ನಮ್ಮ ಮಕ್ಕಳ ಸಿಂಧೂರ ಅಳಿಸಿದವರಿಗೆ ತಕ್ಕ ಪಾಠ

KannadaprabhaNewsNetwork |  
Published : May 10, 2025, 01:07 AM IST
೯ಶಿರಾ೧: ಶಿರಾ ನಗರದ ಗ್ರಾಮದೇವತೆ ಶ್ರೀ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ ಭಾರತೀಯ ಯೋಧರ ಗೆಲುವಿಗಾಗಿ, ಶ್ರೇಯಸ್ಸಿಗಾಗಿ ಹಾಗೂ ಶತ್ರು ನಾಶಕ್ಕಾಗಿ ಪ್ರಾರ್ಥಿಸಿ ಶುಕ್ರವಾರ ತಾಲೂಕು ಬಿಜೆಪಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ, ಭಾರತೀಯ ಯೋಧರ ಶ್ರೇಯಸ್ಸಿಗಾಗಿ ಪ್ರಾರ್ಥಿಸಿದರು. ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಪಹಲ್ಗಾಮನಲ್ಲಿ ೨೬ ಜನ ಅಮಾಯಕ ಭಾರತೀಯರ ಹತ್ಯೆ ಮಾಡಿ ನಮ್ಮ ದೇಶದ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಪಾಪಿ ಉಗ್ರರು ಸರ್ವನಾಶವಾಗಲಿ. ಮುಂದೆಂದೂ ನಮ್ಮ ದೇಶದ ಮೇಲೆ ದಾಳಿ ಮಾಡದಂತೆ ನಮ್ಮ ದೇಶದ ಸೈನಿಕರು ಉಗ್ರರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಪಹಲ್ಗಾಮನಲ್ಲಿ ೨೬ ಜನ ಅಮಾಯಕ ಭಾರತೀಯರ ಹತ್ಯೆ ಮಾಡಿ ನಮ್ಮ ದೇಶದ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಪಾಪಿ ಉಗ್ರರು ಸರ್ವನಾಶವಾಗಲಿ. ಮುಂದೆಂದೂ ನಮ್ಮ ದೇಶದ ಮೇಲೆ ದಾಳಿ ಮಾಡದಂತೆ ನಮ್ಮ ದೇಶದ ಸೈನಿಕರು ಉಗ್ರರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು. ಅವರು ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ನಡೆಸುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಭಾರತೀಯ ಯೋಧರ ಗೆಲುವಿಗಾಗಿ, ಶ್ರೇಯಸ್ಸಿಗಾಗಿ ಹಾಗೂ ಶತ್ರು ನಾಶಕ್ಕಾಗಿ ಪ್ರಾರ್ಥಿಸಿ ಶುಕ್ರವಾರ ತಾಲೂಕು ಬಿಜೆಪಿ ವತಿಯಿಂದ ನಗರದ ಗ್ರಾಮದೇವತೆ ಶ್ರೀ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಭಾರತೀಯ ಯೋಧರ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಶಪಥ ಮಾಡಿದ್ದು, ನಮ್ಮ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದವರಿಗೆ ಸರಿಯಾದ ರೀತಿಯಲ್ಲಿ ಪಾಠ ಕಲಿಸುತ್ತಿದ್ದಾರೆ. ಪಾಕಿಸ್ತಾನ ಉಗ್ರರನ್ನು ನಿರಂತರವಾಗಿ ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಉಗ್ರರ ತಾಣಗಳನ್ನು ಮಾತ್ರ ನಾಶ ಮಾಡಬೇಕು ಎಂದು ನಮ್ಮ ಡ್ರೋನ್‌ ಗಳ ಮುಖಾಂತರ ನಿರ್ದಿಷ್ಟ ಗುರಿ ಇಟ್ಟುಕೊಂಡು ಉಗ್ರರ ಅಡಗುತಾಣಗಳನ್ನು ನಮ್ಮ ದೇಶದ ಸೈಣಿಕರು ನಾಶ ಮಾಡುತ್ತಿದ್ದರು. ಆದರೆ ಪಾಕಿಸ್ತಾನ ತಮ್ಮ ನರಿ ಬುದ್ಧಿ ತೋರಿಸಿ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ವಿನಾಕಾರಣ ಗಡಿಯಲ್ಲಿನ ನಾಗರಿಕರ ಮನೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ದೇಶದ ಸೈನಿಕರು ಸುದರ್ಶನ ಕವಚದಿಂದ ನಮ್ಮ ದೇಶ ಕಾಪಾಡಿದ್ದಾರೆ. ಇದು ನಮಗೆ ಹೆಮ್ಮೆಯ ವಿಚಾರ. ಪಾಕಿಸ್ತಾನದ ನೂರಾರು ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದಾರೆ. ನಮ್ಮ ದೇಶದ ಸೈನಿಕರು ದೇಶದ ಜನರ ಪರವಾಗಿ ಯುದ್ಧ ಮಾಡುತ್ತಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬಲು ನಾವು ಪೂಜೆ ಮಾಡುತ್ತಿದ್ದೇವೆ. ನಮ್ಮ ದೇಶದ ಸೈನಿಕರಿಗೆ ಎಲ್ಲ ಯಶಸ್ಸು ಸಿಗಲಿ ಎಂದರು. ನಗರ ಬಿಜೆಪಿ ಅಧ್ಯಕ್ಷ ಗಿರಿಧರ್ ಮಾತನಾಡಿ ಪಾಕಿಸ್ತಾನವು ಕಳೆದ ೧೫ ವರ್ಷಗಳಿಂದ ಭಾರತದ ಮೇಲೆ ನಿರಂತರವಾಗಿ ಉಗ್ರರನ್ನು ಬಿಟ್ಟು ಪೈಶಾಚಿಕ ಕೃತ್ಯ ಎಸಗುತ್ತಿದ್ದಾರೆ. ಉಗ್ರರು ಇರುವ ಜಾಗಕ್ಕೆ ಹೋಗಿ ಅವರನ್ನು ಹೊಡೆದುರುಳಿಸುವಂತಹ ಶಕ್ತಿ ನಮ್ಮ ದೇಶದ ಸೈನಿಕರಿಗಿದೆ. ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ ಎಂದು ನಾವು ಹಲವು ವರ್ಷಗಳಿಂದ ಹೇಳಿಕೊಂಡು ಬಂದಿದ್ದೇವೆ. ಆ ಸಿಂಧೂರದ ಹೆಸರಿನಲ್ಲಿ ಇಂದು ಪಾಕಿಸ್ತಾನ ಮೇಲೆ ಯುದ್ಧ ಸಾರಿದ್ದು, ಯುದ್ಧದಲ್ಲಿ ದೇಶಕ್ಕೆ ಯಶಸ್ಸು ದೊರಕಲಿ ಎಂದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರ್.ಕೆ.ಶ್ರೀನಿವಾಸ್ ಮಾತನಾಡಿ ದೇಶದ ಗಡಿಯಲ್ಲಿ ನಡೆಯುತ್ತಿರುವ ಆಪರೇಷನ್ ಸಿಂಧೂರ ಯಶಸ್ವಿಯಾಗಬೇಕು. ಜೀವದ ಹಂಗನ್ನು ತೊರೆದು ಹೋರಾಟ ಮಾಡುತ್ತಿರುವ ಹೆಮ್ಮೆಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ಅವರ ಆರೋಗ್ಯ ಗಟ್ಟಿಯಾಗಿರಲು ಇಂದು ಪೂಜೆ ಸಲ್ಲಿಸುತ್ತಿದ್ದೇವೆ ಎಂದರು. ನಗರಸಭೆ ಸದಸ್ಯೆ ಉಮಾ ವಿಜಯರಾಜ್ ಮಾತನಾಡಿ ಪಹಲ್ಗಾಮ್ನಲ್ಲಿ ನಡೆದ ಭಯಂಕರ ಕೃತ್ಯದಲ್ಲಿ ಹೆಣ್ಣು ಮಕ್ಕಳ ಎದುರಿಗೆ ಅವರ ಗಂಡಂದಿರನ್ನು ಕೊಂದ ದುಷ್ಟ ಮನಸ್ಥಿತಿಯ ಉಗ್ರರನ್ನು ಮಟ್ಟ ಹಾಕಲು ಕಾಲ ಕೂಡಿ ಬಂದಿದೆ. ಮೋದಿಜಿಯವರು ಉಗ್ರಗಾಮಿಗಳು ಇರುವ ಜಾಗಗಳಲ್ಲಿ ಮಾತ್ರ ದಾಳಿ ಮಾಡಿಸಿ ಉಗ್ರರನ್ನು ನಾಶ ಮಾಡುತ್ತಿದ್ದಾರೆ. ಈ ಯುದ್ಧದಲ್ಲಿ ಭಾರತಕ್ಕೆ ಜಯ ಸಿಗಲಿ ನಮ್ಮ ಯೋಧರಿಗೆ ಯಶಸ್ಸು ದೊರಕಲಿ ಎಂದರು. ಈ ಸಂದರ್ಭದಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಚಂಗಾವರ ಮಾರಣ್ಣ, ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರಾದ ಈರಣ್ಣ ಪಟೇಲ್, ನಿಕಟ ಪೂರ್ವ ಅಧ್ಯಕ್ಷರಾದ ಚಿಕ್ಕಣ್ಣ, ಮಾಜಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ, ತಾಲೂಕು ಪ್ರಧಾನ ಕಾರ್ಯದರ್ಶಿ ನಟರಾಜ್ ಸಂತೆಪೇಟೆ, ಗುಡ್ಡದಹಟ್ಟಿ ವಿರೇಶ್, ಗ್ರಾಮ ಪಂಚಾಯತಿ ಸದಸ್ಯರಾದ ಸ್ನೇಹಪ್ರಿಯ ಶಿವು, ಎಂ. ಶಿವಲಿಂಗಯ್ಯ, ಹಾಗೂ ಭೋಪ್ಪರಾಯಪ್ಪ, ಟಿಪಿ ರಾಜಣ್ಣ, ಮುಖಂಡರಾದ ಹನುಮಂತ ನಾಯಕ, ತಡಕಲೂರು ಹರೀಶ್, ಚಿಕ್ಕನಹಳ್ಳಿ ತೇಜು, ಸೈಯದ್ ಬಾಬಾ, ರಾಜೇಶ್ ನಾಯಕ, ರತ್ನಮ್ಮ, ಕವಿತಾ ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?