ಗಂಡಾಂತರ ಗರ್ಭಿಣಿಯರಿಗೆ ನಿರಂತರ ತಪಾಸಣೆ ಮಾಡಿಸಿ

KannadaprabhaNewsNetwork |  
Published : Dec 19, 2024, 12:30 AM IST
ಬಳ್ಳಾರಿ ತಾಲೂಕಿನ ವೈ.ಕಗ್ಗಲ್ ಗ್ರಾಮದ ಆಯುಷ್ಮಾನ ಆರೋಗ್ಯ ಮಂದಿರಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ  ವೈ.ರಮೇಶ್ ಬಾಬು ಅವರು ಗ್ರಾಮದ ಗರ್ಭೀಣಿಯರ ಆರೋಗ್ಯ ವಿಚಾರಿಸಿದರು.  | Kannada Prabha

ಸಾರಾಂಶ

ಗರ್ಭಿಣಿಯರ ಆರೋಗ್ಯ ಸುರಕ್ಷತೆಗೆ ಒತ್ತು ನೀಡಬೇಕು.

ಬಳ್ಳಾರಿ: ಚೊಚ್ಚಲ ಅಥವಾ ಗಂಡಾಂತರ ಗರ್ಭಿಣಿಯರು ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರಂತರ ತಪಾಸಣೆ ಮಾಡಿಸಬೇಕು. ತಪ್ಪದೇ ತಾಯಿ ಕಾರ್ಡ್ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಹೇಳಿದರು.

ತಾಲೂಕಿನ ವೈ.ಕಗ್ಗಲ್ ಗ್ರಾಮದಲ್ಲಿ ಆಯುಷ್ಮಾನ ಆರೋಗ್ಯ ಮಂದಿರಕ್ಕೆ ಭೇಟಿ ನೀಡಿ ಗ್ರಾಮದಲ್ಲಿಯ ಗರ್ಭೀಣಿಯರ ಆರೋಗ್ಯ ವಿಚಾರಿಸಿ ಅವರ ಪಾಲಕರೊಂದಿಗೆ ಮಾತನಾಡಿದರು.

ಮನೆಯಲ್ಲಿ ಮಗಳಾಗಲಿ ಅಥವಾ ಸೊಸೆಯಾಗಲಿ ಗರ್ಭಿಣಿಯೆಂದು ತಿಳಿದ ದಿನದಿಂದಲೇ ನಿರಂತರವಾಗಿ ವೈದ್ಯರಿಂದ ಮಾಡಿಸಬೇಕಾದ ತಪಾಸಣೆ ಹಾಗೂ ಅಗತ್ಯ ಚಿಕಿತ್ಸೆ ನೀಡುವ ಅವಶ್ಯಕತೆ ಇದ್ದಲ್ಲಿ ಕುಟುಂಬದ ಸದಸ್ಯರು ವೈಯಕ್ತಿಕ ಕೆಲಸಗಳ ಕಾರಣದಿಂದ ತಡ ಮಾಡಬಾರದು. ಗರ್ಭಿಣಿಯರ ಆರೋಗ್ಯ ಸುರಕ್ಷತೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಗಂಡಾಂತರ ಗರ್ಭಿಣಿಯರು ಎಂದು ಗುರ್ತಿಸಿದ ನಂತರ ವೈದ್ಯರ ಸೂಚನೆಯಂತೆ ಅವರ ನಿರಂತರ ನಿಗಾವಣೆ, ರಕ್ತದೊತ್ತಡ ಪರೀಕ್ಷೆ ಕೈಗೊಂಡ ನಂತರ ಕಂಡುಬರುವ ವ್ಯತ್ಯಾಸ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಶೀಲಿಸಿ ಅಗತ್ಯವೆನಿಸಿದಲ್ಲಿ ತಜ್ಞ ವೈದ್ಯರ ಬಳಿ ತಕ್ಷಣವೇ ತೆರಳಬೇಕು ಎಂದರು.

ರಕ್ತಹೀನತೆ ಕಂಡು ಬಂದಲ್ಲಿ ಸ್ಥಳೀಯವಾಗಿ (ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ) ನೀಡುವ ಚಿಕಿತ್ಸೆಯಿಂದ ಸುಧಾರಣೆ ಹೊಂದಬಹುದು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸಬೇಕು. ಮೊದಲ ಹೆರಿಗೆ ಶಸ್ತçಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ್‌ ಟಿ, ನಿರೋಧ ಕುರಿತು ಆರೋಗ್ಯ ಶಿಕ್ಷಣ ಹೊಂದಬೇಕು ಮರೆಯಬಾರದು. ಗರ್ಭಿಣಿಗೆ ಮೇಲ್ಮಟ್ಟದ ಆಸ್ಪತ್ರೆಗೆ ಶಿಫಾರಸು ಮಾಡುವಾಗ 108 ಆರೋಗ್ಯ ಕವಚ ವಾಹನ ಬರುವ ಸಮಯ ತಡವಾಗುವ ಸಾಧ್ಯತೆ ಇದ್ದಲ್ಲಿ ತಕ್ಷಣ ವೈದ್ಯಾಧಿಕಾರಿಗಳು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಬೇಕು. ಹೆರಿಗೆ ವಿಷಯವನ್ನು ಆದ್ಯತೆಯಾಗಿಟ್ಟುಕೊಂಡು ಸ್ಥಳೀಯ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಮನ್ವಯ ಸಭೆ ಕೈಗೊಂಡು ತಮ್ಮ ವ್ಯಾಪ್ತಿಯ ಗರ್ಭಿಣಿಯರ ಆರೈಕೆ ಕುರಿತು ನಿಗಾವಹಿಸಲು ಕ್ರಮವಹಿಸಿ ಎಂದು ತಿಳಿಸಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆರಿಗೆಗೆ ಗರ್ಭಿಣಿ ಬಂದಾಗ ಅಗತ್ಯ ಪರೀಕ್ಷೆ ಮೂಲಕ ಹೆರಿಗೆ ನಿರ್ವಹಿಲು ಸಾಧ್ಯತೆಯಾಗಬೇಕು. ಇಲ್ಲದಿದ್ದಲ್ಲಿ ಗಂಭೀರತೆ ಕಂಡುಬಂದರೆ ತಡ ಮಾಡದೇ ಸಿಬ್ಬಂದಿ ಸಹಿತ ಶಿಫಾರಸಿಗೆ ಮರೆಯಬಾರದು ಎಂದರು.

ವೈದ್ಯಾಧಿಕಾರಿ ಡಾ.ಕಾವ್ಯಶ್ರೀ, ಡಿಎನ್‌ಒ ಗಿರೀಶ್, ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ಚಂದ್ರಕಲಾ, ಸಮುದಾಯ ಆರೋಗ್ಯಾಧಿಕಾರಿ ಮೊನಿಕಾ, ಪ್ರಾಥಮಿಕ ಸುರಕ್ಷಾಧಿಕಾರಿ ನಾಗಮ್ಮ, ಆಶಾ ಕಾರ್ಯಕರ್ತೆಯರಾದ ಸಿದ್ದಮ್ಮ, ರೇಣುಕಾ, ಕಸ್ತೂರಿ ಉಪಸ್ಥಿತರಿದ್ದರು.

ಬಳ್ಳಾರಿ ತಾಲೂಕಿನ ವೈ.ಕಗ್ಗಲ್ ಗ್ರಾಮದ ಆಯುಷ್ಮಾನ ಆರೋಗ್ಯ ಮಂದಿರಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ವೈ.ರಮೇಶ್ ಬಾಬು ಗ್ರಾಮದ ಗರ್ಭೀಣಿಯರ ಆರೋಗ್ಯ ವಿಚಾರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷಭೇದ ಮರೆತು ಸಮುದಾಯಕ್ಕೆ ಶ್ರಮಿಸಬೇಕು: ಆರ್.ಅಶೋಕ್
ಕಾಡು ಬಸವೇಶ್ವರ ಶ್ರೀ ಆಂಜನೇಯ ದೇವಾಲಯ ಜೀರ್ಣೋದ್ಧಾರ