- ರೇಣುಕಾ ಅಕಾಡೆಮಿ ಫಾರ್ ಡಿಸೆಬಲ್ಡ್ ಸಂಸ್ಥೆ ಅಧ್ಯಕ್ಷ ರಂಗಸ್ವಾಮಿ
- - -ಕನ್ನಡಪ್ರಭ ವಾರ್ತೆ ಜಗಳೂರು
ಅಂಧರ ಅಭಿವೃದ್ಧಿ ದೃಷ್ಟಿಯಿಂದ ನ್ಯಾಯಾಂಗ ಇಲಾಖೆ ಸಹಕಾರ ಪಡೆದು ಜಗಳೂರಿನಲ್ಲಿ ಅಂಧರ ಆನ್ಲೈನ್ ಕಂಪ್ಯೂಟರ್ ತರಬೇತಿ ಮತ್ತು ತಂತ್ರಜ್ಞಾನ ಕೌಶಲ್ಯ ತರಬೇತಿ ಕೇಂದ್ರ ತೆರೆಯಲಾಗುವುದು ಎಂದು ರೇಣುಕಾ ಅಕಾಡೆಮಿ ಫಾರ್ ಡಿಸೆಬಲ್ಡ್ ಸಂಸ್ಥೆ ಅಧ್ಯಕ್ಷ ರಂಗಸ್ವಾಮಿ ಹೇಳಿದರು.ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೇಣುಕಾ ಅಕಾಡೆಮಿ ಅಂಧರ ಆನ್ಲೈನ್ ಕಂಪ್ಯೂಟರ್ ತರಬೇತಿ ಮತ್ತು ತಂತ್ರಜ್ಞಾನ ಕೌಶಲ ತರಬೇತಿ ಕೇಂದ್ರ ಮತ್ತು ಕೃತಕ ಬುದ್ಧಿಮತ್ತೆ (ಎಐ) ಬಗ್ಗೆ ವಿಕಲಚೇತನ ವಿದ್ಯಾರ್ಥಿಗಳ ಜತೆ ಕೃತಕ ಎಐ ಪ್ರಭಾವ ಹಾಗೂ ಅದರಿಂದಾಗುವ ಬದಲಾವಣೆಗಳ ಕುರಿತು ಚರ್ಚೆ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಕಲಚೇತನರ ಸೇವೆ ನಿರಂತರ ಮುಂದುವರಿಸುವ ಹಾಗೂ ಸಾಮಾನ್ಯರಂತೆ ವಿಕಲಚೇತನರು ಸಹ ಎಲ್ಲ ವಲಯಗಳಲ್ಲಿ ಉದ್ಯೋಗ ಪಡೆದು ಸ್ವಾಭಿಮಾನದ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತದೆ. ವಿಕಲಚೇತನರು ಯುಪಿಎಸ್ಸಿ, ಕೆಪಿಎಸ್ಸಿ ಐಪಿಎಸ್, ಐಎಎಸ್ ಅಧಿಕಾರಿಗಳಾಗಿ ಉತ್ತಮ ಉದ್ಯೋಗ ವಲಯವನ್ನೇ ಸೃಷ್ಟಿಸುವ ಕೆಲಸ ಮಾಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆ, ಕಾರ್ಯಕ್ರಮಗಳನ್ನು ತಂದಿವೆ. ಆದರೆ ವಿಕಲಚೇತನರಿಗೆ ಹೆಚ್ಚಿನ ಸವಲತ್ತುಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದರು.ಲಕ್ಷ್ಮಮ್ಮ ಶಾಲೆ ಮುಖ್ಯ ಶಿಕ್ಷಕ ಶಶಿಕಲಾ ಮಾತನಾಡಿ, ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಏನಾದರೂ ಹೊಸತನ್ನು ಕಲಿಯುತ್ತಿರಬೇಕು. ಸತತ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಅದೇ ದಾರಿಯಲ್ಲಿ ರಂಗಸ್ವಾಮಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ನಂದಿನಿ ಹಾಲಿನ ವ್ಯಾಪಾರಿ ಸಿಖಂದರ್ ಆಲಿ ಮಾತನಾಡಿ, ವಿಕಲಚೇತನರು ಸ್ವಯಂ ವೃತ್ತಿಯನ್ನು ಕೈಗೊಂಡು ಅವರು ಸಮಾಜದಲ್ಲಿ ಇತರರಂತೆ ಮುಖ್ಯ ವಾಹಿನಿಗೆ ಬಂದು ಜೀವನ ಮಾಡಬೇಕಾಗಿದೆ ಎಂದರು.ವೀರೇಶ್, ರಂಗಸ್ವಾಮಿ ಪತ್ನಿ ಕರಿಬಸಮ್ಮ, ಪೆಟ್ರೋಲ್ ಬಂಕ್ ಮಾಲೀಕ ತಿಪ್ಪೇಸ್ವಾಮಿ, ಎಂಆರ್‌ಡಬ್ಲ್ಯೂ ನಿವೃತ್ತ ಶಿಕ್ಷಕ ಅಬ್ದುಲ್ ರಜಾಕ್, ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ಭರಮಸಮುದ್ರ ಕುಮಾರ್ ಶಿವಣ್ಣ ಮತ್ತಿತರರು ಇದ್ದರು.
- - --15ಜೆ.ಜಿ.ಎಲ್.1:
ಸಮಾರಂಭವನ್ನು ರೇಣುಕಾ ಅಕಾಡೆಮಿ ಫಾರ್ ಡಿಸೆಬಲ್ಡ್ ಸಂಸ್ಥೆ ಅಧ್ಯಕ್ಷ ರಂಗಸ್ವಾಮಿ ಉದ್ಘಾಟಿಸಿದರು.