ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಸಿಎಂ ಮಾಡಲು ನಿರಂತರ ಪಕ್ಷ ಸಂಘಟನೆ: ನಿಖಿಲ್

KannadaprabhaNewsNetwork | Published : Jul 1, 2025 12:47 AM

ಜಿಲ್ಲೆಯ ಜನರು ಜೆಡಿಎಸ್ ಪಕ್ಷದ ಮೇಲೆ ಅಪಾರ ಪ್ರೀತಿ ವಿಶ್ವಾಸ ಹೊಂದಿದ್ದಾರೆ. ಅಲ್ಲದೇ, ನಮ್ಮ ಕುಟುಂಬದವರನ್ನು ಕೈಬಿಟ್ಟಿಲ್ಲ. ಕುಮಾರಣ್ಣ ಕೇಂದ್ರದಲ್ಲಿ ಮಂತ್ರಿಯಾಗಲು ಮಂಡ್ಯ ಜಿಲ್ಲೆಯ ಜನತೆ ಕಾರಣ. ಆದ್ದರಿಂದ ಕುಮಾರಣ್ಣ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ಮೂಲಕ ಜಿಲ್ಲೆಯ ಋಣ ತೀರಿಸಬೇಕು ಎಂಬುದನ್ನು ಆಗ್ಗಾಗೆ ಹೇಳುತ್ತಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಜ್ಯದಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಅಲ್ಲಿಯವರೆಗೆ ಜೆಡಿಎಸ್ ಕಾರ್ಯಕರ್ತರು ನಿರಂತರವಾಗಿ ಪಕ್ಷ ಸಂಘಟನೆ ಮಾಡಬೇಕು ಎಂದು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆಕೊಟ್ಟರು.

ಪಟ್ಟಣದಲ್ಲಿ ಸೋಮವಾರ ನಡೆದ ಜೆಡಿಎಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ,

ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತಮ ಆಡಳಿತ ನೀಡಿದ್ದಾರೆ. ಅತ್ಯಂತ ಪ್ರಾಮಾಣಿಕವಾಗಿ ಜನಸೇವೆ ಮಾಡಿ ಜನಪರ ಕಾರ್ಯಕ್ರಮ ಕೊಟ್ಟಿದ್ದಾರೆ ಎಂದರು.

ಎಚ್ಡಿಕೆ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ನೋಡಬೇಕು ಎಂಬುದು ರಾಜ್ಯದ ಜನರ ಆಶಯವಾಗಿದೆ. ನಾನು ಪ್ರವಾಸಕೈಗೊಂಡ ಕ್ಷೇತ್ರಗಳಲ್ಲಿ ಜನಸಾಮಾನ್ಯರ ಬಯಕೆಯೂ ಕೂಡ ಇದೇ ಆಗಿದೆ. ಆದ್ದರಿಂದ 2028ಕ್ಕೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕು ಎಂದರು.

ಜಿಲ್ಲೆಯ ಜನರು ಜೆಡಿಎಸ್ ಪಕ್ಷದ ಮೇಲೆ ಅಪಾರ ಪ್ರೀತಿ ವಿಶ್ವಾಸ ಹೊಂದಿದ್ದಾರೆ. ಅಲ್ಲದೇ, ನಮ್ಮ ಕುಟುಂಬದವರನ್ನು ಕೈಬಿಟ್ಟಿಲ್ಲ. ಕುಮಾರಣ್ಣ ಕೇಂದ್ರದಲ್ಲಿ ಮಂತ್ರಿಯಾಗಲು ಮಂಡ್ಯ ಜಿಲ್ಲೆಯ ಜನತೆ ಕಾರಣ. ಆದ್ದರಿಂದ ಕುಮಾರಣ್ಣ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ಮೂಲಕ ಜಿಲ್ಲೆಯ ಋಣ ತೀರಿಸಬೇಕು ಎಂಬುದನ್ನು ಆಗ್ಗಾಗೆ ಹೇಳುತ್ತಾರೆ ಎಂದರು.

2019ರ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ನಿಮ್ಮ ಹಿರಿತನಕ್ಕೆ ಗೌರವವಿದೆ. ಆದರೆ, ರಾಜಕಾರಣದಲ್ಲಿ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದೀರಿ ಎಂದರೆ ಅದಕ್ಕೆ ಯಾರು ಕಾರಣ ಎಂಬುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಗುಡುಗಿದರು.ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ರಾಜ್ಯಾದ್ಯಾಂತ ಜೆಡಿಎಸ್ ಪಕ್ಷದ ನೋಂದಣಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಗೊಂಡ ನಂತರ ಇಡೀ ರಾಜ್ಯದಲ್ಲಿಯೇ ನಾಗಮಂಗಲ ತಾಲೂಕಿನಿಂದ ಅತಿ ಹೆಚ್ಚು ಸದಸ್ಯತ್ವ ನೋಂದಣಿಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಈ ಸಂಖ್ಯೆ 50 ಸಾವಿರ ಗಡಿ ದಾಟಬೇಕು ಎಂದರು.

2028ರ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷ 650 ರಿಂದ 60 ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೆ ರಾಜ್ಯದಲ್ಲಿ ಮುಖ್ಯಮಂತ್ರಿ ಮಾಡಬೇಕಿದೆ. ಆದ್ದರಿಂದ ನಾವೆಲ್ಲಾ ಒಟ್ಟಾಗಿ ಈಗಿನಿಂದಲ್ಲೇ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಈ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಾನೇ ಮಾಡಿದ್ದು ಎಂದು ಹೇಳುವ ಮೂಲಕ ಜನಸಾಮಾನ್ಯರಿಗೆ ತಪ್ಪು ಮಾಹಿತಿ ರವಾನೆ ಮಾಡುತ್ತಿದ್ದಾರೆ ಎಂದು ದೂರಿದರು.

ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಮತ್ತು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಗಣ್ಯರನ್ನು ತಾಲೂಕಿನ ದೇವಲಾಪುರ ಹ್ಯಾಂಡ್ ಪೋಸ್ಟ್‌ನಿಂದ ಬೈಕ್ ಹಾಗೂ ಕಾರುಗಳ ರ್‍ಯಾಲಿ ಮೂಲಕ ಜೆಡಿಎಸ್ ಪಕ್ಷದ ಬಾವುಟ ಹಿಡಿದು ಪಟ್ಟಣಕ್ಕೆ ಕರೆತರಲಾಯಿತು.

ಸಮಾರಂಭದ ವೇದಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಸುರೇಶ್‌ಗೌಡ ಅವರಿಗೆ ಪಕ್ಷದ ಕಾರ್ಯಕರ್ತರು ಬೃಹತ್ ಹಾರ ಹಾಕಿ ಜಯಘೋಷ ಮೊಳಗಿಸಿ ಅದ್ದೂರಿ ಸ್ವಾಗತ ಕೋರಿದರು. ಕಾರ್ಯಕ್ರಮದ ಹಿನ್ನಲೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜೆಡಿಎಸ್ ಪಕ್ಷದ ಬೃಹತ್ ಬಾವುಟ ಮತ್ತು ಸ್ವಾಗತ ಕೋರುವ ಬ್ಯಾನರ್‌ಗಳು ರಾರಾಜಿಸಿದವು.

ಸಮಾರಂಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ನೆಲ್ಲಿಗೆರೆ ಬಾಲು, ಜಿಪಂ ಮಾಜಿ ಸದಸ್ಯರಾದ ಎನ್.ಎಂ.ರಾಮಸ್ವಾಮಿಗೌಡ, ಶಿವಪ್ರಕಾಶ್, ಮುತ್ತಣ್ಣ, ಮುಖಂಡರಾದ ಜವರನಹಳ್ಳಿ ಗೌರೀಶ್, ತೆಂಗಿನಭಾಗದ ನಾಗರಾಜು, ನಾಗೇಶ್, ಶಂಕರಲಿಂಗೇಗೌಡ(ಯೋಗೇಶ್), ನಿತೀಶ್ ಕುಮಾರ್, ಎಸ್.ಎಂ.ಯುದುರಾಜ್, ಎನ್.ಎಂ. ರಾಜೇಶ್ ಕುರುಬಾಸ್ ಸೇರಿದಂತೆ ಹಲವರು ಇದ್ದರು.