ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ನಗರದ ಪ್ರಮುಖ ವೃತ್ತಗಳಲ್ಲಿ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮುಷ್ಕರಕ್ಕೆ ಬೆಂಬಲ ಕೋರಿ ಪ್ರಚಾರ ನಡೆಸಲಾಯಿತು. ತಾಲೂಕು ಕಚೇರಿ ವೃತ್ತದಲ್ಲಿ ಪ್ರಚಾರಾಂದೋಲನ ಉದ್ಘಾಟನೆ ನಡೆಯಿತು.
ಈ ವೇಳೆ ಮಾತನಾಡಿದ ರೈತ ಹಾಗೂ ಕಾರ್ಮಿಕ ಮುಖಂಡರು, ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಜನ ವಿರೋಧಿ, 8 ಗಂಟೆ ಕೆಲಸದ ಅವಧಿ, ಖಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು, ಸಂಘಕಟ್ಟುವ ಹಕ್ಕು, ಇನ್ನಿತರ ಹಕ್ಕುಗಳನ್ನು ಇಲ್ಲವಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದುಪಡಿಸಬೇಕು, ಮತ್ತು ಇಎಸ್ಐ, ಪಿಎಫ್, ಬೋನಸ್ ಪಾವತಿಗಿರುವ ಎಲ್ಲ ವೇತನ ಮಿತಿಯನ್ನು ತೆಗೆಯಬೇಕು ಎಂದು ಆಗ್ರಹಿಸಿದರು.ದೊಡ್ಡಬಳ್ಳಾಪುರದಲ್ಲಿ ನಿರ್ಮಾಣಗೊಂಡು ಮೂರು ವರ್ಷಗಳು ಪೂರೈಸಿರುವ ಇಎಸ್ಐ ಮಲ್ಟಿ ಸ್ಪೆಷಾಲಿಟಿ 100 ಹಾಸಿಗೆಗಳ ಆಸ್ಪತ್ರೆಯನ್ನು ಶೀಘ್ರವಾಗಿ ಉದ್ಘಾಟಿಸಿ ಎಲ್ಲಾ ಕಾರ್ಮಿಕರಿಗೆ ಶೀಘ್ರವಾಗಿ ಆರೋಗ್ಯ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ತಿದ್ದುಪಡಿ ಮಸೂದೆ 2022 ವಾಪಸ್ ಪಡೆಯಬೇಕು, ಎಲ್ಲ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ನೀಡಬೇಕು. ಸಂವಿಧಾನದ ಆಶಯಗಳ ಮೇಲಿನ ದಾಳಿ ನಿಲ್ಲಿಸಬೇಕು, ದಿನದ ಕೆಲಸದ ಅವಧಿ 12 ಗಂಟೆಗೆ ವಿಸ್ತರಣೆ ಹಾಗೂ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಅವಕಾಶ ನೀಡುವುದನ್ನು ವಿರೋಧಿಸಿ, ಎಲ್ಲ ವಿಭಾಗದ ದುಡಿಯುವ ಮಹಿಳೆಯರಿಗೆ ವಾರ್ಷಿಕ 12 ದಿನ ವೇತನ ಸಹಿತ ಮುಟ್ಟಿನ ರಜೆ ನೀಡಬೇಕು, ರೈತರ ಒಪ್ಪಿಗೆ ಇಲ್ಲದೆ ಬಲವಂತದ ಭೂಸ್ವಾಧೀನ ಕೈಬಿಡಬೇಕು, ಕನಿಷ್ಠ ಕೂಲಿ ಮಾಸಿಕ 35,000 ನೀಡಬೇಕು, ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ವಿವರಿಸಿದರು.