ಕೊಪ್ಪಳ: ನಿರಂತರವಾಗಿ ಕೆಲಸ ಮಾಡಿದಾಗ ಕಾಮಗಾರಿಗಳು ಮುಗಿಯುತ್ತವೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ವಿಪ ಸಭಾನಾಯಕ ಎನ್.ಎಸ್. ಬೋಸರಾಜು ಹೇಳಿದರು.
ಕೃಷ್ಣ-ಕಾವೇರಿ ಬೇಸ್ ಕಾಮಗಾರಿಗಳನ್ನು ಒಂದು ವರ್ಷದಲ್ಲಿ ಮುಗಿಸುವಂತೆ ಹಾಗೂ ಕೆಲಸದ ವೇಗ ಹೆಚ್ಚಿಸುವಂತೆ ಮಾಡಲಾಗುತ್ತಿದೆ. ನಮ್ಮ ಭಾಗದಲ್ಲಿಯ ಕಾಮಗಾರಿಗಳೂ ಕಾಲಮಿತಿಯಲ್ಲಿ ನಡೆಯಬೇಕು ಎಂಬ ಉದ್ದೇಶಕ್ಕಾಗಿ ವಿವಿಧ ಕಾಮಗಾರಿಗಳ ಪರಿವೀಕ್ಷಣೆಗೆ ಬಂದಿದ್ದೇನೆ. ಕಾಲಮಿತಿಯಲ್ಲಿ ಕೆಲಸ ಮಾಡದ ಗುತ್ತಿಗೆದಾರರಿಗೆ ಪೆನಾಲ್ಟಿ ಹಾಕಲಾಗುತ್ತದೆ. ಗುತ್ತಿಗೆದಾರರು ಕೆಲಸವನ್ನು ಕಾಲಮಿತಿಯಲ್ಲಿ ಮುಗಿಸಿದಾಗ ಯಾವುದೇ ಸಮಸ್ಯೆಗಳಾಗುವುದಿಲ್ಲ. ವಿಳಂಬವಾದರೆ ಬೇರೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದರು.
ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ ಯೋಜನೆಯ ಮೊದಲ ಹಂತದ ಕಾಮಗಾರಿಯ ಜಾಕವೆಲ್ ಮತ್ತು ಪಂಪ್‌ಹೌಸ್ ವೀಕ್ಷಣೆ ಸಂದರ್ಭದಲ್ಲಿ ಸಚಿವರು ಯಾವ ತಿಂಗಳಲ್ಲಿ ಎಷ್ಟು ಕೆಲಸ ಮುಗಿಸಬೇಕು ಎಂದು ಮುಂಚಿತವಾಗಿ ತಮಲ್ಲಿ ಒಂದು ಯೋಜನೆ ಇರಬೇಕು. 18 ತಿಂಗಳಲ್ಲಿ ಮುಗಿಸುವ ಕೆಲಸವನ್ನು 6 ವರ್ಷ ಮಾಡಿದರೆ ಹೇಗೆ? ಇದನ್ನು ಆದಷ್ಟು ಬೇಗನೆ ಮುಗಿಸಿ ವರದಿ ನೀಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ರಾಘವನ್, ಮುಖ್ಯ ಎಂಜಿನಿಯರ್ ಜಗದೀಶ್ ರಾಥೋಡ್, ಅಧೀಕ್ಷಕ ಎಂಜಿನಿಯರ್ ಲಿಂಗರಾಜ್, ಇಇ ಬಿ.ಎಸ್. ಪಾಟೀಲ್, ಇಇ ಶ್ರವಣಕುಮಾರ, ಎಇಇಗಳಾದ ಜೆ.ಎನ್. ಜೋಳಗೊಂಡ, ದೇವೇಂದ್ರಪ್ಪ ಹಾಗೂ ರಷ್ಮೀ, ಜೂನಿಯರ್ ಎಂಜಿನಿಯರ್ ಪ್ರಕಾಶ ಪಾಟೀಲ್ ಸೇರಿದಂತೆ ಇತರೆ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳು ಇತರರಿದ್ದರು.