ಧಾರ್ಮಿಕ ಕಾರ್ಯಕ್ರಮ । ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ । 3 ದಿನಗಳ ರಂಗನಾಥನ ಜಾತ್ರೆ
ಶುದ್ಧ ನೀರು ಹಾಕುವುದರಿಂದ ಕೊಳೆನೀರು ಹೇಗೆ ಹೊರಬರುತ್ತದೋ ಹಾಗೆಯೇ ಸತತವಾಗಿ ಧ್ಯಾನ ಮಾಡುವುದರಿಂದ ಶುದ್ಧ ಮನಸ್ಸು ನಮ್ಮದಾಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಕೊಣನೂರು ಹೋಬಳಿ ಚಿಕ್ಕಬೊಮ್ಮನಹಳ್ಳಿಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ 3 ದಿನ ಆಯೋಜಿಸಿದ್ದ ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಿದ್ಯೆಯನ್ನು ಕಲಿತು ನಮಗೆ ಪರಮಾತ್ಮ ಕಾಣದಿದ್ದರೆ ಬಹುದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಜಗತ್ತನ್ನು ಸಂಸಾರ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಯಾರಿಗೆ ಚಿಕ್ಕ ಸಂಸಾರದಲ್ಲಿ ಬದುಕುವ ಕಲೆ ಗೊತ್ತಿರುತ್ತದೋ ಅವರು ದೊಡ್ಡ ಸಂಸಾರ ನಡೆಸಬಲ್ಲರು. ನಾವು ತಿನ್ನುವ ಆಹಾರದ ಕಡೆ ಗಮನ ಇಲ್ಲದಿದ್ದರೆ ಅದು ಭೋಗದ ಬದುಕಾಗುತ್ತದೆಯೇ ಹೊರತು ಯೋಗದ ಬದುಕಾಗುವುದಿಲ್ಲ’ ಎಂದು ಸಲಹೆ ನೀಡಿದರು.ಇದಕ್ಕೂ ಮುನ್ನ ಶುಕ್ರವಾರ ಬೆಳಗಿನಿಂದ ಸಂಜೆಯವರೆಗೂ ರಥೋತ್ಸವ ನಿಮಿತ್ತ ವಿವಿಧ ಪೂಜಾ, ದೇವರು ಮೂರ್ತಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ, ಹೋಮ, ಹವನ, ಅಭಿಷೇಕಾಧಿಗಳನ್ನು ನೆರವೇರಿಸಿ ಸಂಜೆ 4.30 ರಿಂದ 5.30 ರೊಳಗೆ ಮಹಾರಥೋತ್ಸವ ನೆರವೇರಿಸಲಾಯಿತು.
ರಂಗನಾಥ ಸ್ವಾಮಿ ಮಹಾ ರಥೋತ್ಸವ:
ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಗುರುವಾರ ಸಂಜೆಯಿಂದಲೇ ಧರ್ಮಧ್ವಜಾರೋಹಣ ಮೊದಲಾದ ಪೂಜಾ ವಿಧಿ ವಿಧಾನಗಳು ನೆರವೇರಿದವು. ರಥೋತ್ಸವದ ಪ್ರಯುಕ್ತ ಶುಕ್ರವಾರ ಬೆಳಗಿನಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಕರ್ಯಗಳು ನೆರವೇರಿದವು. ಸಂಜೆ ವಿವಿಧ ಬಗೆಯ ಪುಷ್ಪಗಳಿಂದ ಹಾಗೂ ಬಗೆಬಗೆಯ ಬಣ್ಣದ ವಸ್ತ್ರಗಳಿಂದ ಅಲಂಕರಿಸಿದ್ದ ರಥದಲ್ಲಿ ಶ್ರೀ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ರಥಾರೋಹಣ ನಡೆಸಲಾಯಿತು.
ಬಳಿಕ ಭಕ್ತರು ಹರ್ಷೋದ್ಘಾರದಿಂದ ರಥವನ್ನು ಎಳೆದು ಹಣ್ಣು ಧವನ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಬ್ಯಾಂಡ್ ಸೆಟ್ ಹಾಗೂ ಮಂಗಳವಾದ್ಯವು ಉತ್ಸವಕ್ಕೆ ಮೆರಗು ನೀಡಿತು. ಜಿಲ್ಲೆಯ ವಿವಿಧ ಭಾಗಗಳ ಆಸ್ತಿಕ ಸದ್ಭಕ್ತರು ಹಾಗೂ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಂದ ಆಗಮಿಸಿದ್ದ ಗ್ರಾಮಸ್ಥರು ಸರದಿ ಸಾಲಿನಲ್ಲಿ ನಿಂತು ಶ್ರೀ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಜಾತ್ರೆ ಹಾಗೂ ರಥೋತ್ಸವದ ಅಂಗವಾಗಿ ಜಾತ್ರಾ ಆವರಣ, ರಂಗನಾಥಸ್ವಾಮಿ, ಚಾಮುಂಡೇಶ್ವರಿ ದೇವಾಲಯಗಳು ಮತ್ತು ರಸ್ತೆಯ ಇಕ್ಕೆಲಗಳೂ ವಿವಿಧ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕೃವಾಗಿದ್ದು ಜಗಮಗಿಸಿದವು.
ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.