ಭಾಷೆ ವಿಚಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಹೋರಾಟ: ಟಿ ಎ ನಾರಾಯಣಗೌಡ

KannadaprabhaNewsNetwork |  
Published : Dec 03, 2024, 12:33 AM IST
ಸನ್ಮಾನ ಸಂದರ್ಭ | Kannada Prabha

ಸಾರಾಂಶ

ಭಾಷೆ ವಿಚಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಿದೆ ಎಂದು ಟಿ ಎ ನಾರಾಯಣ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ನಾಡು, ನುಡಿ, ಜಲ, ಭಾಷೆ ವಿಚಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಎರಡು ದಶಕಗಳಿಂದ ನಿರಂತರ ಹೋರಾಟ ನಡೆಸುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ತಿಳಿಸಿದ್ದಾರೆ.

ಅವರು ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಆಶ್ರಯದಲ್ಲಿ ಕುಶಾಲನಗರ ಕಲಾಭವನದಲ್ಲಿ ನಡೆದ ರಾಜ್ಯೋತ್ಸವ ಹಾಗೂ ಕೊಡಗು ಜಿಲ್ಲಾ ಮಟ್ಟದ ನೃತ್ಯೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕನ್ನಡಿಗರ ಪ್ರಗತಿಗಾಗಿ ನಾಡಿನ ಉದ್ದಗಲಕ್ಕೂ ಹೋರಾಟ ನಡೆಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಗಡಿಭಾಗದ ಸ್ಥಿತಿಗತಿ ಬಗ್ಗೆ ಕಟ್ಟೆಚ್ಚರವಹಿಸಿ ಹೋರಾಟ ನಡೆಸಲಾಗುತ್ತಿದೆ. ಸಮೃದ್ಧ, ಅಖಂಡ ಕರ್ನಾಟಕಕ್ಕೆ ಪ್ರತಿಯೊಬ್ಬರು ಪಣತೊಡಬೇಕಾಗಿದೆ ಎಂದು ಹೇಳಿದರು.

ರಾಜಧಾನಿ ಬೆಂಗಳೂರಿನಲ್ಲಿ ಕನ್ನಡದ ರಕ್ಷಣೆ ಮಾಡುವ ಸಂಬಂಧ ಹಲವಾರು ರೀತಿಯ ಹೋರಾಟಗಳು ನಡೆದಿವೆ ಎಂದು ಹೇಳಿದ ಗೌಡರು ಭಾಷೆಯ ಸಂರಕ್ಷಣೆಗಾಗಿ ಹೋರಾಡಿ ಹಲವಾರು ಬಾರಿ ಜೈಲು ಪಾಲಾದ ಬಗ್ಗೆ ಮಾಹಿತಿ ನೀಡಿದರು. ರಾಜ್ಯದಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳು ಅಥವಾ ಜನಪ್ರತಿನಿಧಿಗಳು ಭಾಷೆಯ ರಕ್ಷಣೆ ಸಂಬಂಧ ಇದುವರೆಗೂ ಜೈಲು ಸೇರಿಲ್ಲ ಎಂದ ಅವರು ಸರ್ಕಾರದ ಹಾಗೂ ಸಾರ್ವಜನಿಕ ಹಣ ಲೂಟಿ ಮಾಡಿ ಜೈಲು ಪಾಲಾಗುತ್ತಿರುವ ಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ಹೇರಳವಾಗಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ರಾಜ್ಯ ಸರ್ಕಾರ ಅಭಿವೃದ್ಧಿಯ ಚಿಂತನೆಯಲ್ಲಿ ಹಿಂದುಳಿಯಬಾರದು ಯಾವುದೇ ಜಿಲ್ಲೆಯಲ್ಲಿ ಒಡಕಿನ ಧ್ವನಿ ಮಾರ್ಧನಿಸಬಾರದು. ಭಾಷೆ ಆಧಾರದಲ್ಲಿ ಭಾರತ ನಿರ್ಮಾಣವಾಗಿದ್ದು ಆದರೆ ದೇಶದಲ್ಲಿ ಬಲವಂತವಾಗಿ ಹಿಂದಿ ಹೇರಿಕೆ ಮಾಡುವುದು ಸಲ್ಲದು ಎಂದರು.

ಹಿಂದಿ ಭಾಷೆ ರಾಷ್ಟ್ರಭಾಷೆ ಅಲ್ಲ ಎಂದ ನಾರಾಯಣಗೌಡ ರಾಷ್ಟ್ರದ 22 ಭಾಷೆಗಳ ನಡುವೆ ಹಿಂದಿ ಭಾಷೆ ಒಂದಾಗಿದೆ ಎಂದು ಹೇಳಿದರು.

ರಾಜ್ಯದ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವಲ್ಲಿ ಕಳೆದ ಎರಡು ದಶಕಗಳಿಂದ ಹೋರಾಟ ನಡೆಸಿ ಯಶಸ್ವಿಯಾಗಿರುವುದಾಗಿ ಅವರು ಹೇಳಿದರು.

ಭಾಷೆಯ ಹೆಸರಿನಲ್ಲಿ ಸಂಘಟನೆ ಕಟ್ಟುವುದು ಕ್ಲಿಷ್ಟಕರ ವಿಷಯವಾಗಿದ್ದು, ಕನ್ನಡಿಗರ ಪ್ರಗತಿಗಾಗಿ ನಾಡಿನ ಉದ್ದಗಲಕ್ಕೂ ನಿರಂತರ ಹೋರಾಟ ನಡೆಸಲಾಗುವುದು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಕೊಡ್ಲಿಪೇಟೆ ಕಿರಿ ಕೊಡ್ಲಿ, ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಭಾಷೆ ಅಥವಾ ನಾಡಿನ ಬಗ್ಗೆ ನಿರಭಿಮಾನ, ಉದಾಸೀನತೆ ಸಲ್ಲದು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವೇದಿಕೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ, ಶ್ವೇತ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ಜೆಎಸಿ ಚೇರ್ಮನ್ ಎಂ ಡಿ ರಂಗಸ್ವಾಮಿ ಅವರು ಮಾತನಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲಾಧ್ಯಕ್ಷ ಕೆ ಎನ್ ದೀಪಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗು ಜಿಲ್ಲೆಯ ಸಂಘಟನೆ ಮತ್ತು ಸಮಸ್ಯೆಗಳ ಬಗ್ಗೆ ಮಾತನಾಡಿದರು. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಸಂಘಟನೆ ಮೂಲಕ ಒತ್ತಡ ತರುವಂತೆ ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಸಹಾಯಕ ಆರಕ್ಷಕ ಉಪ ನಿರೀಕ್ಷಕಿ ಕುಮಾರಿ ದೀಪಕ್, ವೈದ್ಯಾಧಿಕಾರಿ ಡಾ ಮಧುಸೂದನ್, ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್, ಪತ್ರಕರ್ತೆ ವನಿತಾ ಚಂದ್ರಮೋಹನ್, ನಿವೃತ್ತ ಚಾಲಕರಾದ ಧನ ರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಪುಟ್ಟೇಗೌಡ ವೀರಭದ್ರಪ್ಪ, ಸಂಗೀತ ಚಂದನ್ ಕುಮಾರ್, ಗಾಯತ್ರಿ ವಿಜಯೇಂದ್ರ, ರಾಜ್ಯ ಮಹಿಳಾ ಸಂಚಾಲಕಿ ದೀಪಾ ಪೂಜಾರಿ, ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಬಿಎ ನಾಗೇಗೌಡ, ಸಾಹಿತಿ ಫ್ಯಾನ್ಸಿ ಮುತ್ತಣ್ಣ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ರೋಹಿತ್, ವೇದಿಕೆಯ ಜಿಲ್ಲಾ ಮಹಿಳಾ ಅಧ್ಯಕ್ಷೆ ಸಂಧ್ಯಾ ಗಣೇಶ್ ಉದ್ಯಮಿ ಸಿ ಜೆ ಅನಿಲ್, ಕುಶಾಲನಗರ ತಾಲೂಕು ಅಧ್ಯಕ್ಷರಾದ ಬಿ ಜೆ ಅಣ್ಣಯ್ಯ, ತಾಲೂಕು ಮಹಿಳಾ ಅಧ್ಯಕ್ಷೆ ಹಾನಗಲ್ ರೂಪಾ ಗಣೇಶ್, ಮೈಸೂರು ಮಂಡ್ಯ ಹಾಸನ, ಬೆಂಗಳೂರು ಮತ್ತಿತರ ಜಿಲ್ಲೆಗಳ ಅಧ್ಯಕ್ಷರು, ಕೊಡಗು ಜಿಲ್ಲೆಯ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ