ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ವಿದ್ಯಾರ್ಥಿಗಳು ನಿಶ್ಚಿತ ಗುರಿಯೊಂದಿಗೆ ನಿರಂತರ ಅಧ್ಯಯನ ಮಾಡಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಡಯಟ್‌ನ ಹಿರಿಯ ಉಪನ್ಯಾಸಕ ತಿಪ್ಪೇಸ್ವಾಮಿ ಹೇಳಿದರು.ತಾಲೂಕಿನ ಬಿ.ಜಿ. ಕೆರೆ ಕರ್ನಾಟಕ ಪಬ್ಲಿಕ್ ಶಾಲೆಗೆ ಶುಕ್ರವಾರ ಭೇಟಿ ನೀಡಿ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಶಿಕ್ಷಕರು ಮಕ್ಕಳ ಕಲಿಕಾ ಪ್ರಗತಿ ಗುರುತಿಸಿಕೊಂಡು ಕಲಿಕಾ ಸಾಮರ್ಥ್ಯದ ಆಧಾರದ ಮೇಲೆ ಗುಂಪುಗಳನ್ನು ರಚಿಸಿ ವಿದ್ಯಾರ್ಥಿಗೆ ತರಬೇತಿ ನೀಡಬೇಕು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವಂತೆ ಮಾರ್ಗದರ್ಶನ ಮಾಡಬೇಕು. ಇಲಾಖೆಯಿಂದ ನಿಗದಿಪಡಿಸಿರುವ 20 ಅಂಶಗಳ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ಸಲಹೆ ನೀಡಿದರು.ಪ್ರಶ್ನೆಪತ್ರಿಕೆ ಸ್ವರೂಪ, ನಿಗದಿಪಡಿಸಿರುವ ಸಮಯ, ಅಂಕಗಳ ಹಂಚಿಕೆ ಕುರಿತು ಮಾಹಿತಿ ನೀಡಬೇಕು. ಎಲ್ಲಾ ವಿಷಯಗಳಲ್ಲಿ ಮುಖ್ಯಾಂಶಗಳನ್ನು ಟಿಪ್ಪಣಿ ಮಾಡಿಕೊಂಡು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ತಿಳಿಸಿದರು.
ಉಪನ್ಯಾಸಕ ಎಸ್. ಬಸವರಾಜು ಮಾತನಾಡಿ, ಪರೀಕ್ಷೆ ಎದುರಿಸಬೇಕಾದರೆ ವಿದ್ಯಾರ್ಥಿಗಳು ಮನೆಯಲ್ಲಿ ಪ್ರತ್ಯೇಕ ವೇಳಾಪಟ್ಟಿ ರಚಿಸಿಕೊಂಡು ಕಲಿತ ವಿಷಯಗಳನ್ನು ಪುನರ್ಮನನ ಮಾಡಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಶಿಕ್ಷಕರು ವಿಶೇಷ ತರಗತಿ, ನಿಧಾನ ಗತಿ ಕಲಿಕಾ ಸಾಮರ್ಥ್ಯದ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆ, ಬರವಣಿಗೆ ಸಾಮರ್ಥ್ಯ ವೃದ್ಧಿಗೆ ಪ್ರತಿ ದಿನ ಎರಡು ಪುಟ ಬರೆಸಬೇಕು ಎಂದು ಸಲಹೆ ನೀಡಿದರು.ಪೋಷಕರ ಸಭೆ, ಮಾದರಿ ಪ್ರಶ್ನೆಪತ್ರಿಕೆ, ವಿಷಯವಾರು ಪ್ರಶ್ನೆಕೋಠಿಗಳ ಬಳಕೆ ಮಾಡಿಕೊಂಡು ಮಾರ್ಗದರ್ಶನ ಮಾಡಬೇಕು. ಪೂರ್ವಸಿದ್ಧತೆ ಮೂಲಕ ಧೈರ್ಯವಾಗಿ ಪರೀಕ್ಷೆ ಬರೆಯಲು ಮಕ್ಕಳಿಗೆ ಪ್ರೇರಣೆ ನೀಡಬೇಕು. ನಂತರ ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳ ಕಲಿಕಾ ಚಟುವಟಿಕೆಗಳನ್ನು ಪರಿಶೀಲಿಸಿ ಭವಿಷ್ಯದ ಸಾಕ್ಷರತೆಗೆ ಬುನಾದಿ ಹಾಕಬೇಕು ಎಂದು ತಿಳಿಸಿದರು.
ಮಕ್ಕಳು ಆತ್ಮ ವಿಶ್ವಾಸದಿಂದ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಅಕ್ಷರ, ಪದಗಳು, ಬಣ್ಣಗಳನ್ನು ಗುರುತಿಸಿ ಉತ್ತರ ನೀಡಿದ್ದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ವೇಳೆ ಉಪ ಪ್ರಾಂಶುಪಾಲ ಷಣ್ಮುಖಪ್ಪ, ಸಹ ಶಿಕ್ಷಕರಾದ ಶಿಕ್ಷಕರಾದ ಬಸವರಾಜು, ಸುನಿತಾ, ಎಚ್. ಮಧು, ಎಸ್. ಮಂಗಳ, ಟಿ.ಎಸ್. ತಿಮ್ಮಪ್ಪ, ತಿಪ್ಪೇಸ್ವಾಮಿ, ಕೆ.ಪಿ ಸಂಧ್ಯಾ, ಅಂಬಿಕಾ ಕೆ, ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಬಂಜಮ್ಮ, ಎಲ್.ಕೆ.ಜಿ ಶಿಕ್ಷಕಿ ಸುನಿತಾ, ಯು.ಕೆ.ಜಿ ಶಿಕ್ಷಕ ಬಸವರಾಜು, ಪ್ರಥಮ ದರ್ಜೆ ಸಹಾಯಕ ಶಶಿಧರ, ದ್ವಿತೀಯ ದರ್ಜೆ ಸಹಾಯಕ ಸಚಿನ್ ಇದ್ದರು.