ಹೆಚ್.ಕೆ.ಅಶ್ವಥ್ ಹಳುವಾಡಿ
ಕೃಷ್ಣರಾಜಸಾಗರ ಜಲಾಶಯ ಸೇರಿದಂತೆ ಕಾವೇರಿ ಜಲಾಯನ ಪ್ರದೇಶಗಳ ವ್ಯಾಪ್ತಿಯ ಅಣೆಕಟ್ಟೆಗಳಿಂದ ತಮಿಳುನಾಡಿಗೆ ರಾಜ್ಯ ಸರ್ಕಾರ ನಿರಂತರವಾಗಿ ನೀರು ಹರಿಸಿದ ಪರಿಣಾಮ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಾಕಷ್ಟು ಇಳಿಕೆಯಾಗಿದೆ.
ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಕಳೆದೆರಡು ತಿಂಗಳಿಂದ ಕೆಆರ್‌ಎಸ್‌ನಿಂದ ನಿರಂತರವಾಗಿ ಹರಿಯುತ್ತಿದೆ. ಕಾವೇರಿ ನದಿ ನೀರು ನಿಯಂತ್ರಣ ಮಂಡಳಿ ಹಾಗೂ ಪ್ರಾಧಿಕಾರಗಳ ಸೂಚನೆ ಹಾಗೂ ಸುಪ್ರಿಂ ಕೋರ್ಟ್ ಸೂಚನೆಯಂತೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.ಹೇಮಾವತಿ ಅಣೆಕಟ್ಟೆ ಮೂಲಕ ನದಿಗೆ 3800 ಕ್ಯುಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಹಾರಂಗಿ ಜಲಾಶಯದಿಂದ 500 ಕ್ಯುಸೆಕ್ ನೀರು ಕಾವೇರಿ ನದಿಗೆ ಹರಿದು ಬರುತ್ತಿದೆ. ಹೀಗಾಗಿ ಕೆಆರ್‌ಎಸ್‌ಗೆ ಒಳ ಹರಿವು 4,457 ಕ್ಯುಸೆಕ್ ಹೆಚ್ಚಳವಾಗಿದೆ. ಹೀಗಾಗಿ ಕೆಆರ್‌ಎಸ್ ಡ್ಯಾಂನಿಂದ 6,634 ಕ್ಯುಸೆಕ್ ನೀರನ್ನು ಕಾವೇರಿ ನದಿ ಮೂಲಕ ಹೊರ ಹರಿಸಲಾಗುತ್ತಿದೆ. ಅತ್ತ ಕಬಿನಿ ಜಲಾಶಯದಿಂದಲೂ 900 ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿದೆ.
ಈಗ ಕಳೆದ ಸೆ.9 ರಂದು ಮತ್ತೆ 15 ದಿನಗಳು ನಿತ್ಯ 6 ಸಾವಿರ ಕ್ಯುಸೆಕ್ ನೀರು ಬಿಡುಗಡೆಗೆ ಮಂಡಳಿ ಮತ್ತು ಪ್ರಾಧಿಕಾರ ಆದೇಶ ಮಾಡಿದ್ದವು. ಬಳಿಕ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡಲ್ಲ. ಸುಪ್ರಿಂಕೋರ್ಟ್ ಗೆ ಹೋಗುವುದಾಗಿ ತಿಳಿಸಿತ್ತು. ಆದರೆ, ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಕುರಿತಂತೆ ಪ್ರಕರಣ ವಿಚಾರಣೆಗೆ ಬಾರದ ಹಿನ್ನೆಲೆಯಲ್ಲಿ ವಿಧಿ ಇಲ್ಲದೆ ಸರ್ಕಾರ ಇತ್ತ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸುತ್ತಿದೆ. ಅಲ್ಲದೆ ರೈತರ ಕಣ್ಣು ಮರೆಮಾಚಿ ಒಳಹರಿವನ್ನು ಹೆಚ್ಚಿಸಿ ನಿರಂತರವಾಗಿ ನೀರು ಹರಿಸುತ್ತಿದೆ.
ಸರ್ಕಾರ ತಮಿಳುನಾಡಿಗೆ ನೀರು ಹರಿಸಲು ಕೆಆರ್ ಎಸ್ ಜಲಾಶಯದ ಮೇಲ್ಬಾಗದ ಅಣೆಕಟ್ಟೆಗಳಾದ ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಿಂದ ಕಾವೇರಿ ನದಿಗೆ ನೀರು ಹರಿಸಲಾಗುತ್ತಿದೆ. ಈ ಮೂಲಕ ಕನ್ನಂಬಾಡಿ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಅತ್ತ ಕಬಿನಿ ಜಲಾಶಯದಿಂದಲೂ ಈ ಹಿಂದೆ ತಮಿಳುನಾಡಿಗೆ ನೀರು ಬಿಡಲಾಗುತ್ತಿತ್ತು. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು.
ಖಾಲಿಯಾಗುತ್ತಿರುವ ನೀರು:
124.80 ಅಡಿ ಗರಿಷ್ಠ ಮಟ್ಟದ ಕೆಆರ್ ಎಸ್ ನಲ್ಲಿ 105.85 ಅಡಿ ನೀರು ಸಂಗ್ರಹವಾಗಿದೆ. ಹಾರಂಗಿ 2859 ಗರಿಷ್ಠ ಮಟ್ಟ ಹೊಂದಿದ್ದು, 2849.26 ಅಡಿ, 2922 ಅಡಿ ಗರಿಷ್ಠ ಮಟ್ಟದ ಹೇಮಾವತಿ ಜಲಾಶಯದಲ್ಲಿ 2893.65 ಅಡಿ ನೀರು ಇದ್ದು, 2284 ಅಡಿ ಗರಿಷ್ಠ ಮಟ್ಟದ ಕಬಿನಿ ಜಲಾಶಯದಲ್ಲಿ 2268 ಅಡಿ ನೀರು ಸಂಗ್ರಹವಾಗಿದೆ.
ಯಾವುದೇ ಮುನ್ಸೂಚನೆ ಇಲ್ಲದೆ ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡುತ್ತಿರುವುದರಿಂದ ಶ್ರೀರಂಗಪಟ್ಟಣದಲ್ಲಿ ಈಗಾಗಲೇ ಹಸು, ಮೇಕೆ ಮೇಯಿಸುತ್ತಿದ್ದ ರೈತರನ್ನು ಅಗ್ನಿಶಾಮಕದಳ ಸಿಬ್ಬಂದಿ ಎರಡು ಬಾರಿ ರಕ್ಷಿಸಿದ್ದಾರೆ. ಕಡಿಮೆ ನೀರು ಬರುತ್ತಿದ್ದ ಕಾರಣ ರೈತರು ತಮ್ಮ ಜಾನುವಾರುಗಳನ್ನು ನಡುಗಡ್ಡೆಯಲ್ಲಿ ಮೇಯಲು ಬಿಡುತ್ತಿದ್ದರು. ಆದರೆ, ಏಕಾಏಕಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ರೈತರು, ಜಾನುವಾರುಗಳು ಅಪಾಯಕ್ಕೆ ಸಿಲುಕುತ್ತಿರುವ ಪ್ರಕರಣಗಳು ಜರುಗುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ, ನೀರಾವರಿ ಇಲಾಖೆ ಅಗತ್ಯ ಕ್ರಮ ವಹಿಸಬೇಕಿದೆ.
ಗರಿಷ್ಠ ಮಟ್ಟ -124.80 ಅಡಿ
ಇಂದಿನ ಮಟ್ಟ -105.85 ಅಡಿಒಳ ಹರಿವು -4080 ಕ್ಯುಸೆಕ್
ಹೊರ ಹರಿವು -3878 ಕ್ಯುಸೆಕ್ಒಟ್ಟು ಸಂಗ್ರಹ -27.752 ಟಿಎಂಸಿ