಂಚಾಯ್ತಿ ಆಸ್ತಿ ಉಳಿಸುವ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.
ಗ್ರಾಮದ ಸಂತೆಮಾಳದಲ್ಲಿ ತರಕಾರಿ ವ್ಯಾಪಾರಿ ಅಕ್ರಮವಾಗಿ ತರಕಾರಿ ಶೆಡ್ ನಿರ್ಮಾಣ ಮಾಡಿದ್ದಾರೆ. ಪಂಚಾಯ್ತಿ ಅನುಮತಿ ಇಲ್ಲದೆ ನಿರ್ಮಾಣ ಮಾಡಿದ್ದೀರಿ ಅದನ್ನು ತೆರವುಗೊಳಿಸಿ ಎಂದು ಪಂಚಾಯ್ತಿ ವತಿಯಿಂದ ನೋಟೀಸ್ ನೀಡಿದ್ದರೂ ಕೂಡಾ ಅದಕ್ಕೆ ಉತ್ತರವನ್ನು ನೀಡಿಲ್ಲ ಎಂದರು.ಈಗ ಆ ವ್ಯಾಪಾರಿ ನೋಡಿ ಇತರೆ ವ್ಯಾಪಾರಿಗಳು ನಮಗೂ ಅಲ್ಲಿ ಶೆಡ್ ನಿರ್ಮಾಣ ಮಾಡಿಕೊಡಲು ಅನುಮತಿ ಕೊಡಿ ಎಂದು ಪಂಚಾಯ್ತಿಗೆ ಅರ್ಜಿ ನೀಡಿದ್ದಾರೆ ಎಂದು ಪಿಡಿಒ ಪುರುಷೋತ್ತಮ್ ಸಭೆಯಲ್ಲಿ ಪ್ರಸ್ತಾಪಿಸಿದಾಗ ಇದಕ್ಕೆ ಕೆಲವು ಸದಸ್ಯರುಗಳು ಈಗಾಗಲೇ ಶೆಡ್ ನಿರ್ಮಾಣ ಮಾಡಿದ್ದಾರೆ. ಅವರನ್ನು ಖಾಲಿ ಮಾಡಿಸುವುದು ಬೇಡ ಎಂದಾಗ ಪಿಡಿಒ ನಿಮ್ಮ ಸ್ವಂತ ಹಿತಾಸಕ್ತಿಗಾಗಿ ಸರ್ಕಾರದ ಆಸ್ತಿಯನ್ನು ಕಳೆಯಬೇಡಿ ಎಂದು ಹೇಳಿದರು.ಕುದೂರು ಬೈಪಾಸ್ ರಸ್ತೆಯ ಅಕ್ಕಪಕ್ಕ ಸುಮಾರು ಮುಕ್ಕಾಲು ಕಿಮೀ ದೂರದವರೆಗೂ ರಸ್ತೆ ಪಕ್ಕದಲ್ಲಿ ಮನೆ ಅಂಗಡಿಗಳನ್ನು ಕಟ್ಟಿಕೊಂಡಿದ್ದಾರೆ. ಮುಂದೊಂದು ದಿನ ರಸ್ತೆ ಅಗಲೀಕರಣ ಆಗುತ್ತದೆ. ಆದ್ದರಿಂದ ಈಗ ಹೊಸದಾಗಿ ನಿರ್ಮಾಣಗೊಂಡಿರುವ ಅಂಗಡಿಗಳಿಗೆ ಪಂಚಾಯ್ತಿ ಅನುಮತಿ ನೀಡಬಾರದು ಎಂದು ಪ್ರತಿ ಸಭೆಯಲ್ಲಿ ಸದಸ್ಯರು ಗಲಾಟೆ ಮಾಡುತ್ತಾರೆ. ಆದರೆ, ರಸ್ತೆ ಅಗಲೀಕರಣಕ್ಕೆ ಸರ್ಕಾರದಿಂದ ಯಾವುದೇ ನೋಟಿಫಿಕೇಷನ್ ಆಗಿಲ್ಲ ಎಂದರು.
ದಾಖಲೆಗಳೆಲ್ಲವೂ ಸರಿ ಇರುವ ಅಂಗಡಿಗಳಿಗೆ ಅನುಮತಿ ನೀಡಲು ವೈಯಕ್ತಿಕ ದ್ವೇಷ ಮುಂದಾಗಬಾರದು. ದಾಖಲೆಯಿದ್ದು ಅಂಗಡಿ ಕಟ್ಟಿಕೊಂಡಿರುವವರಿಗೆ ಅನುಮತಿ ನೀಡಿದರೆ ಅದರಿಂದ ಪಂಚಾಯ್ತಿಗೆ ತೆರಿಗೆ ರೂಪದಲ್ಲಿ ಲಾಭಾಗವಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ಮನವರಿಕೆ ಮಾಡಿಕೊಟ್ಟರು. ಈ ವೇಳೆ ಕೆಲ ಸದಸ್ಯರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.ಈ ವೇಳೆ ಸರ್ವ ಸದಸ್ಯರು ಈಗ ಹೊಸದಾಗಿ ಯಾವ ಕಾಮಗಾರಿಯನ್ನು ಮಾಡಲಾಗದು. ಇರುವ ಒಂದು ವರ್ಷದ ಅವಧಿಯಲ್ಲಿ ನಾವು ಹಣ ಹಾಕಿ ಕಾಮಗಾರಿ ಮಾಡಿದರೆ ಹಣ ಮಂಜೂರಾಗುವ ವೇಳೆಗೆ ನಮ್ಮ ಅವಧಿ ಮುಗಿಯುತ್ತದೆ. ಆಗ ಕಾಮಗಾರಿ ಹಣದ ಗತಿ ಏನು. ಅದಕ್ಕಾಗಿ ಹಣ ಮಂಜೂರಾದ ನಂತರವೇ ನಾವು ಕಾಮಗಾರಿ ಮಾಡುತ್ತೇವೆ ಸಭೆಯಲ್ಲಿ ತೀರ್ಮಾನಿಸಿದರು.
ಬಿಎಂಆರ್‌ಡಿ ಅನುಮತಿ ಪಡೆದು ಬಡವಾಣೆಗಳನ್ನು ನಿರ್ಮಾಣ ಮಾಡಿರುವವರು ಪಂಚಾಯ್ತಿಗೆಂದು ಸಿಎ ಸೈಟ್‌ಗಳನ್ನು ನೀಡಿದ್ದಾರೆ. ಹೆಚ್ಚುವರಿಯಾದ ಸಿಎ ಸೈಟ್‌ಗಳನ್ನು ಪಂಚಾಯ್ತಿ ಬೇರೆ ಕಾರಣಗಳಿಗಾಗಿ ಬಳಸಬಹುದಾಗಿತ್ತು. ಆದರೆ, ಈಗ ನೂತನ ಕಾಯ್ದೆಯ ಪ್ರಕಾರ ಪಂಚಾಯ್ತಿ ಸಿಎ ಸೈಟ್‌ಗಳೆಲ್ಲವೂ ತಾಲೂಕು ಪ್ರಾಧಿಕಾರದ ಹಿಡಿತಕ್ಕೆ ಹೋಗುತ್ತದೆ. ಇದರ ಮೇಲೆ ಗ್ರಾಮಪಂಚಾಯ್ತಿಯವರ ಅಧಿಕಾರ ಇರುವುದಿಲ್ಲ ಎಂದು ಅಧಿಕಾರಿಗಳು ಪ್ರಕಟಿಸಿದರು.ನವಗ್ರಾಮದಲ್ಲಿ ಚರಂಡಿ ಮುಚ್ಚಿ ಅಂಗಡಿ ನಿರ್ಮಾಣ: ಪಂಚಾಯ್ತಿ ಆಸ್ತಿ ಎಂದರೆ ಜನರಿಗೆ ಭಯವೇ ಇಲ್ಲದಂತಾಗಿದೆ. ಚರಂಡಿ ಮುಚ್ಚಿ ಅದರ ಮೇಲೆ ಅಂಗಡಿ ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲಾ ಸದಸ್ಯರು ಒಟ್ಟಾಗಿ ಪಂಚಾಯ್ತಿ ಆಸ್ತಿ ರಕ್ಷಿಸಲು ತೊಂದರೆ ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂಬ ಸಂದೇಶವನ್ನು ತಿಳಿಸುವ ಬಗ್ಗೆ ಚರ್ಚಿಸಲಾಯಿತು.
ಅಂಗಡಿ, ಹೋಟೆಲ್ ಕನ್ನಡದ ನಾಮಫಲಕ ಬರೆಸಬೇಕು. ಗ್ರಾಮದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಲಗಾಮು ಹಾಕಬೇಕು. ಗ್ರಾಮದೆಲ್ಲೆಡೆ ಸಿಸಿ ಕ್ಯಾಮೆರಾ ಹಾಕಿಸಬೇಕು.ಬಾಬು ಜಗಜೀವನರಾಂ ಸಭಾಭವನಕ್ಕೆ ಸ್ಥಳೀಯ ಪಂಚಾಯ್ತಿ ವತಿಯಿಂದ ನವಗ್ರಾಮದ ಬಳಿ ನಿವೇಶನ ಕೊಡಲು ಸರ್ವಾನುಮತದಿಂದ ತೀರ್ಮಾನ ಮಾಡಲಾಯಿತು. ಗ್ರಾಪಂ ಅಧ್ಯಕ್ಷೆ ಕುಸುಮಾ ಹೊನ್ನರಾಜ್, ಉಪಾಧ್ಯಕ್ಷೆ ರಮ್ಯಜ್ಯೋತಿ, ಕಾರ್‍ಯದರ್ಶಿ ವೆಂಕಟೇಶ್ ಹಾಜರಿದ್ದರು.
52 ಲಕ್ಷ ರು.ವರೆಗೆ ಕಾಮಗಾರಿ ಮಾಡಲು ಸರ್ಕಾರ ಅನುಮತಿ ನೀಡಿದೆ: 15ನೇ ಹಣಕಾಸಿನ ಅಡಿಯಲ್ಲಿ ₹52 ಲಕ್ಷದವರೆಗೆ ಕಾಮಗಾರಿ ಮಾಡಲು ಸರ್ಕಾರ ಅನುಮತಿ ನೀಡಿದೆ. ಅದಕ್ಕಾಗಿ ಸದಸ್ಯರುಗಳು ತಮ್ಮ ವಾರ್ಡ್‌ಗಳಿಗೆ ಆಗಬೇಕಾಗಿರುವ ಚರಂಡಿ ಹಾಗೂ ಶುದ್ದ ನೀರಿನ ಘಟಕ ಹಾಗೂ ಚಿಕ್ಕಪುಟ್ಟ ರಸ್ತೆಗಳಂತಹ ಕಾಮಗಾರಿ ಪಟ್ಟಿ ತಯಾರಿಸಿ ಕೆಲಸ ಮುಗಿಸಿ ನಂತರ ಹಣವನ್ನು ಖಂಡಿತವಾಗಿಯೂ ಸರ್ಕಾರ ಮಂಜೂರು ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.