ನಾಗಮಂಗಲ: ವಿಜೃಂಭಣೆಯಿಂದ ನಡೆದ ಸಾಮೂಹಿಕ ಗಣೇಶೋತ್ಸವ

KannadaprabhaNewsNetwork |  
Published : Sep 22, 2026, 01:45 AM IST
21ಕೆಎಂಎನ್ ಡಿ17,18,19,20,21,22,23 | Kannada Prabha

ಸಾರಾಂಶ

ಎರಡನೇ ವರ್ಷದ ವೈಭವದ ಸಾಮೂಹಿಕ ಗಣೇಶೋತ್ಸವಕ್ಕೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಸೇರಿದಂತೆ ಸಾಹಸ್ರಾರು ಸಂಖ್ಯೆಯ ಜನರು ಸಾಕ್ಷಿಯಾದರು. ಗಣೇಶೋತ್ಸವಕ್ಕೆ ಪುರಸಭೆ ವ್ಯಾಪ್ತಿಯ ಒಟ್ಟು 13 ಗಣೇಶ ಮೂರ್ತಿಗಳನ್ನು ಅಲಂಕರಿಸಿದ ಟ್ರ್ಯಾಕ್ಟರ್‌ಗಳಲ್ಲಿರಿಸಿ ಟಿ.ಬಿ.ಬಡಾವಣೆ ಬಿ.ಜಿ.ಎಸ್. ವೃತ್ತದ ಗಣಪತಿ ದೇವಸ್ಥಾನದ ಬಳಿಗೆ ತರಲಾಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದಲ್ಲಿ ಸೋಮವಾರ ನಡೆದ ಎರಡನೇ ವರ್ಷದ ವೈಭವದ ಸಾಮೂಹಿಕ ಗಣೇಶೋತ್ಸವಕ್ಕೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಸೇರಿದಂತೆ ಸಾಹಸ್ರಾರು ಸಂಖ್ಯೆಯ ಜನರು ಸಾಕ್ಷಿಯಾದರು.

ಪಟ್ಟಣದ ಸಾಮೂಹಿಕ ಗಣೇಶ ವಿಸರ್ಜನಾ ಸಮಿತಿಯಿಂದ ನಡೆದ ಗಣೇಶೋತ್ಸವಕ್ಕೆ ಪುರಸಭೆ ವ್ಯಾಪ್ತಿಯ ಒಟ್ಟು 13 ಗಣೇಶ ಮೂರ್ತಿಗಳನ್ನು ಅಲಂಕರಿಸಿದ ಟ್ರ್ಯಾಕ್ಟರ್‌ಗಳಲ್ಲಿರಿಸಿ ಟಿ.ಬಿ.ಬಡಾವಣೆ ಬಿ.ಜಿ.ಎಸ್. ವೃತ್ತದ ಗಣಪತಿ ದೇವಸ್ಥಾನದ ಬಳಿಗೆ ತರಲಾಯಿತು.

ಮೈಸೂರು ರಸ್ತೆಯ ಯಾ-ಹಲ್ಲಾ ಮಸೀದಿ ಮುಂಭಾಗದಿಂದ ಹಾದು ಬಂದು ಕೆ.ಮಲ್ಲೇನಹಳ್ಳಿ ಮತ್ತು ಮೈಸೂರು ರಸ್ತೆಯ ಎ.ಕೆ.ಕಾಲೋನಿ ಗಣಪತಿ ಮೂರ್ತಿಗಳನ್ನು ಪೊಲೀಸರು ಬಿಗಿ ಭದ್ರತೆಯೊಂದಿಗೆ ಟಿ.ಬಿ.ಬಡಾವಣೆಗೆ ಕರೆತಂದರು.

ಗಣಪತಿ ದೇವಸ್ಥಾನದಲ್ಲಿ ಹೋಮ ಹವನಾದಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿದ ಬಳಿಕ ಮಾಜಿ ಶಾಸಕ ಸುರೇಶ್‌ಗೌಡ ಸಾಮೂಹಿಕ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಗಣೇಶೋತ್ಸವದಲ್ಲಿ ಉಪ್ಪಾರಹಳ್ಳಿಯ ವಿನಾಯಕ ಸೇವಾ ಸಮಿತಿ 16 ಅಡಿ ಎತ್ತರದ ಗಣಪತಿಮೂರ್ತಿ ಹಾಗೂ ಪಟ್ಟಣದ ಅಂಬೇಡ್ಕರ್ ನಗರದ ಭೀಮಸೇನಾ ಯುವಕರ ಬಳಗದ ಗಣೇಶ ಮೂರ್ತಿ ಗಮನ ಸೆಳೆದವು.

ಟಿ.ಬಿ.ಬಡಾವಣೆ ಬಿಜಿಎಸ್ ವೃತ್ತದಿಂದ ಮಧ್ಯಾಹ್ನ 120.45ಕ್ಕೆ ಆರಂಭಗೊಂಡ ಅದ್ಧೂರಿ ಮೆರವಣಿಗೆ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಸಾಗಿ ಮಧ್ಯಾಹ್ನ 3.30ರ ವೇಳೆಗೆ ಮಂಡ್ಯ ವೃತ್ತ ತಲುಪಿತು. ಮಂಡ್ಯ ವೃತ್ತದಲ್ಲಿ ತಿರುವು ಪಡೆದು ಕೆಎಸ್‌ಟಿ ರಸ್ತೆ ಮೂಲಕ ಸಂಚರಿಸಿ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ಆಸುಪಾಸಿನ ಪ್ರಮುಖ ಬೀದಿಗಳಲ್ಲಿ ಸಂಜೆವರೆಗೆ ವೈಭವದ ಮೆರವಣಿಗೆ ನಡೆಯಿತು. ಈ ವೇಳೆ ಪೂಜಾ ಸಾಮಗ್ರಿಯೊಂದಿಗೆ ನಿಂತಿದ್ದ ಮಹಿಳೆಯರು ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು.

ಪಟ್ಟಣದ ರಸ್ತೆಯ ಎರಡೂ ಬದಿಯಲ್ಲಿ ಮತ್ತು ಕಟ್ಟಡಗಳ ಮೇಲ್ಭಾಗದಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಜನರು ಗಣೇಶ ಮೆರವಣಿಗೆ ಮತ್ತು ಜಾನಪದ ಕಲಾತಂಡಗಳ ಪ್ರದರ್ಶನದ ದೃಶ್ಯವನ್ನು ಕಣ್ತುಂಬಿಕೊಂಡರು.

ಮೆರವಣಿಗೆಯಲ್ಲಿ ವರ್ಣರಂಜಿತ ವಿದ್ಯುತ್ ದೀಪ ಸಹಿತ ಬೃಹತ್ ಡಿಜೆಯಿಂದ ಹೊರಹೊಮ್ಮುತ್ತಿದ್ದ ಹಾಡುಗಳಿಗೆ ವಿವಿಧ ಶಾಲಾ ಕಾಲೇಜುಗಳ ಹೆಣ್ಣುಮಕ್ಕಳು ಸೇರಿ ಸಹಸ್ರಾರು ಮಂದಿ ಹಿಂದೂಪರ ಕಾರ್ಯಕರ್ತರು ದಣಿವರಿಯದೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಭಕ್ತರು, ಜನರಿಗೆ ಸ್ಥಳೀಯ ಆರ್‍ಯವೈಶ್ಯ ಮಂಡಳಿಯಿಂದ ಪ್ರಸಾದದ ರೂಪದಲ್ಲಿ ಮೊಸರನ್ನ ಹಾಗೂ ತರಕಾರಿ ಬಾತ್ , ಪಟ್ಟಣದ ವ್ಯಾಪಾರಸ್ಥರು ಮಜ್ಜಿಗೆ, ನೀರಿನ ಬಾಟಲ್ ಮತ್ತು ಬಾಳೆಹಣ್ಣು ವಿತರಿಸಿದರು.

ಮೆರವಣಿಗೆ ಹೆದ್ದಾರಿಯಲ್ಲಿ ಸಾಗಿಬಂದಾಗ ಮಂಡ್ಯ ವೃತ್ತದಲ್ಲಿ ಹತ್ತಾರು ಬ್ಯಾರಿಕೆಡ್‌ಗಳನ್ನು ಹಾಕಿ ವಿಶೇಷ ಭದ್ರತೆ ಒದಗಿಸುವ ಜೊತೆಗೆ ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದರು. ಎಸ್ಪಿಡಾ.ವಿ.ಜೆ.ಶೋಭಾರಾಣಿ ಅವರು ಅರ್ಧ ಗಂಟೆಗೂ ಹೆಚ್ಚು ಕಾಲ ಮಂಡ್ಯ ವೃತ್ತದಲ್ಲೇ ನಿಂತು ಭದ್ರತೆ ಉಸ್ತುವಾರಿ ನೋಡಿಕೊಂಡರು.

ಮೆರವಣಿಗೆ ಎಲ್ಲಾ ದೃಶ್ಯಾವಳಿ ಮತ್ತು ನೆರೆದಿದ್ದ ಸಹಸ್ರಾರು ಜನರ ಚಟುವಟಿಕೆ, ಚಲನವಲಗಳನ್ನು ಸೆರೆಹಿಡಿಯಲು ಸಾಗುವ ಮಾರ್ಗ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ 120ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಇದರ ಜೊತೆಗೆ ಎರಡು ಡ್ರೋನ್ ಕ್ಯಾಮೆರಾಗಳನ್ನೂ ಕೂಡ ಬಳಸಲಾಗಿತ್ತು.

ಕಳೆದ ಎರಡು ವರ್ಷಗಳ ಹಿಂದೆ ಗಣೇಶೋತ್ಸವ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು ದಳ್ಳುರಿಯಲ್ಲಿ ಬೆಂದು ಹೋಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣಾದ್ಯಂತ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಮಫ್ತಿಯಲ್ಲಿದ್ದ 25ಕ್ಕೂ ಹೆಚ್ಚು ಪೊಲೀಸರು ಮೆರವಣಿಗೆ ಗುಂಪಿನಲ್ಲಿದ್ದು ಸೂಕ್ಷ್ಮತೆಗಳನ್ನು ಗಮನಿಸಿದರು.

ಬಂದೋಬಸ್ತ್‌ಗಾಗಿ ಒಬ್ಬರು ಎಸ್ಪಿ, ಒಬ್ಬರು ಎಎಸ್‌ಪಿ, 4 ಮಂದಿ ಡಿವೈಎಸ್‌ಪಿ, 15ಮಂದಿ ಸಿಪಿಐ, 25ಮಂದಿ ಪಿಎಸ್‌ಐ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸ್ ಹಾಗೂ ಗೃಹರಕ್ಷಕದಳದ ಸಿಬ್ಬಂದಿ ಜೊತೆಗೆ 1 ತಂಡ ಕೇಂದ್ರ ಮೀಸಲು ಪೊಲೀಸ್ ಪಡೆ, 2 ಕೆಎಸ್‌ಆರ್‌ಪಿ ಮತ್ತು 5 ಡಿಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಗಣೇಶೋತ್ಸವದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲ 10 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ಬಗೆಯ ಮದ್ಯದಂಗಡಿಗಳನ್ನು ಮುಚ್ಚಿಸಲಾಗಿತ್ತು. ಮೆರವಣಿಗೆ ವೇಳೆ ಮೈಸೂರು ಮತ್ತು ಬೆಳ್ಳೂರು ಕಡೆಯ ವಾಹನಗಳ ಸಂಚಾರಕ್ಕೆ ಕೆಲಕಾಲ ಅಡ್ಡಿಯುಂಟಾಗಿತ್ತು. ನಂತರ ಸಂದರ್ಭಕ್ಕೆ ತಕ್ಕಂತೆ ಮಾರ್ಗ ಬದಲಾವಣೆ ಮಾಡಿ ಪೊಲೀಸರು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಭದ್ರತೆಯಲ್ಲಿ ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಪ್ರಭಾರ ಎಎಸ್‌ಪಿ ನಂಜುಂಡೇಗೌಡ, ಡಿವೈಎಸ್‌ಪಿ ಬಿ.ಚಲುವರಾಜು, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಸಿಪಿಐ ಹೇಮಂತ್‌ಕುಮಾರ್, ಪಿಎಸ್‌ಐಗಳಾದ ವೈ.ಎನ್.ರವಿಕುಮಾರ್, ಬಿ.ರಾಜೇಂದ್ರ, ನರೇಶ್‌ಕುಮಾರ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಇದ್ದರು. ಹಂಪೆ ಅರಸನ ಕೊಳದಲ್ಲಿ ಸಾಮೂಹಿಕ ಗಣೇಶಮೂರ್ತಿಗಳ ವಿಸರ್ಜನೆ

ಪಟ್ಟಣದ ಐತಿಹಾಸಿಕ ಹಂಪೆ ಅರಸನ ಕೊಳದಲ್ಲಿ ಸೋಮವಾರ ಸಂಜೆ ಗಣೇಶ ಮೂರ್ತಿಗಳ ವಿಸರ್ಜನೆಯೊಂದಿಗೆ ಸಾಮೂಹಿಕ ಗಣೇಶೋತ್ಸವ ಸಂಪನ್ನವಾಯಿತು.

13 ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಹಂಪೆ ಅರಸನ ಕೊಳವನ್ನು ವಿದ್ಯುತ್ ದೀಪಾಲಂಕಾರಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಕ್ರೇನ್ ಯಂತ್ರದ ಮೂಲಕ ಗಣಪತಿ ಮೂರ್ತಿಗಳ ವಿಸರ್ಜನೆಯಾಗುತ್ತಿದ್ದಂತೆ ಬಣ್ಣ ಬಣ್ಣದ ಪಟಾಕಿಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ದೃಶ್ಯ ಮನಮೋಹಕವಾಗಿತ್ತು.

ಅಗ್ನಿಶಾಮಕ ದಳದ ಸಿಬ್ಬಂದಿ ಕ್ರೇನ್ ಯಂತ್ರದ ಮೂಲಕ ಸರತಿಯಲ್ಲಿ ಬಂದ ಗಣೇಶ ಮೂರ್ತಿಗಳನ್ನು ಕೊಳದಲ್ಲಿ ವಿಸರ್ಜಿಸಿದರು. ಕಿಕ್ಕಿರಿದು ಸೇರಿದ್ದ ಜನರು ಸಾಮೂಹಿಕ ಗಣೇಶ ವಿಸರ್ಜನೆ ದೃಶ್ಯವನ್ನು ಕಣ್ತುಂಬಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಬಸ್ ಗ್ಯಾರಂಟಿ ಇಲ್ಲ.. ಖಾಸಗಿ ಬಸ್‌ಗೆ ಕಾಸಿಲ್ಲ!
ಇಂದು ಗಣೇಶ ವಿಸರ್ಜನೆ: ಬಿಗಿ ಬಂದೋಬಸ್ತ್‌