ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ಹೌದು. ಇದು ಶತಮಾನ ಪೂರೈಸಿದ ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಕಥೆಯಾಗಿದೆ.
ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಹದಿನೈದು ದಿನಗಳ ಕಾಲ ನಿರಂತರವಾಗಿ ಸುರಿದ ಮಳೆಗೆ ಶತಮಾನೋತ್ಸವ ಶಾಲೆಯ ಎಂಟು ಹಳೆಯ ತರಗತಿ ಕೊಠಡಿ ಶಿಥಿಲಾವಸ್ಥೆ ತಲುಪುವ ಮೂಲಕ ಕುಸಿಯುವ ಹಂತಕ್ಕೆ ಬಂದಿದ್ದು ಶಿಕ್ಷಣ ಇಲಾಖೆಯು ಶಾಶ್ವತ ಪರಿಹಾರ ಕಲ್ಪಿಸುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.ಏನಿದು ಸಮಸ್ಯೆ: ಶಾಲೆಯ ಹಿಂದಿನ ಕಾಂಪೌಂಡಗೆ ಹೊಂದಿಕೊಂಡು ರೈತರೊಬ್ಬರ ತೋಟ, ರಾಜಕಾಲುವೆಯಿದ್ದು, ಮಳೆ ಬಂದ ಸಂದರ್ಭದಲ್ಲಿ ತೋಟ ಹಾಗೂ ಶಾಲಾ ಪಕ್ಕದಲ್ಲಿರುವ ರಾಜಕಾಲುವೆಯ ನೀರು ಕಾಂಪೌಂಡ ಮೂಲಕ ಆವರಣಕ್ಕೆ ಹರಿದು ಬಂದು ಶಾಲಾವರಣದಲ್ಲಿ ಮೊಣಕಾಲುವರೆಗೆ ನಿಂತುಕೊಂಡು ತರಗತಿ ಕೊಠಡಿಗಳ ಒಳಗೆ ಸೇರಿಕೊಂಡ ಪರಿಣಾಮ ಈ ಸಮಸ್ಯೆ ಸೃಷ್ಟಿಯಾಗಿದ್ದು, ಸ್ಥಳೀಯ ಆಡಳಿತ ಹಾಗೂ ಶಿಕ್ಷಣ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಿ ಮಕ್ಕಳಿಗೆ ಶಿಕ್ಷಣ ಕಲಿಸಲು ಕೊಠಡಿಗಳ ವ್ಯವಸ್ಥೆ ಮಾಡಿಕೊಡಬೇಕಿದೆ.
ಹದಗೆಟ್ಟ ಆವರಣ: ನಿರಂತರವಾಗಿ ನೀರು ಹರಿದ ಪರಿಣಾಮ ಇಡಿ ಶಾಲಾ ಆವರಣ ಹದಗೆಟ್ಟು ಹೋಗಿದ್ದು, ಶಾಲಾ ಪ್ರಭಾರಿ ಮುಖ್ಯಶಿಕ್ಷಕ ಗ್ರಾಪಂನವರ ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ ಗ್ರಾಪಂನವರು ಜೆಸಿಬಿ ಮೂಲಕ ನೀರು ಹೊರಗೆ ಕಳುಹಿಸುವ ಮೂಲಕ ತಾತ್ಕಾಲಿಕ ಪರಿಹಾರ ಕಲ್ಪಿಸಿದ್ದಾರೆ.
ದೋಟಿಹಾಳ ಶಾಲೆಯಲ್ಲಿನ ಎಂಟು ಕೊಠಡಿಗಳು ಶಿಥಿಲಗೊಂಡಿರುವ ಕುರಿತು ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಅದರ ಗುಣಮಟ್ಟದ ಕುರಿತು ವರದಿ ಸಲ್ಲಿಸಲು ಪಿಡಬ್ಲ್ಯೂಡಿ ಇಲಾಖೆಯವರಿಗೂ ತಿಳಿಸಲಾಗಿದೆ. ಸದ್ಯ ಉತ್ತಮವಾಗಿರುವ ಕೊಠಡಿಗಳಲ್ಲಿಯೆ ಶಿಫ್ಟ್ ವೈಸ್ ತರಗತಿ ನಡೆಸುವಂತೆ ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ. ಹೊಸ ಕೊಠಡಿಗಳ ನಿರ್ಮಾಣ ಕುರಿತು ಶಾಸಕರ ಗಮನಕ್ಕೂ ತರಲಾಗಿದೆ ಎಂದು ಕುಷ್ಟಗಿ ಬಿಇಒ ಉಮಾದೇವಿ ಬಸಾಪೂರು ತಿಳಿಸಿದ್ದಾರೆ.
ನಮ್ಮೂರ ಶಾಲೆಯಲ್ಲಿ 625 ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದು, ಇತ್ತೀಚಿಗೆ ಸುರಿದ ಮಳೆಯಿಂದ ತರಗತಿ ಕೊಠಡಿಗಳು ಶಿಥಿಲಗೊಂಡಿವೆ ಮಕ್ಕಳ ಕಲಿಕೆಗಾಗಿ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳಬೇಕಿದೆ ಹಾಗೂ ಶಾಲೆಯಲ್ಲಿ ಸಮರ್ಪಕ ಸೌಲಭ್ಯ ಒದಗಿಸಬೇಕು ಎಂದು ದೋಟಿಹಾಳ ಶಿಕ್ಷಣಪ್ರೇಮಿ ಗ್ಯಾನಪ್ಪ ಮನ್ನಾಪೂರು ತಿಳಿಸಿದ್ದಾರೆ.