ಕನ್ನಡಪ್ರಭ ವಾರ್ತೆ ಬೆಳಗಾವಿ
ನರೇಗಾ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿ ಪೂರ್ಣಗೊಂಡು 6 ವರ್ಷವಾದರೂ ಜಿಪಂ, ತಾಪಂ, ಗ್ರಾಪಂ ಅಧಿಕಾರಿಗಳು ಬಾಕಿ ಬಿಲ್ ನೀಡುತ್ತಿಲ್ಲ ಎಂದು ಆರೋಪಿಸಿ ಹುಕ್ಕೇರಿ ತಾಲೂಕಿನ ಗುತ್ತಿಗೆದಾರರೊಬ್ಬರು ಕುಟುಂಬ ಸಮೇತರಾಗಿ ವಿಷದ ಬಾಟಲಿ ಹಿಡಿದು ಬೆಳಗಾವಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿದರು.ಹುಕ್ಕೇರಿ ತಾಲೂಕಿನ ಗುತ್ತಿಗೆದಾರ ಅಶೋಕ ಚೌಗಲಾ ಅವರು ತಮ್ಮ ತಾಯಿ ಮತ್ತು ಪತ್ನಿ ಸಮೇತರಾಗಿ ಜಿಪಂ ಕಚೇರಿ ಎದುರು ಕುಳಿತು ಧರಣಿ ನಡೆಸಿದರು. ಪ್ರತಿಭಟನೆ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಷದ ಬಾಟಲಿ ತಂದಿದ್ದರು. ಈ ವೇಳೆ ಆತ್ಮಹತ್ಯೆಗೂ ಮುಂದಾಗಿದ್ದರು. ಕೂಡಲೇ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ವಿಷದ ಬಾಟಲಿ ಕಸಿದುಕೊಂಡರು.
ಸ್ಥಳಕ್ಕೆ ಜಿಪಂ ಸಿಇಒ ಹರ್ಷಲ್ ಭೋಯರ್ ಆಗಮಿಸುತ್ತಿದ್ದಂತೆಯೇ ಅವರ ಕಾಲು ಮುಗಿದು ನನಗೆ ನ್ಯಾಯಕೊಡಿಸುವಂತೆ ಅಶೋಕ ಚೌಗಲಾ ಮನವಿ ಮಾಡಿದರು. ಕಾಮಗಾರಿ ಮಾಡಿರುವ ಕುರಿತು ಎಲ್ಲ ದಾಖಲೆಗಳನ್ನು ಜಿಪಂ ಸಿಇಒ ಅವರಿಗೆ ನೀಡಿ, ಯಾವುದೇ ಕಾರಣಕ್ಕೂ ನಾವು ಪ್ರತಿಭಟನೆ ಕೈಬಿಡುವುದಿಲ್ಲ. ಕಾಮಗಾರಿ ಬಿಲ್ ಮಂಜೂರಾತಿಗೆ ಲಂಚ ಕೇಳುತ್ತಿರುವ ಕರಗುಪ್ಪಿ ಪಿಡಿಒ ಅವರನ್ನು ಅಮಾನತುಗೊಳಿಸಬೇಕು. ನಿಮ್ಮ ಕಾಲಿಗೆ ಬೀಳುತ್ತೇನೆ. ನ್ಯಾಯಕೊಡಿಸಿ ಎಂದು ಕಾಲು ಮುಗಿದರು.ತಾನು ಮಾಡಿದ ಕಾಮಗಾರಿಗಳ ಬಿಲ್ ಫೋಟೋಸಹಿತ ಬಂದಿದ್ದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಯಮಕನರಡಿ ಕ್ಷೇತ್ರದ ಗುತ್ತಿಗೆದಾರ ಅಶೋಕ ಚೌಗಲಾ ಅವರು ಕರಗುಪ್ಪಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ₹19 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರು.
ಪ್ರತಿಭಟನಾನಿರತ ಗುತ್ತಿಗೆದಾರ ಅಶೋಕ ಚೌಗಲಾ ಸುದ್ದಿಗಾರರೊಂದಿಗೆ ಮಾತನಾಡಿ, ಕರಗುಪ್ಪಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೆ. ಬಾಕಿ ಬಿಲ್‌ಗಾಗಿ ಈಗಾಗಲೇ ₹8 ಲಕ್ಷ ಪಿಡಿಒ ಕಮೀಷನ್ ಪಡೆದಿದ್ದಾರೆ. ₹3 ಲಕ್ಷ ಕಮೀಷನ್ ಹಣವನ್ನು ಪಿಡಿಒ ಪಡೆದಿರುವ ದಾಖಲೆಗಳು ನನ್ನ ಬಳಿ ಇವೆ. ಕರಗುಪ್ಪಿ ಗ್ರಾಮದಲ್ಲಿ ₹19 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮಾಡಿದ್ದೇನೆ. ನನಗೆ ಬಾಕಿ ಬಿಲ್ ಕೊಡಿಸಬೇಕು, ಪಿಡಿಒ ಅಮಾನತು ಮಾಡಬೇಕು. ಇಲ್ಲವಾದರೆ ವಯಸ್ಸಾದ ತಾಯಿ, ಪತ್ನಿ ಜೊತೆಗೆ ಸಿಇಒ ಕಚೇರಿ ಮುಂದೆ ಧರಣಿ ನಡೆಸುತ್ತೇನೆ. ಉಪಜೀವನಕ್ಕೆ ಈಗ ಸೆಕ್ಯೂರಿಟಿ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ ಎಂದು ಅಶೋಕ ಕಣ್ಣೀರು ಹಾಕಿದರು.----------
29ಬಿಇಎಲ್2