ನಿಮ್ಮ ಕಾಲ ಮೇಲೆ ನಿಲ್ಲಿ, ಸ್ವಾಭಿಮಾನಿ ಜೀವನ ನಡೆಸಿ

KannadaprabhaNewsNetwork | Published : Dec 30, 2023 1:30 AM

ಸಾರಾಂಶ

ವಿದ್ಯಾರ್ಥಿನಿಯರು ಪಾಲಕರ ನಿರೀಕ್ಷೆಯನ್ನು ಹುಸಿಗೊಳಿಸದೆ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಂತ ಕಾಲ ಮೇಲೆ ನಿಲ್ಲಬೇಕು. ಸ್ವಾಭಿಮಾನಿ ಜೀವನ ನಡೆಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿದ್ಯಾರ್ಥಿನಿಯರು ಪಾಲಕರ ನಿರೀಕ್ಷೆಯನ್ನು ಹುಸಿಗೊಳಿಸದೆ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಂತ ಕಾಲ ಮೇಲೆ ನಿಲ್ಲಬೇಕು. ಸ್ವಾಭಿಮಾನಿ ಜೀವನ ನಡೆಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಉಷಾತಾಯಿ ಗೋಗಟೆ ಹೆಣ್ಣು ಮಕ್ಕಳ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ತಂದೆ-ತಾಯಿ ಬಹಳಷ್ಟು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಮಕ್ಕಳ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅದಕ್ಕೆ ತಕ್ಕಂತೆ ಓದಬೇಕು. ಅವಕಾಶಗಳು ಸಾಕಷ್ಟಿವೆ, ಶಿಕ್ಷಣಕ್ಕೆ ಬೇಕಾದಷ್ಟು ಪ್ರೋತ್ಸಾಹವೂ ಇದೆ. ಪ್ರತಿ ಮಗುವೂ ಓದಬೇಕು, ಸ್ವಂತ ಕಾಲಮೇಲೆ ನಿಲ್ಲುವಂತಾಗಬೇಕೆನ್ನುವುದೇ ಸರಕಾರದ ಉದ್ದೇಶ ಎಂದು ತಿಳಿಸಿದರು.

ನಾನು ಹಳ್ಳಿಯಲ್ಲಿ ಕಲಿತು, ಸರಕಾರಿ ಬಸ್‌ನಲ್ಲಿ ಓಡಾಡಿ ಇಂದು ರಾಜ್ಯದ ಮಗಳಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಈಗ ಹಿಂದೆಂದಿಗಿಂತ ಹೆಚ್ಚು ಅವಕಾಶಗಳಿವೆ. ಚಂದ್ರಯಾನದಲ್ಲೂ ಹೆಣ್ಣುಮಕ್ಕಳು ಸಾಧನೆ ಮಾಡಿದ್ದಾರೆ. ನಾಲ್ಕು ಜನರಿಗೆ ಉಪಕಾರ ಮಾಡಬೇಕು. ಯಾವುದೇ ಕ್ಷೇತ್ರ ಆಯ್ದುಕೊಂಡರೂ ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು. ತುಳಿಯುವವರು ಸಾಕಷ್ಟಿರುತ್ತಾರೆ. ಆದರೆ, ಅದ್ಯಾವುದಕ್ಕೂ ಜಗ್ಗದೆ ಮನಸ್ಸಿದ್ದಲ್ಲಿ ಮಾರ್ಗ ಎನ್ನುವುದನ್ನು ನೆನಪಿಟ್ಟುಕೊಂಡು ಮುನ್ನಡೆಯಿರಿ ಎಂದು ಸಲಹೆ ನೀಡಿದರು.

ಅಮೇರಿಕಾಕ್ಕೆ ಸ್ವಾತಂತ್ರ್ಯ ಬಂದು 300 ವರ್ಷಗಳಾಗಿವೆ. ಭಾರತ ಸ್ವತಂತ್ರವಾಗಿ ಕೇವಲ 76 ವರ್ಷವಾಗಿದೆ. ಆದರೆ, ಅಲ್ಪಾವಧಿಯಲ್ಲೇ ಅಮೋಘ ಸಾಧನೆ ಮಾಡಿದೆ. ರೈತರು, ಸೈನಿಕರ ಸೇವೆಯಿಂದ ಭಾರತ ಇಂದು ಇಷ್ಟೊಂದು ಬೆಳವಣಿಗೆ ಸಾಧಿಸಿದೆ. ನೀವೂ ಗುರಿಯೊಂದಿಗೆ ಮುನ್ನಡೆದು ದೇಶದ ಆಸ್ತಿಗಳಾಗಿ ಎಂದು ಶುಭ ಹಾರೈಸಿದರು.

ಬೆಳಗಾಂ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಶ್ರೀನಿವಾಸ ಶಿವಣಗಿ, ಉಪಾಧ್ಯಕ್ಷ ಸುಧೀರ ಕುಲಕರ್ಣಿ, ಶಾಲಾ ಆಡಳಿತ ಮಂಡಳಿ ಚೇರಮನ್ ಚಿಂತಾಮಣರಾವ್ ಬ್ರಹ್ಮೋಪಾಧ್ಯಾಯ, ಮುಖ್ಯಾಧ್ಯಾಪಕ ಎಂ.ಕೆ. ಮಾದರ್, ಡಾ.ಸ್ವಾತಿ ಮಾವಿನಕಟ್ಟಿಮಠ, ಕಿರಣ ಮಾಲಿಪಾಟೀಲ, ಸರಸ್ವತಿ ದೇಸಾಯಿ, ಸುಲೋಚನಾ ಐವಾಳೆ ಮೊದಲಾದವರು ಇದ್ದರು.

Share this article