ಆಸ್ಪತ್ರೆ, ಪಡಿತರ, ಆಹಾರ ಉಗ್ರಾಣಗಳಿಗೆ ನಿರಂತರ ಭೇಟಿ ಇರಲಿ: ಡಾ. ಎಚ್. ಕೃಷ್ಣ

KannadaprabhaNewsNetwork |  
Published : May 10, 2025, 01:07 AM IST
9ಡಿಡಬ್ಲೂಡಿ7ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಆಹಾರ ಆಯೋಗ ಕೈಗೊಂಡ ಪ್ರವಾಸದ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಡಾ. ಎಚ್‌.ಕೃಷ್ಣ ಮಾಹಿತಿ ನೀಡಿದರು.  | Kannada Prabha

ಸಾರಾಂಶ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರು ಪಡೆಯಬೇಕಾದರೆ ಅಧಿಕಾರಿ ವರ್ಗದವರು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು. ಅದರ ಬಗ್ಗೆ ಭೇಟಿ ಸಂದರ್ಭದಲ್ಲಿ ನಿರ್ದೇಶನಗಳನ್ನು ನೀಡಿದ್ದೇನೆ. ಅದರ ಜತೆಗೆ ಕಂಡುಬಂದ ನ್ಯೂನತೆಗಳನ್ನು ತಕ್ಷಣ ಸ್ಥಳದಲ್ಲಿಯೇ ಸರಿಪಡಿಸಿ, ಮಾರ್ಗದರ್ಶನವನ್ನು ನೀಡಿದ್ದೇವೆ.

ಧಾರವಾಡ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ನಿರಂತರವಾಗಿ ಆಸ್ಪತ್ರೆ, ಅಂಗಡಿ, ಆಹಾರ ಉಗ್ರಾಣಗಳಿಗೆ ಭೇಟಿ ನೀಡಿ, ಉತ್ತಮ ಗುಣಮಟ್ಟ, ಸ್ವಚ್ಛತೆ ಹೊಂದಿರುವುದನ್ನು ಪರಿಶೀಲಿಸಬೇಕೆಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ಆಹಾರ ಆಯೋಗ ಕೈಗೊಂಡ ಪ್ರವಾಸದ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿರುವ ಕರ್ನಾಟಕ ಆಹಾರ ನಿಗಮದ ಉಗ್ರಾಣಗಳು ಸುರಕ್ಷಿತವಾಗಿಲ್ಲ. ಸ್ವಚ್ಛತೆ, ತಾಂತ್ರಿಕತೆ ಕೊರತೆ ಇದೆ. ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕು. ಧಾರವಾಡ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದಾಗ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ನಿರ್ದೇಶನದ ಮೇರೆಗೆ ಮಾಡಿರುವ ಸೌಲಭ್ಯಗಳ ದಾಸ್ತಾನು ವಹಿ, ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದ ವಹಿ, ರೈತರ ಬೇಡಿಕೆ ವಹಿ, ಗಮನಿಸಿ, ಪರಿಶೀಲಿಸಿದಾಗ ಉತ್ತಮ ಮಾಹಿತಿ ಸಂಗ್ರಹವಿದೆ. ಇದೇ ರೀತಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಖಲಾತಿ ನಿರ್ವಹಿಸಬೇಕು ಎಂದರು.

ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ, ಸ್ವಚ್ಛತೆ, ಉತ್ತಮವಾದ ಊಟ, ರೋಗಿ ಮತ್ತು ರೋಗಿಗಳ ಸಂಬಂಧಿಕರಿಗೆ ಉತ್ತಮ ಸೌಲಭ್ಯಗಳಾಗಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಇನ್ನೊಂದು ಎಕ್ಸರೆ ಯಂತ್ರ ಹಾಗೂ ಉಳಿದ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ನೇಮಕಾತಿ ಆಗಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದ ಅವರು, ಪೆಟ್ರೋಲ್ ಬಂಕ್‌ಗಳಲ್ಲಿ ಡೆನಸಿಟಿ ಪರೀಕ್ಷಿಸಬೇಕು. ಗಾಳಿ, ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಿರಬೇಕು. ಮುಖ್ಯವಾಗಿ ಸ್ವಚ್ಛತೆ ಕಾಪಾಡಿರಬೇಕು. ಆಹಾರ ಇಲಾಖೆ ಅಧಿಕಾರಿಗಳು ಇದನ್ನು ಕಾಲಕಾಲಕ್ಕೆ ಭೇಟಿ ನೀಡಿ, ಖಾತರಿ ಪಡಿಸಿಕೊಳ್ಳಬೇಕು. ಆದರೆ ಇದರಲ್ಲಿ ನ್ಯೂನ್ಯತೆ ಕಾಣುತ್ತಿದ್ದು, ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರು ಪಡೆಯಬೇಕಾದರೆ ಅಧಿಕಾರಿ ವರ್ಗದವರು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು. ಅದರ ಬಗ್ಗೆ ಭೇಟಿ ಸಂದರ್ಭದಲ್ಲಿ ನಿರ್ದೇಶನಗಳನ್ನು ನೀಡಿದ್ದೇನೆ. ಅದರ ಜತೆಗೆ ಕಂಡುಬಂದ ನ್ಯೂನತೆಗಳನ್ನು ತಕ್ಷಣ ಸ್ಥಳದಲ್ಲಿಯೇ ಸರಿಪಡಿಸಿ, ಮಾರ್ಗದರ್ಶನವನ್ನು ನೀಡಿದ್ದೇವೆ. ಅಧಿಕಾರಿಗಳು ಆಹಾರ ಉಗ್ರಾಣಗಳಿಗೆ ದಾಸ್ತಾನು ಎಷ್ಟು ಬಂದಿದೆ, ಯಾರಿಗೆ ಎಷ್ಟು ಕೊಟ್ಟರು ಮತ್ತು ಉಳಿಕೆ ಪ್ರಮಾಣ ಅದರಲ್ಲಿಯೂ ಸಹ ಗಣನೀಯವಾಗಿ ವ್ಯತ್ಯಾಸಗಳು ಕೆಲವು ಕಡೆ ಕಂಡು ಬಂದಿದೆ. ಉಗ್ರಾಣಕ್ಕೆ ಬಂದಿರುವ ಆಹಾರವನ್ನು ಮರು ಪರಿಶೀಲನೆ ಮಾಡಿಕೊಳ್ಳಬೇಕು. ಸ್ವಚ್ಛತೆಗೂ ಅಷ್ಟೇ ಆದ್ಯತೆಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಪ್ರತಿಯೊಂದು ನ್ಯಾಯ ಬೆಲೆ ಅಂಗಡಿಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ, ಜಾಗೃತ ಸಮಿತಿಯ ಸದಸ್ಯರ, ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ಹೆಸರು ಮತ್ತು ದೂರವಾಣಿ ಸಂಖ್ಯೆಗಳ ಫಲಕಗಳನ್ನು ಹಾಕಬೇಕು. ಜನರಿಗೆ ಯಾವುದೇ ನ್ಯಾಯ ಬೆಲೆ ಅಂಗಡಿಗಳಲ್ಲಿ ಏನೇ ತೊಂದರೆಯಾದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಅವರು ನಿರ್ಲಕ್ಷ್ಯ ತೋರಿದರೆ ತಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿರುವುದಾಗಿ ತಿಳಿಸಿದರು.

ಆಹಾರ ಇಲಾಖೆಗೆ ಸಂಬಂಧಿಸಿದಂತೆ ಪಡಿತರ ಅಂಗಡಿ, ಹೋಟೆಲ್, ರಸ್ತೆ ಬದಿ ಇರುವ ಆಹಾರ ಮಳಿಗೆ, ಅಂಗಡಿ, ಪೆಟ್ರೊಲ್ ಬಂಕ್, ಆಸ್ಪತ್ರೆಗಳಲ್ಲಿನ ಹೋಟೆಲ್ ಇತ್ಯಾದಿಗಳಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ದೂರು ಸಲ್ಲಿಸಬಹುದು. ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದೆ ಇದ್ದಲ್ಲಿ ಸಾರ್ವಜನಿಕರು ತಮ್ಮನ್ನು ಸಂಪರ್ಕಿಸಲು ಮನವಿ ಮಾಡಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಆಹಾರ ಆಯೋಗದ ಸದಸ್ಯರುಗಳಾದ ಲಿಂಗರಾಜ ಕೋಟೆ, ಸುಮಂತ ರಾವ್, ಮಾರುತಿ ಎಂ. ದೊಡ್ಡಲಿಂಗಣ್ಣವರ, ರೋಹಿಣಿ ಪ್ರಿಯ, ಕೆ.ಎಸ್. ವಿಜಯಲಕ್ಷ್ಮಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು