ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಸೀತವಿಲಾಸ ರಸ್ತೆಯ ನಿವಾಸಿ ಹಾಗೂ ಸಿಆರ್‌ಪಿಎಫ್ ಯೋಧ ರವಿಶಂಕರ್(39) ಹೃದಯಾಘಾತದಿಂದ ನಿಧನರಾದರು. ಆದರೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ರವಿಶಂಕರ್ ಮೃತಪಟ್ಟರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.ಸಾಲಿಗ್ರಾಮ ತಾಲೂಕಿನ ಮೂಡಲಬೀಡು ಗ್ರಾಮದ ರಾಜೇಗೌಡರ ಒಬ್ಬನೇ ಮಗನಾದ ರವಿಶಂಕರ್ ಅವರು, ಅರಸೀಕೆರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಯೋಧರೊಬ್ಬರ ರಿಪೋರ್ಟ್ ಪಡೆಯಲು ಆಗಮಿಸಿದ್ದರು ಎನ್ನಲಾಗಿದೆ. ಶುಕ್ರವಾರ ಸಂಜೆ 6.15ರ ಸುಮಾರಿನಲ್ಲಿ ಸುಸ್ತು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯಲು ಹೊಳೆನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ್ದಾರೆ. ಕರ್ತವ್ಯದಲ್ಲಿ ಇದ್ದ ವೈದ್ಯರು ಯೋಧರ ಸಮಸ್ಯೆಯನ್ನು ಸರಿಯಾಗಿ ಕೇಳಿ ತಿಳಿದು ಚಿಕಿತ್ಸೆ ನೀಡದೇ ಮಾತ್ರೆ ಕೊಟ್ಟು ಕಳುಹಿಸಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ರಾತ್ರಿ 9 ಗಂಟೆ ಸುಮಾರಿನಲ್ಲಿ ಮನೆಯಲ್ಲಿ ರವಿಶಂಕರ್ ಕುಸಿದು ಬಿದ್ದಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ರವಿಶಂಕರ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.ಕೆ.ಆರ್.ನಗರ ಶಾಸಕ ರವಿಶಂಕರ್ ಅವರು ಶವಾಗಾರದಲ್ಲಿ ಯೋಧ ರವಿಶಂಕರ್ ಅವರ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿ, ಮೃತರ ಪತ್ನಿ ನಂದಿನಿ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನದ ಮಾತುಗಳನ್ನಾಡಿದರು.ತಾಲೂಕು ಆಡಳಿತ ಪರವಾಗಿ ಶಿರೆಸ್ತೇದಾರ್ ಲೋಕೇಶ್ ಹಾಗೂ ಅಭಿಜಿತ್ ಅವರು ಯೋಧ ರವಿಶಂಕರ್ ಅವರ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು.ವೈದ್ಯರು ರವಿಶಂಕರ ಅವರಿಗೆ ಅಗತ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಿದ್ದರೆ ಓರ್ವ ದೇಶ ರಕ್ಷಕನನ್ನು ಉಳಿಸಬಹುದಿತ್ತು. ಸಕಲ ಸೌಲಭ್ಯಗಳಿಂದ ಕೂಡಿರುವ ಆಸ್ಪತ್ರೆಯ ಬೇಜವಾಬ್ದಾರಿ, ವೈದ್ಯರ ನಿರ್ಲಕ್ಷ್ಯದಿಂದ ಓರ್ವ ಯೋಧನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸಾರ್ವಜನಿಕರು ಕಣ್ಣೀರು ಸುರಿಸುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಫೋಟೋ ಶೀರ್ಷಿಕೆ 1: ಕೆ.ಆರ್.ನಗರ ಶಾಸಕ ರವಿಶಂಕರ್ ಅವರು ಹೊಳೆನರಸೀಪುರದಲ್ಲಿ ಶವಗಾರದಲ್ಲಿ ಯೋಧ ರವಿಶಂಕರ್ ಅಂತಿಮ ದರ್ಶನ ಪಡೆದು ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಫೋಟೋ ಶೀರ್ಷಿಕೆ 2 : ಯೋಧ ರವಿಶಂಕರ್