ಸಾಧನೆಗೆ ಮಹನೀಯರ ಚರಿತ್ರೆಗಳು ಸಹಕಾರಿ- ಸುನಂದಾ ಎಮ್ಮಿ

KannadaprabhaNewsNetwork | Published : Dec 30, 2023 1:30 AM

ಸಾರಾಂಶ

ಶತಮಾನ ಕಂಡ ಸಾಹಿತಿಗಳು ಕಾರ್ಯಕ್ರಮದಲ್ಲಿ ಸಾಹಿತಿ ಸುನಂದಾ ಎಮ್ಮಿ ಮಾತನಾಡಿ ಸಾಧನೆಗೆ ಮಹನೀಯರ ಚರಿತ್ರೆಗಳು ಸಹಕಾರಿ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕನ್ನಡ ನಾಡಿನ ಈ ಪುಣ್ಯಭೂಮಿಯಲ್ಲಿ ನೂರಾರು ವರ್ಷಗಳ ಹಿಂದಿನಿಂದಲೂ ಅನೇಕ ಮಹನೀಯರು ಎಲೆಮರೆಯ ಕಾಯಿಯಂತೆ ಪ್ರಚಾರಕ್ಕೆ ಬರದೇ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ನಮ್ಮ ಈಗಿನ ಪೀಳಿಗೆಗೆ ಇಂತಹ ಮಹಾನ ವ್ಯಕ್ತಿಗಳ ಬದುಕಿನ ಚರಿತ್ರೆಗಳನ್ನು ತಿಳಿಸುವಂತಹ ಕಾರ್ಯಗಳು ನಡೆಯಬೇಕಿವೆ ಸಾಹಿತಿ ಸುನಂದಾ ಎಮ್ಮಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲೆ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಕನ್ನಡ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು 6ನೇ ತಿಂಗಳ ಕಾರ್ಯಕ್ರಮದಲ್ಲಿ ದಿ.ಡಾ.ಶಿ.ಚ.ನಂದಿಮಠ ಅವರ ಬದುಕು ಬರಹ ಕುರಿತು ಅವರು ಉಪನ್ಯಾಸ ನೀಡಿದರು.

ಸಾಧನೆಯ ಬದುಕಿಗಾಗಿ ಇಂತಹ ಮಹನೀಯರ ಚರಿತ್ರೆಗಳು ಅತ್ಯಂತ ಸಹಕಾರಿಯಾಗಿವೆ. ಯುವ ಜನಾಂಗ ಚರಿತ್ರೆಗಳನ್ನು ಅಭ್ಯಸಿಸುವಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ದಿ.ಡಾ.ಶಿ.ಚ.ನಂದಿಮಠ ಅವರು ಒಬ್ಬ ಶಿಕ್ಷಣ ತಜ್ಞ, ವಿದ್ವಾಂಸ, ಸಾಹಿತಿಯಾಗಿ ಸುಮಾರು 123 ವರ್ಷಗಳ ಹಿಂದೆ ಈ ಕನ್ನಡ ನಾಡಿನಲ್ಲಿ ಅತ್ಯದ್ಭುತ ಸೇವೆ ಸಲ್ಲಿಸಿದ್ದರು. ಅನೇಕ ಪ್ರಬಂಧಗಳು, ಸಾಹಿತ್ಯಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಅಪಾರವಾಗಿ ಶ್ರಮಿಸಿದ ಅವರು ವ್ಯಕ್ತಿಯಾಗಿರದೇ ಶಕ್ತಿಯಾಗಿ, ಚೈತನ್ಯದ ಚಿಲುಮೆಯಾಗಿ ನಮ್ಮ ಸಮಾಜಕ್ಕೆ ಬೆಳಕು ತೋರುವ ದೀಪ ಸ್ತಂಭವಾಗಿದ್ದರು. ಇಂತಹ ಅನೇಕ ಮಹನೀಯರ ಸಾಧನೆಯ ಬದುಕಿನ ಕುರಿತು ಬೆಳಕು ಚೆಲ್ಲುವ ಕರ್ಯಗಳು ನಿರಂತರವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಪ್ರವಾಹ ವಿರುದ್ಧ ಹೋರಾಟ ನಡೆಸಿ ಜಯ ಗಳಿಸಿದಾಗ ಮಾತ್ರ ಅದು ಸಾಧನೆಯಾಗುವುದು. ಅಂತಹ ಅನೇಕರು ಈ ಕನ್ನಡ ನಾಡಿನಲ್ಲಿ ಸಾಧಿಸಿ ನಮಗೆಲ್ಲಾ ಬದುಕಿನ ಸಾಧನೆಯ ದಾರಿಗಳನ್ನು ತೋರಿಸಿದ್ದಾರೆ ಎಂದರು.

ಅತಿಥಿಯಾಗಿ ಕಸಾಪ ಯರಗಟ್ಟಿ ತಾಲೂಕು ಅಧ್ಯಕ್ಷ ಟಿ.ಎಂ.ಕಾಮಣ್ಣವರ, ಬೆಳಗಾವಿ ತಾಲೂಕು ಅಧ್ಯಕ್ಷ ಸುರೇಶ ಹಂಜಿ ಆಗಮಿಸಿದ್ದರು. ಹಿರಿಯ ಸಾಹಿತಿ ಸಾ.ರಾ. ಸುಳಕುಡೆ, ಹಿರಿಯ ಪತ್ರಕರ್ತ ಮುರಗೇಶ ಶಿವಪೂಜಿ, ಡಾ.ಸೋಮಶೇಖರ ಹಲಸಗಿ, ಜ್ಯೋತಿ ಬಾದಾಮಿ, ಪ್ರತಿಭಾ ಕಳ್ಳಿಮಠ, ಶೈಲಜಾ ಬಿಂಗೆ, ಬಿ.ಡಿ.ಮಠಪತಿ ಇದ್ದರು. ಪ್ರಕಾಶ ಬಸಪ್ರಭು ಅವಲಕ್ಕಿ ಸ್ವಾಗತಿಸಿದರು. ಎಂ.ವೈ ಮೆಣಸಿನಕಾಯಿ ಮಾತನಾಡಿದರು. ಆಕಾಶ್ ಥಬಾಜ ಕಾರ್ಯಕ್ರಮ ನಿರೂಪಿಸಿದರು.

Share this article