;Resize=(412,232))
ಶ್ರೀಶೈಲ ಮಠದ
ಬೆಳಗಾವಿ : ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬ ಕವಿವಾಣಿಯಂತೆಯೇ ಗಡಿನಾಡು ಬೆಳಗಾವಿಯಲ್ಲಿ ಅಪ್ಪಟ್ಟ ಮರಾಠಿ ಕುಟುಂಬದ ಯುವಕನೊಬ್ಬ ಕನ್ನಡ ನಾಡು, ನುಡಿಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ವೀರಕನ್ನಡಿಗನಾಗಿ ಹೊರಹೊಮ್ಮಿದ್ದಾನೆ.
ಬೆಳಗಾವಿ ನಗರದ ಕಾಳಿ ಅಂಬ್ರಾಯಿ ಪ್ರದೇಶದ ಗಣೇಶ ಪ್ರಭಾಕರ ರೋಕಡೆ ಅವರು ಕನ್ನಡದ ವೀರ ಸೇನಾನಿ. ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರ ತೀವ್ರ ವಿರೋಧದ ನಡುವೆಯೂ ಎರಡೂವರೆ ದಶಕಗಳಿಂದ ಗಡಿನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡುತ್ತಿರುವ ಅಪ್ರತಿಮ ಕನ್ನಡಿಗ. ಹಿಂದೆ ಬೆಳಗಾವಿಯಲ್ಲಿ ಮರಾಠಿಗರ ಪ್ರಾಬಲ್ಯವಾಗಿದ್ದ ಕಾಲದಲ್ಲೇ ಕನ್ನಡಿಗರ ಪರವಾಗಿ ನಿಂತು ಕನ್ನಡ ಕೈಂಕರ್ಯದಲ್ಲಿ ತೊಡಗಿದ್ದಾರೆ.
ಗಣೇಶ ಅವರದ್ದು ಅಪ್ಪಟ ಮರಾಠಿ ಕುಟುಂಬ. ಮಾತೃಭಾಷೆ ಮರಾಠಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದಿದ್ದು ಮರಾಠಿ ಮಾಧ್ಯಮದಲ್ಲಿಯೇ. ಆದರೆ, ಕನ್ನಡದ ಮೇಲೆ ಇವರಿಗೆ ಎಲ್ಲಿಲ್ಲದ ಪ್ರೀತಿ, ನಿಷ್ಠೆ. ಮರಾಠಿ ಭಾಷಿಕರಾಗಿದ್ದರೂ ಕನ್ನಡ ಭಾಷೆಯನ್ನು ಉಸಿರಾಗಿಸಿಕೊಂಡಿದ್ದಾರೆ. ಕನ್ನಡವನ್ನು ಒಪ್ಪಿಕೊಂಡು, ಕನ್ನಡ ನೆಲ, ಜಲ, ನಾಡು, ನುಡಿ ಹೋರಾಟದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಕನ್ನಡ ಹೋರಾಟದಲ್ಲಿ ಅನೇಕ ಬಾರಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಮರಾಠಿಗರ ಬೆದರಿಕೆಗೂ ಜಗ್ಗದೇ ಬಗ್ಗದೆ ಗಡಿಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸುವ ಕೈಂಕರ್ಯ ಮಾತ್ರ ಕಡಿಮೆಯಾಗಿಲ್ಲ. ಬಿಕಾಂ ಪದವಿ ಪಡೆದಿರುವ ಗಣೇಶ ಪಿಯು ಮತ್ತು ಪದವಿ ಶಿಕ್ಷಣ ಇಂಗ್ಲಿಷ್ ಮಾಧ್ಯಮದಲ್ಲಿ ಪಡೆದರೂ, ಕನ್ನಡ ಸ್ಪಷ್ಟವಾಗಿ ಓದುವುದನ್ನು ಮತ್ತು ಬರೆಯುವುದನ್ನು ಕಲಿತಿದ್ದಾರೆ. ತಮ್ಮ ಮಕ್ಕಳಿಗೂ ಕನ್ನಡ ಕಲಿಸುತ್ತಿದ್ದಾರೆ.
2010ರಲ್ಲಿ ಗಣೇಶ ಅವರ ಮನೆಗೆ ಬೆಂಕಿ ಹಚ್ಚಲು 150 ಜನ ಎಂಇಎಸ್‌ನ ಕಿಡಿಗೇಡಿಗಳ ಗುಂಪೊಂದು ಬಂದಿತ್ತು. ‘ನೀನು ಯಾಕೆ ಕನ್ನಡ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಯಾ..? ನಿಮ್ಮ ಮನೆಯಲ್ಲಿ ಕನ್ನಡಿಗರನ್ನು ಸೇರಿಸಿ ಸಭೆ ಯಾಕೆ ಮಾಡುತ್ತಿಯಾ..?’ ಆಗ ಧೈರ್ಯ ಕಳೆದುಕೊಳ್ಳದ ಗಣೇಶ, ‘ನೀವು ನಾಡ ವಿರೋಧಿ ಚಟುವಟಿಕೆ ಮಾಡಬೇಡಿ. ಕನ್ನಡ ನೆಲವನ್ನು ಒಪ್ಪಿಕೊಳ್ಳಿ’ ಎಂದು ಪ್ರತ್ಯುತ್ತರ ನೀಡುತ್ತಾರೆ. ಇದರಿಂದಾಗಿ ಕೆರಳಿದ ಎಂಇಎಸ್ ಮುಖಂಡರು ಅವರ ಮನೆಯನ್ನು ಸುಡುವುದಾಗಿ ಬೆದರಿಕೆ ಹಾಕಿದರು. ಹಲವಾರು ಬಾರಿ ಜೀವ ಬೆದರಿಕೆ ಕರೆಗಳನ್ನು ಎದುರಿಸಿದ್ದಾರೆ. ಕನ್ನಡ ಹೋರಾಟದಲ್ಲಿ ಪಾಲ್ಗೊಂಡಿದ್ದ ವೇಳೆ ಹಲವಾರು ಬಾರಿ ಪೊಲೀಸರು ಬಂಧಿಸಿ, ಕಾರಾಗೃಹಕ್ಕೆ ಕಳಿಸಿದ್ದರು. ಯಾವುದಕ್ಕೂ ಜಗ್ಗದೇ ಬಗ್ಗದೇ ಕನ್ನಡಾಂಬೆ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಅಪ್ಪಟ ಮರಾಠಿಗನಾಗಿದ್ದರೂ ಬಾಲ್ಯದಿಂದಲೂ ಕನ್ನಡ ಭಾಷೆ ಮೇಲೆ ಎಲ್ಲಿಲ್ಲದ ಪ್ರೀತಿ ಹೊಂದಿದ್ದರು. ವೈದ್ಯರಾಗಿದ್ದ ಅವರ ತಂದೆಗೆ ಕನ್ನಡದ ಮೇಲೆ ಅಪಾರವಾದ ಅಭಿಮಾನವಿತ್ತು. ಅದೇ ಅವರಿಗೂ ಬಳುವಳಿಯಾಗಿ ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡ ಹೋರಾಟದಲ್ಲಿ ಸದಾ ಮುಂದಾಗಿರುವ ಗಣೇಶ ಅವರು ತಮ್ಮ ಸಂಬಂಧಿಕರು, ಇತರರಲ್ಲಿಯೂ ಕನ್ನಡ ಭಾಷೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತ ಬಂದಿದ್ದಾರೆ.
ನಾವು ಯಾವ ರಾಜ್ಯದಲ್ಲಿ ವಾಸಿಸುತ್ತೇವೋ, ಆ ರಾಜ್ಯ ಮತ್ತು ಅದರ ಭಾಷೆಯ ಮೇಲೆ ಅಗಾಧ ಪ್ರೀತಿ, ಅಭಿಮಾನ ಇರಬೇಕು. ದೇಶಾಭಿಮಾನದಂತೆ ರಾಜ್ಯದ ಮೇಲೂ ಪ್ರತಿಯೊಬ್ಬರಲ್ಲೂ ಅಭಿಮಾನ ಇರಲೇಬೇಕು. ಏಕೆಂದರೆ ಆ ರಾಜ್ಯದಲ್ಲಿ ಇರುತ್ತೇವೆ, ಅಲ್ಲಿನ ನೀರು ಕುಡಿಯುತ್ತೇವೆ, ಗಾಳಿ ಸೇವಿಸುತ್ತೇವೆ, ಇಲ್ಲಿ ಬೆಳೆದ ಆಹಾರ ಊಟ ಮಾಡುತ್ತೇವೆ. ಹಾಗಾಗಿ, ನಾವಿರುವ ನಾಡಿಗೆ ಋಣಿ ಆಗಿರುವುದು ನಮ್ಮೆಲ್ಲರ ಕರ್ತವ್ಯ.
-ಗಣೇಶ ರೋಕಡೆ, ಕನ್ನಡ ಹೋರಾಟಗಾರ.