ಭ್ರೂಣ ಹತ್ಯೆ ವಿರುದ್ದ ನಿರಂತರ ಹೋರಾಟ ಅಗತ್ಯ: ಬನಶ್ರೀ

KannadaprabhaNewsNetwork |  
Published : Jul 09, 2025, 12:20 AM IST
ಚಿತ್ರದುರ್ಗ ಮೂರನೇ ಪುಟದ ಬಾಟಂ | Kannada Prabha

ಸಾರಾಂಶ

ಮಹಿಳೆಯರ ಜ್ವಲಂತ ಸಮಸ್ಯೆಗಳಾದ ಬಾಲ್ಯ ವಿವಾಹ, ಸ್ತ್ರೀ ಭ್ರೂಣ ಹತ್ಯೆ, ಲಿಂಗ ತಾರತಮ್ಯ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಅಪೌಷ್ಟಿಕತೆ, ಅಭದ್ರತೆ ವಿರುದ್ಧ ಪ್ರಬಲ ಹೋರಾಟಗಳ ರೂಪಿಸುವುದು ಅನಿವಾರ್ಯವೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಹಿಳೆಯರ ಜ್ವಲಂತ ಸಮಸ್ಯೆಗಳಾದ ಬಾಲ್ಯ ವಿವಾಹ, ಸ್ತ್ರೀ ಭ್ರೂಣ ಹತ್ಯೆ, ಲಿಂಗ ತಾರತಮ್ಯ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಅಪೌಷ್ಟಿಕತೆ, ಅಭದ್ರತೆ ವಿರುದ್ಧ ಪ್ರಬಲ ಹೋರಾಟಗಳ ರೂಪಿಸುವುದು ಅನಿವಾರ್ಯವೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಸೆಕ್ರೆಟೇರಿಯಟ್ ಸದಸ್ಯೆ ಬನಶ್ರೀ ಅಭಿಪ್ರಾಯಪಟ್ಟರು.

ನಗರದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಅರಿವಿನ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಜನಿಸುವ - ಅರಳುವ - ಉಳಿಯುವ ಹಕ್ಕಿಗಾಗಿ, ಸ್ತ್ರೀ ಭ್ರೂಣ ಹತ್ಯೆ, ಬಾಲ್ಯ ವಿವಾಹ, ಅಪ್ರಾಪ್ತ ಗರ್ಭಧಾರಣೆ ಕೊನೆಹಾಕಲು ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳುವುದು ಅಗತ್ಯವೆಂದರು.

ಹಳೆಯ ಊಳಿಗಮಾನ್ಯ ವ್ಯವಸ್ಥೆಯ ಪುರುಷ ಪ್ರಧಾನ ಮೌಲ್ಯಗಳ ಜತೆಗೆ ಹೆಣ್ಣು ಭೋಗದ ವಸ್ತು ಎಂಬಂತೆ ಬಿತ್ತರಿಸುವ ಅಶ್ಲೀಲ-ಸಿನಿಮಾ ಸಾಹಿತ್ಯ, ಜಾಹಿರಾತುಗಳು, ಪೋರ್ನ್ ವೆಬ್ ಸೈಟ್ ಗಳು, ಮದ್ಯ- ಮಾದಕ ವಸ್ತುಗಳು ಯುವ ಜನತೆಯನ್ನು ದಾರಿ ತಪ್ಪಿಸುತ್ತಿವೆ. ಸಮಾಜದಲ್ಲಿ ಅಪರಾಧಗಳು ಹೆಚ್ಚುವಂತೆ ಪ್ರೇರೇಪಿಸುತ್ತಿವೆ. ಸಾಮಾಜಿಕ ವಾತಾವರಣದಲ್ಲಿ ಮೌಲ್ಯಗಳು ಕುಸಿಯುತ್ತಿವೆ ಎಂದರು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಕಚೇರಿ ಕಾರ್ಯದರ್ಶಿ ಶಾಂತ ಮಾತನಾಡಿ, ಸಾಂಸ್ಕೃತಿಕ ಅಧಃಪತನದಿಂದಾಗಿ ಪುಟ್ಟ ಕಂದಮ್ಮಗಳಿಂದ ಹಿಡಿದು ವಯೋವೃದ್ಧರವರೆಗೂ ಲೈಂಗಿಕ ಅಪರಾಧಗಳು ನಡೆಯುತ್ತಿವೆ. ಪ್ರೀತಿಯ ನಿರಾಕರಣೆಯನ್ನು ಸಹಿಸದ ಸೇಡಿನ ಮನೋಭಾವದಿಂದ ಆಸಿಡ್ ದಾಳಿಗಳು, ಮರ್ಯಾದೆಗೇಡು ಹತ್ಯೆಗಳು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿವೆ. ರಾಜ್ಯದಲ್ಲಿ 2024- 25ರ ಅವಧಿಯಲ್ಲಿ 700ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ವರದಿಯಾಗಿವೆ. ಚಿತ್ರದುರ್ಗ ಜಿಲ್ಲೆ ಒಂದರಲ್ಲಿ 75 ಪ್ರಕರಣಗಳು ದಾಖಲಾಗಿವೆ. ಚಳ್ಳಕೆರೆ ರೆಡ್ಡಿಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಪೋಷಕರುಗಳೆ ಬಾಲಕಿಗೆ ಥಳಿಸಿ ವಿವಾಹ ಮಾಡಲು ಮುಂದಾದಾಗ ಬಾಲಕಿ ಪ್ರತಿಭಟಿಸಿ ಸಾಹಸ ಮೆರೆದಿದ್ದಾಳೆ. ಕಳೆದ ಎರಡು ವರ್ಷಗಳಲ್ಲಿ 13,477 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿರುವುದು ಭಾರಿ ಆತಂಕವನ್ನು ಮೂಡಿಸಿದೆ ಎಂದರು.

ಜಿಲ್ಲಾ ಸಂಚಾಲಕಿ ಸುಜಾತ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲ ಸಿಸ್ಟರ್ ಶೆಶಿಂತ್, ಎಐಎಂಎಸ್‌ಎಸ್‌ನ ಸಹ ಸಂಚಾಲಕಿ ಕುಮುದ, ಕಾರ್ಯಕರ್ತೆ ಐಶ್ವರ್ಯ ಇದ್ದರು.

PREV