ಇಳಕಲ್ಲ ಪಟ್ಟಣಕ್ಕೆ ನಿರಂತರ ಕುಡಿವ ನೀರು

KannadaprabhaNewsNetwork |  
Published : Nov 19, 2026, 03:00 AM IST
ಕ್ಯಾಶಪ್ಪ | Kannada Prabha

ಸಾರಾಂಶ

ಅಮೃತ-2.0 ಯೋಜನೆಯಡಿ ಇಳಕಲ್ಲ ಪಟ್ಟಣಕ್ಕೆ ₹37.17 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ನೀರು ಸರಬರಾಜು ಯೋಜನೆಯ ಪುನಶ್ಚೇತನ ಕಾಮಗಾರಿಗೆ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಇಳಕಲ್‌ನ ಚಾಲುಕ್ಯ ನಗರದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಮೃತ-2.0 ಯೋಜನೆಯಡಿ ಇಳಕಲ್ಲ ಪಟ್ಟಣಕ್ಕೆ ₹37.17 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ನೀರು ಸರಬರಾಜು ಯೋಜನೆಯ ಪುನಶ್ಚೇತನ ಕಾಮಗಾರಿಗೆ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಇಳಕಲ್‌ನ ಚಾಲುಕ್ಯ ನಗರದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

ಇಳಕಲ್‌ ನಗರಸಭೆ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಯೋಗದಲ್ಲಿ ಈ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಯೋಜನೆಯನ್ನು 18 ತಿಂಗಳಲ್ಲಿ ಕಾರ್ಯಗತಗೊಳಿಸುವ ಗುರಿ ಹೊಂದಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಪಟ್ಟಣಕ್ಕೆ 24 ಗಂಟೆಗಳ ಕಾಲ ನಿರಂತರ ಕುಡಿಯುವ ನೀರು ಪೂರೈಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಆಲಮಟ್ಟಿ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಹುನಗುಂದ, ಇಲಕಲ್ಲ, ಕುಷ್ಟಗಿ ಪಟ್ಟಣಗಳು ಹಾಗೂ ಮಾರ್ಗಮಧ್ಯದ ಆರು ಗ್ರಾಮಗಳಿಗೆ 2014ರಲ್ಲಿಯೇ ಆರಂಭಿಸಲಾಗಿತ್ತು. ಆದರೆ, ಈ ವರ್ಷಗಳಲ್ಲಿ ಇಳಕಲ್‌ ಪಟ್ಟಣ ಜನಸಂಖ್ಯೆ ಹಾಗೂ ವಿಸ್ತೀರ್ಣದಲ್ಲಿ ವ್ಯಾಪಕವಾಗಿ ಬೆಳವಣಿಗೆಯಾದ ಹಿನ್ನೆಲೆಯಲ್ಲಿ ಹಾಲಿ ನೀರು ಸರಬರಾಜು ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಅಗತ್ಯ ಎದುರಾಗಿದೆ. ಯೋಜನೆಯ ಪುನಶ್ಚೇತನ ಕಾಮಗಾರಿಯಡಿ ಹಾಲಿ ಮೋಟಾರ್ ಹಾಗೂ ಪಂಪ್‌ಸೆಟ್‌ಗಳನ್ನು ಬದಲಾಯಿಸಲಾಗುತ್ತಿದೆ. ಆಲಮಟ್ಟಿ ಮೂಲ ಸ್ಥಾವರದಲ್ಲಿ ತಲಾ 600 ಎಚ್‌ಪಿ ಸಾಮರ್ಥ್ಯದ ಮೂರು ಪಂಪ್‌ಸೆಟ್‌ಗಳನ್ನು ಅಳವಡಿಸುವ ಜೊತೆಗೆ ಅಗತ್ಯ ವಿದ್ಯುತಾಂತ್ರಿಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಒಂದು ಪಂಪ್‌ಸೆಟ್‌ನಲ್ಲಿ ತಾಂತ್ರಿಕ ದೋಷ ಉಂಟಾದರೂ, ಉಳಿದ ಪಂಪ್‌ಸೆಟ್‌ಗಳ ಮೂಲಕ ನೀರು ಎತ್ತುವ ವ್ಯವಸ್ಥೆ ಇರಲಿದೆ. ಇದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ನಿರಂತರ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಹುನಗುಂದ ಪಟ್ಟಣದ ಜಲಶುದ್ಧೀಕರಣ ಘಟಕದಲ್ಲಿಯೂ ತಲಾ 200 ಎಚ್‌ಪಿ ಸಾಮರ್ಥ್ಯದ ಮೂರು ಪಂಪ್‌ಸೆಟ್‌ಗಳ ಅಳವಡಿಕೆ ಸೇರಿದಂತೆ ಅಗತ್ಯ ವಿದ್ಯುತಾಂತ್ರಿಕ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇದರಿಂದ ನೀರು ಶುದ್ಧೀಕರಣ ಹಾಗೂ ಸರಬರಾಜು ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ. ಈ ಕಾಮಗಾರಿಯಿಂದ ಇಳಕಲ್‌ ಹಾಗೂ ಹುನಗುಂದ ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಜನರಿಗೆ ಸಮರ್ಪಕ ಕುಡಿಯುವ ನೀರು ಲಭ್ಯವಾಗಲಿದೆ ಎಂದರು.ಇನ್ನು, ತಾಂತ್ರಿಕ ದೋಷದಿಂದಾಗಿ ಪಟ್ಟಣದಲ್ಲಿ ನೀರು ಸರಬರಾಜು ವಿಳಂಬವಾಗಿದ್ದಕ್ಕೆ ಸಚಿವರು ವಿಷಾದ ವ್ಯಕ್ತಪಡಿಸಿದರು. ಮುಂದೆ ಇಂತಹ ಸಮಸ್ಯೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಬಾಗಲಕೋಟೆ ವಿಭಾಗದ ಕಾರ್ಯಪಾಲಕ ಅಭಿಯಂತರ ಗುರುರಾಜ ಬಂಗಿನ್ನವರ, ಇಳಕಲ್‌ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಸೇರಿ ಅರುಣ ಬಿಜ್ಜಳ, ಸುಧಾರಾಣಿ ಸಂಗಮ, ಸಂಗಣ್ಣ ಗಂಜಿಹಾಳ, ಮಹಾಂತೇಶ ಅವಾರಿ, ಶಿವಾನಂದ ಕಂಠಿ, ರಾಜು ಬೋರಾ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಪಿಆರ್ ಸಿದ್ಧಪಡಿಸಲು ತ್ವರಿತ ಅನುಮೋದನೆ ನೀಡಿ
ಆರ್‌ಎಸ್‌ಎಸ್‌ ಆಕರ್ಷಕ ಪಥ ಸಂಚಲನ