ಕನ್ನಡಪ್ರಭ ವಾರ್ತೆ, ಕಡೂರು
ನಮ್ಮ ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಸತಿ ಶಾಲೆಗಳ ಸ್ಥಾಪನೆಯೂ ಸೇರಿದಂತೆ ಶಾಲೆ ಹಾಗೂ ಹಾಸ್ಟೆಲ್ ಗಳ ನಿರ್ಮಾಣಕ್ಕೆ ಒಟ್ಟಾರೆ ಸುಮಾರು ₹156 ಕೋಟಿ ಅನುದಾನ ತರುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಯಗಟಿ ಹೋಬಳಿ ಭೈರಗೊಂಡನಹಳ್ಳಿಯಲ್ಲಿ ಸೋಮವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಮೊರಾರ್ಜಿ ವಸತಿ ಶಾಲೆ ನೂತನ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನ ಚೌಳಹಿರಿಯೂರು, ಯಗಟಿ ಹಾಗೂ ಪಂಚನಹಳ್ಳಿ ಮೊರಾರ್ಜಿ ವಸತಿ ಶಾಲೆ ಗಳಿಗೆ ತಲಾ ₹22 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ, ಕಾರ್ಮಿಕ ವಸತಿ ಶಾಲೆಗೆ ₹35.50 ಕೋಟಿ, ₹4 ಕೋಟಿ ವೆಚ್ಚದಲ್ಲಿ ಅಲೆಮಾರಿ ವಸತಿ ಶಾಲೆ, ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಶಾಲೆಗೆ₹15 ಕೋಟಿ ಮಂಜೂರಾಗಿದ್ದು ತಾತ್ಕಾಲಿಕ ಕೊಠಡಿಯಲ್ಲಿ ಶಾಲೆ ಆರಂಭಿಸಿ ಪ್ರವೇಶ ಕಲ್ಪಿಸಿದೆ. ಯಗಟಿ ಪ್ರಥಮ ದರ್ಜೆ ಕಾಲೇಜಿಗೆ ₹5 ಕೋಟಿ, ಕಡೂರಿಗೆ ₹3 ಕೋಟಿ, ಪಂಚನಹಳ್ಳಿಗೆ ₹2ಕೋಟಿ ಮತ್ತು ಬೀರೂರು ಕಾಲೇಜಿಗೆ ₹1ಕೋಟಿ ಹಣ ಹೆಚ್ಚುವರಿ ಕೊಠಡಿಗಳಿಗೆ ಮಂಜೂರಾಗಿದೆ. ಶಿಕ್ಷಣ ಇಲಾಖೆಯಿಂದಲೇ ಸುಮಾರು ₹136 ಕೋಟಿ ಮಂಜೂರಾಗಿದೆ. ಬಹುಶಃ ರಾಜ್ಯದಲ್ಲಿಯೇ ಅತಿ ಹೆಚ್ಚು ಅನುದಾನ ನನ್ನ ಕ್ಷೇತ್ರಕ್ಕೆ ತಂದಿದ್ದೇನೆ ಎಂದು ವಿವರ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ 2013-18ರ ಅವಧಿಯಲ್ಲಿ ಹೋಬಳಿಗೆ ಒಂದು ಮೊರಾರ್ಜಿ ಶಾಲೆ ಆರಂಭಿಸಲು ಆದೇಶ ಹೊರಡಿಸಿದ ಸಮಯದಲ್ಲಿ ಯಗಟಿಗೂ ಶಾಲೆ ಮಂಜೂರಾಗಿತ್ತು. ಹಾಗಾಗಿ ಈ ಭಾಗದ ಜನರ ಹತ್ತಾರು ವರ್ಷಗಳ ಕನಸು ಈಗ ನನಸಾಗುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಸುಶಿಕ್ಷಿತರಾದರೆ ವ್ಯವಸ್ಥೆ ಯೇ ಬದಲಾಗಲಿದೆ. ಪ್ರಾಥಮಿಕ ಹಂತ ದಿಂದ ಪದವಿ ಪೂರ್ವ ಶಿಕ್ಷಣದವರೆಗೆ ಈ ಶಾಲೆಗಳಲ್ಲಿ ಇರುವ ಪೈ ಪೋಟಿಯೇ ಇದಕ್ಕೆ ನಿದರ್ಶನ ಎಂದರು. ಚೌಳಹಿರಿಯೂರು, ಕೆ.ಬಸವನಹಳ್ಳಿ ಮತ್ತು ಯಳಗೊಂಡನಹಳ್ಳಿಗಳಲ್ಲಿ ವಿದ್ಯುತ್ ಪ್ರಸರಣ ಉಪ ಕೇಂದ್ರ ಸ್ಥಾಪನೆಗೆ ಜಾಗ ಗುರುತಿಸಿ, ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ. ಹೆಚ್ಚುವರಿಯಾಗಿ ಅರೇಹಳ್ಳಿ, ಜಿಗಣೇಹಳ್ಳಿ ಮತ್ತು ಬಳ್ಳಿಗನೂರುಗಳಲ್ಲಿ ಉಪಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮಗಳಲ್ಲಿ ನಿವೇಶನ ಅಥವಾ ವಸತಿಗೆ ಸಂಭಂದಿಸಿದಂತೆ ಹಕ್ಕುಪತ್ರ ಪಡೆಯಲು ಇದ್ದ 94 ಸಿ ರದ್ದುಪಡಿಸಿ, ಹಕ್ಕುಪತ್ರ, ಪ್ರಾಪರ್ಟಿ ಕಾರ್ಡ್ ಮತ್ತು ಇ-ಸೊತ್ತು ವಿತರಿಸಲು 94 ಡಿ ಎಂಬ ಹೊಸ ನಮೂನೆ ಆರಂಭಿಸಲಾಗಿದೆ. ತಾಲೂಕಿನಲ್ಲಿ ದಾಖಲೆಗಳ ಪ್ರಕಾರ 498 ಹಳ್ಳಿ ಇದ್ದರೂ ಕಂದಾಯ ಗ್ರಾಮ ಎಂದು ಗುರುತಿ ಸಿದ್ದು 321 ಮಾತ್ರ. ಈಗ ಉಳಿದ ಗ್ರಾಮಗಳ ಪೈಕಿ 61ಕ್ಕೆ ಅಂತಿಮ ಅಧಿಸೂಚನೆ ಮೂಲಕ ಕಂದಾಯ ಗ್ರಾಮ, ಉಪ ಗ್ರಾಮವಾಗಿ ಗುರುತಿಸಿದೆ. ಇನ್ನುಳಿದ 72 ರಲ್ಲಿ ಪ್ರಾಥಮಿಕ ಪ್ರಕ್ರಿಯೆ ಮುಗಿಸಿ ಪ್ರಸ್ತಾವನೆ ಕಳಿಸಲಾಗಿದೆ. ಕ್ಷೇತ್ರದಲ್ಲಿ 14 700 ಮನೆಗಳಿಗೆ ಇ-ಸ್ವತ್ತು ಸಿಕ್ಕಿಲ್ಲ. ಈಗ 3 ಸಾವಿರ ಹಕ್ಕುಪತ್ರ ಸಿದ್ದಗೊಳಿಸಿದ್ದು ಒಟ್ಟಾರೆಯಾಗಿ 5 ಸಾವಿರ ಹಕ್ಕುಪತ್ರ ಗಳನ್ನು ಕೆಲವೇ ದಿನಗಳಲ್ಲಿ ವಿತರಿಸ ಲಾಗುವುದು ಎಂದು ತಿಳಿಸಿದರು. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಯರದಕೆರೆ ರಾಜಪ್ಪ ಮಾತನಾಡಿ ಮೊರಾರ್ಜಿ ಶಾಲೆ ಎಲ್ಲಿ ಮಂಜೂ ರಾಗಿದೆಯೋ ಅಲ್ಲಿ ನಡೆದರೆ ಉತ್ತಮ. ಈ ಶಾಲೆಗಳು ಮಕ್ಕಳ ಭವಿಷ್ಯ ರೂಪಿಸುವ ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿದ್ದು ಕಟ್ಟಡ ನಿರ್ಮಾಣ ಹಾಗೂ ಭೂಮಿ ಮಂಜೂರಾತಿಗೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ ಶಾಸಕರನ್ನು ಅಭಿನಂದಿಸುವುದಾಗಿ ತಿಳಿಸಿದರು.ಮುಖಂಡರಾದ ಡಿ. ಎಸ್. ಉಮೇಶ್, ಶರತ್ ಕೃಷ್ಣಮೂರ್ತಿ, ಭೋಗಪ್ಪ, ಶೇಖರಪ್ಪ, ಗೋವಿಂದಪ್ಪ, ಉಡುಗೆರೆ ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ ಬಸವರಾಜಪ್ಪ, ಯಗಟಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ವಿಶ್ವನಾಥ್, ಗ್ರಾಪಂ ಉಪಾಧ್ಯಕ್ಷರು, ಸದಸ್ಯರು, ಗೃಹ ನಿರ್ಮಾಣ ಮಂಡಳಿಯ ಎಂಜಿನಿಯರ್‌ಗಳಾದ ಶರಣಪ್ಪ, ಗೀತಾ, ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಮಂಜುನಾಥ್, ಕಡೂರು ಬಿಸಿಎಂ ಅಧಿಕಾರಿ ದೇವರಾಜ್, ಅರಣ್ಯಾಧಿಕಾರಿ ಹರೀಶ್, ಕಂದಾಯಾಧಿಕಾರಿ ತಿಪ್ಪೇಸ್ವಾಮಿ ಮತ್ತು ಗ್ರಾಮಸ್ಥರು ಇದ್ದರು. 15ಕೆಕೆಡಿಯು3. ಕಡೂರಿನ ಯಗಟಿ ಹೋಬಳಿ ಭೈರಗೊಂಡನಹಳ್ಳಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಮೊರಾರ್ಜಿ ಶಾಲೆ ನೂತನ ಕಟ್ಟಡಕ್ಕೆ ಶಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು.