ಕನ್ನಡಪ್ರಭ ವಾರ್ತೆ ಮಳವಳ್ಳಿಸಂಕಷ್ಟದಲ್ಲಿ ಬದುಕುತ್ತಿರುವ ರೈತರ ಸಮಸ್ಯೆಗಳನ್ನು ಬಗೆಹರಿಸಲು ಬಿಜೆಪಿ ರೈತ ಮೊರ್ಚಾ ಘಟಕ ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದು ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ತಿಳಿಸಿದರು.ತಾಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಬಿಜೆಪಿ ರೈತ ಮೋರ್ಚಾ ಘಟಕದ ವತಿಯಿಂದ ಆಯೋಜಿಸಿದ್ದ ಗ್ರಾಮ ಪರಿಕ್ರಮ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿ, 75 ವರ್ಷಗಳಿಂದಲೂ ರೈತರು ಕಷ್ಟದ ಪರಿಸ್ಥಿತಿಯಲ್ಲಿಯೇ ಬದುಕುತ್ತಿದ್ದಾರೆ.
ಹವಾಮಾನದ ಬದಲಾವಣೆಯಿಂದಾಗಿ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದರು.ರೈತರು ಭೂಮಿ ಬಿಟ್ಟು ಪಟ್ಟಣ ಹೋಗಲು ಆಗುತ್ತಿಲ್ಲ ಕರ್ನಾಟಕ ನಮ್ಮ ನೀರನ್ನು ನಾವು ಬಳಸಿಕೊಳ್ಳಬೇಕಿದೆ. ಕೃಷ್ಣೆ, ಕಾವೇರಿ ನಮ್ಮದು. ನಮ್ಮ ನೀರನ್ನು ನಾವು ಬಳಸಿಕೊಳ್ಳುವಂತಾಗಬೇಕು. ಆದರೆ, ವ್ಯವಸಾಯಕ್ಕೂ ನೀರಿಲ್ಲದಂಥಹ ಸ್ಥಿತಿ ನಮ್ಮದಾಗಿದೆ ಎಂದು ವಿಷಾದಿಸಿದರು.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಸೇರಿದಂತೆ ಎಲ್ಲ ವರ್ದವರಿಗೂ ಸೌಲಭ್ಯ ಕಲ್ಪಿಸಿದೆ. ಮೋದಿ ರೈತರಿಗೆ ಅನುಕೂಲವಾಗುವ ಹಲವು ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.ನರೇಗಾ, ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು, ಅಂಗನವಾಡಿ ಕಾರ್ಯಕರ್ತರಿಗೆ, ಸಹಾಯಕಿರಿಗೆ ಗೌರವ ಧನ ಹೆಚ್ಚಳ, ಕಾರ್ಮಿಕ ಕಲ್ಯಾಣ ನಿಧಿಗೆ ೫ ಸಾವಿರ ಕೋಟಿ ಅನುದಾನ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಎಲ್ಲ ವರ್ಗದವರ ಮನಗೆದ್ದಿರುವ ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗುವುದುನಿಶ್ಚಿತ ಎಂದು ಹೇಳಿದರು.ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ರೈತ ಮೊರ್ಚಾ ರಾಜ್ಯದೆಲ್ಲೆಡೆ ಇಂಥ ಕಾರ್ಯಕ್ರಮ ಹಮ್ಮಿಕೊಂಡು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ ಎಂದರು.ನಾವು ಹಲವೆಡೆ ವೀಕ್ಷಿಸಿದ ಸಂದರ್ಭದಲ್ಲಿ ಬರದಿಂದ ತತ್ತರಿಸಿರುವ ಜನರು ಕೇವಲ ತಿಂಗಳ ಕಬ್ಬು ಕಟಾವು ಮಾಡುತ್ತಿರುವುದು ಕಂಡು ಬಂದಿದೆ. ರಾಜ್ಯ ಸರ್ಕಾರದ ನಿರ್ಲಕ್ಷದಿಂದ ಬೆಳೆದ ಬೆಳೆ ಕೈ ಸೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಘಟಕದ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಯೋಜನೆಗಳಿಂದ ಜನರು ನೆಮ್ಮದಿ ಬದುಕು ಸಾಧಿಸುವಂತಾಗಿದೆ. ಕಿಸಾನ್ ಸಮ್ಮನ್ ಯೋಜನೆಯಡಿ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತಿರುವ ಹಿನ್ನಲೆ ರೈತರ ಸಂಕಷ್ಟಕ್ಕೆ ಸಹಾಯವಾಗುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ, ರೈತರ ಉಳಿವಿಗಾಗಿ ಬಿಜೆಪಿಯಿಂದ ಹೋರಾಟ ಅನಿವಾರ್ಯವಾಗಿದೆ.ಎಲ್ಲರೂ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬ್ಯಾಟರಾಯಗೌಡ, ಉಪಾಧ್ಯಕ್ಷ ಎಂ.ಆರ್.ಕುಮಾರಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಜೋಗಿಗೌಡ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಯುವ ಮೋರ್ಚಾ ಅಧ್ಯಕ್ಷ ಮೋಹನ್, ಪ್ರಮುಖರಾದ ಪುಟ್ಟಬುದ್ಧಿ, ರುದ್ರಯ್ಯ, ಗೀರಿಗೌಡ, ದೇವರಾಜು, ಶಕುಂತಲಾ ಮಲ್ಲಿಕ್, ಬಸವರಾಜು, ವಿಜಯ್, ಕುಮಾರ್, ಪ್ರಸಾದ್, ಶಶಿ ಮತ್ತಿತರರಿದ್ದರು.