ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪಶೌಚಾಲಯ ಗುಂಡಿಗಳ ಸ್ವಚ್ಛತೆ ಪೌರಕಾರ್ಮಿಕರಿಂದ ಮಾಡಿಸದೆ ಯಂತ್ರದ ಸಹಾಯದಿಂದ ಮಾಡಿಸಬೇಕು ಎಂಬ ಕಾನೂನು ಜಾರಿಯಾಗಿ ವರ್ಷಗಳೇ ಕಳೆದಿವೆ. ರಾಜ್ಯದ ಕೆಲವು ಕಡೆಗಳಲ್ಲಿ ಶಾಲೆಗಳು ಸೇರಿದಂತೆ ಅಲ್ಲಿನ ಶೌಚಾಲಯ ಗುಂಡಿಗಳನ್ನು ಮಾನವರಿಂದ ಮಕ್ಕಳಿಂದ ಮಾಡಿಸುವ ಪ್ರಕರಣಗಳು ವರದಿಯಾಗಿವೆ. ಆದರೆ ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿ ಶೌಚಾಲಯ ಗುಂಡಿ ಸ್ವಚ್ಛಗೊಳಿಸುವ ಯಂತ್ರ ಲಭ್ಯವಿದ್ದರೂ ಬಳಕೆಯಾಗದೇ ಇರುವುದು ವಿಪರ್ಯಾಸ.
ಸೋಮವಾರಪೇಟೆ ತಾಲೂಕಿಗೆ 30 ಲಕ್ಷ ರು. ಮೌಲ್ಯದ ಶೌಚ ಗುಂಡಿ ಸ್ವಚ್ಛಗೊಳಿಸುವ ಯಂತ್ರ ಮಂಜೂರಾಗಿ ಮೂರು ವರ್ಷಗಳೇ ಕಳೆದಿವೆ. ಈ ವಾಹನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮೂರು ವರ್ಷಗಳಿಂದ ನಿರುಪಯುಕ್ತವಾಗಿ ನಿಂತಿದೆ. ಕಾರಣ ಈ ವಾಹನ ಚಲಾಯಿಸಲು ಚಾಲಕ ಹುದ್ದೆ ಹಾಗೂ ಟ್ಯಾಂಕ್ ನಿರ್ವಹಣೆ ಮಾಡುವ ಕ್ಲೀನರ್ ಹುದ್ದೆಗೆ ನೇಮಕಾತಿಯೇ ಆಗಿಲ್ಲ.ಈ ಕಾರಣದಿಂದ ಬಳಕೆಗಿಲ್ಲದ ವಾಹನ ಕಚೇರಿ ಆವರಣದಲ್ಲಿ ತುಕ್ಕು ಹಿಡಿಯುತ್ತಿದೆ. ಈ ವಾಹನವನ್ನು ಯಾವುದಾದರೂ ಗ್ರಾಮ ಪಂಚಾಯಿತಿಗೆ ನಿರ್ವಹಣೆಗೆ ವಹಿಸಿ ಸಿಬ್ಬಂದಿ ನೇಮಿಸಿದ್ದರೆ ಅದರಿಂದ ತಾಲೂಕು ಪಂಚಾಯಿತಿಗೆ ಆದಾಯವೂ ಬರುತ್ತಿತ್ತು. ಆದರೆ ಮೂರು ವರ್ಷಗಳಿಂದ ನಿಂತಲ್ಲಿಯೇ ಇರುವ ಕಾರಣ ಈ ವಾಹನ ಈಗ ಬಳಕೆಗೆ ಯೋಗ್ಯವಾಗಿರುವುದು ಸಂದೇಹ ಹುಟ್ಟಿಸಿದೆ.
ಈಗಾಗಲೇ ಸರ್ಕಾರ ಸಾಕಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಶೌಚಾಲಯ ಗುಂಡಿ ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಖಾಸಗಿ ಯಂತ್ರಗಳನ್ನು ಬಾಡಿಗೆಗೆ ದುಬಾರಿ ಬಾಡಿಗೆಗೆ ಪಡೆದು ಕೆಲಸ ನಿರ್ವಹಿಸುತ್ತಿದೆ. ಹೀಗಿರುವಾಗ ಸರ್ಕಾರದಿಂದಲೇ ಮಂಜುರಾದ ವಾಹನ ಇಚ್ಛಶಕ್ತಿ ಕೊರತೆಯಿಂದ ನಿರುಪಯುಕ್ತವಾಗಿ ಮೂಲೆಸೇರಿರುವುದು ಇಲ್ಲಿ ಕಂಡುಬಂದಿದೆ.--------ಶೌಚ ಗುಂಡಿ ತೆರವಿಗೆ ಕಾರ್ಮಿಕರ ಬಳಕೆಗೆ ನಿಷೇಧ ಇದೆ. ಸಾರ್ವಜನಿಕರು ಮನೆಗಳಲ್ಲಿ ನಿರ್ಮಿಸಿದ ಶೌಚಾಲಯದ ಗುಂಡಿ ತುಂಬಿದಾಗ ಅದನ್ನು ವಿಲೇವಾರಿ ಸ್ಥಳವಕಾಶದ ಕೊರತೆ ಒಂದೆಡೆಯಾದರೆ ಮತ್ತೊಂದಡೆ ಸರ್ಕಾರಿ ಶೌಚಗುಂಡಿಗಳೂ ತುಂಬಿದಾಗ ಸ್ವಚ್ಛಗೊಳಿಸುವ ವಾಹನವಿಲ್ಲದೆ ತಾಲೂಕಿನಲ್ಲಿ ಸಂಕಷ್ಟ ಎದುರಾಗಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಪಿಕಲ್ ಪ್ಲಾಂಟ್ ಕಾಮಗಾರಿ ಪ್ರಗತಿಯಲ್ಲಿದ್ದು, ಇದಕ್ಕೆ ಪೂರಕವಾಗಿ ಸುಧಾರಿತ ವಾಹನ ವ್ಯವಸ್ಥೆಯನ್ನು ಸರ್ಕಾರ ಕೂಡಲೆ ಒದಗಿಸಬೇಕು. ಇಲ್ಲಿನ ಜನತೆ ದುಬಾರಿ ಹಣ ತೆತ್ತು ಖಾಸಗಿ ಪರಿಸ್ಥಿತಿ ಎದುರಾಗಿದೆ.
-ಪಿ.ಎಫ್.ಸಬಾಸ್ಟೀನ್, ಸುಂಟಿಕೊಪ್ಪ ಗ್ರಾ.ಪಂ.ಸದಸ್ಯ.-----
ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯಾಗಿದೆ ಅಲ್ಲದೆ ಹೋಬಳಿ ಕೇಂದ್ರವಾಗಿದ್ದು 7 ಒಳಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದೆ. ಪಟ್ಟಣದಲ್ಲಿ ಅಂದಾಜು 3,200 ಕ್ಕೂ ಮಿಕ್ಕಿ ವಾಸದ ಮನೆಗಳು ಇವೆ ಶೌಚಾಲಯ ಗುಂಡಿ ಸ್ವಚ್ಚಗೊಳಿಸುವ ಯಂತ್ರಕ್ಕೆ ಬಹಳ ಬೇಡಿಕೆ ಇದೆ. ಸರ್ಕಾರಿ ಯಂತ್ರ ಬಳಕೆಗಿಲ್ಲದೆ ಜನ ಖಾಸಗಿ ವಾಹನಗಳಿಗೆ ದುಬಾರಿ ದರ ತೆತ್ತು ಗುಂಡಿ ಸ್ವಚ್ಛಗೊಳಿಸಬೇಕಾದ ಸ್ಥಿತಿ ಒದಗಿದೆ. ಸಂಬಂಧಿಸಿದ ಅಧಿಕಾರಿಗಳು ವಾಹನವನ್ನು ಒದಗಿಸುವ ಭರವಸೆ ನೀಡಬೇಕು.-ಪಿ.ಆರ್.ಸುನಿಲ್ ಕುಮಾರ್, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷ.
---------ವಾಹನ ಸೇವೆಗೆ ಸಿದ್ದವಾಗಿದ್ದು, ಚಾಲಕರ ನೇಮಕಾತಿ ಹಾಗೂ ಸಿಬ್ಬಂದಿ ನೇಮಕಾತಿ ವಿಳಂಬದಿಂದಾಗಿ ವಾಹನ ಉಪಯೋಗಕ್ಕೆ ಹಿನ್ನಡೆಯುಂಟಾಗಿದೆ. ಶೀಘ್ರದಲ್ಲಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿ ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮ ವಹಿಸಲಾಗುವುದು.
-ಜಯಣ್ಣ, ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ.